ಬೆಳಗಾವಿಯ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾದ ಪ್ರಕರಣದ ಸಿಐಡಿ ತನಿಖೆ ವೇಗವಾಗಿ ನಡೆಯುತ್ತಿದೆ. ಸದ್ಯ ವಿಧಾನ ಪರಿಷತ್ತಿನ ಸರಕಾರದ ದೃಶ್ಯ ವಾಹಿನಿಯ ಅಸಲಿ ವಿಡಿಯೋ ಸಿಐಡಿಗೆ ಲಭ್ಯವಾಗಿದ್ದು, ಈ ವಿಡಿಯೋದಲ್ಲಿ ಸಿ.ಟಿ ರವಿ ಅವರು ಏಳು ಬಾರಿ ಹೆಬ್ಬಾಳ್ಕರ್ ಅವರಿಗೆ ನಿಂದಿಸಿರುವುದು ಬಹಿರಂಗವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಗಳಲ್ಲಿ ವಿಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದರು. ತಾನು ಸಚಿವೆಯನ್ನು ಹೊರತು ನಿಂದಿಸಿಲ್ಲ ಎಂದು ವಾದಿಸಿದ್ದ ರವಿ ಅವರು, ತಾನು ನಿಂದಿಸಿದ್ದಕ್ಕೆ ಅಸಲಿ ವಿಡಿಯೋವೇ ಇಲ್ಲ ಎಂದು ಹೇಳಿದ್ದರು. ಆದರೆ, ಸದನದಲ್ಲಿನ ಸರ್ಕಾರಿ ಟಿವಿಯಲ್ಲಿನ ವಿಡಿಯೋವೇ ಸಿಐಡಿಗೆ ಸಿಕ್ಕಿದೆ. ಇದು ಸಿಟಿ ರವಿ ಅವರಿಗೆ ಮುಳುವಾಗುವ ಸಾಧ್ಯತೆ ಇದೆ.
4 ಗಂಟೆಯ ವಿಡಿಯೋ ಸಿಐಡಿಗೆ ಲಭ್ಯ
ಸಿ.ಟಿ ರವಿ ಲಕ್ಷ್ಮೀ ಹೆಬ್ಬಾಳ್ಕರ್ ಘಟನೆಯ ಕುರಿತು ವಿಡಿಯೋ ಆಡಿಯೋ ದಾಖಲೆ ನೀಡುವಂತೆ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ ಸಿಐಡಿ ಮನವಿ ಮಾಡಿತ್ತು. ಸದ್ಯ 4 ಗಂಟೆ ವಿಡಿಯೋವನ್ನು ಇಲಾಖೆಯಿಂದ ನೀಡಲಾಗಿದೆ. ಇದರಲ್ಲಿ 7 ಬಾರಿ ಅವಾಚ್ಯವಾಗಿ ನಿಂದಿಸಿರುವುದು ತಿಳಿದುಬಂದಿದೆ. ಮುಂದುವರಿದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಐಡಿ ರವಾನಿಸಿದ್ದು, ಆ ವಿಡಿಯೋದಲ್ಲಿ ಕೇಳಿ ಬರುವ ದನಿ ರವಿ ಅವರದ್ದೇ, ಅಲ್ಲವೇ ಎಂದು ಖಚಿತಪಡಿಸಿ ಕೊಳ್ಳಲು ನಿರ್ಧಾರ ಮಾಡಿದೆ.
ಸಾಕ್ಷಿ ಹೇಳಿಕೆ ದಾಖಲಿಸಿದ ಇಬ್ಬರು ಎಂಎಲ್‌ಸಿಗಳು
ಕಾಂಗ್ರೆಸ್‌ನ ಇಬ್ಬರು ವಿಧಾನ ಪರಿಷತ್ ಸದಸ್ಯರು ಗುರುವಾರ ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಪರಿಷತ್ ಸದಸ್ಯರಾದ ಕಾಂಗ್ರೆಸ್‌ನ ಉಮಾಶ್ರೀ ಮತ್ತು ನಾಗರಾಜ್ ಯಾದವ್ ಅವರು ಸಿಐಡಿ ಅಧಿಕಾರಿಗಳಿಗೆ ಪ್ರಕರಣ ಸಂಬಂಧ ವಿಸ್ತೃತ ಮಾಹಿತಿ ನೀಡಿ, ರವಿ ಅವರು ಕಲಾಪದ ವೇಳೆ ಅಶ್ಲೀಲ ಪದ ಬಳಸಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ನಿಂದಿಸಿದ್ದು ನಿಜವೆಂದು ಹೇಳಿಕೆ ದಾಖಲಿಸಿದ್ದಾರೆ.