Homeಕರ್ನಾಟಕಹಿಂದೂ ಧರ್ಮ ಬಿಜೆಪಿಯವರ ಮನೆ ಆಸ್ತಿಯೇ?: ಡಿ ಕೆ ಶಿವಕುಮಾರ್ ವಾಗ್ದಾಳಿ

ಹಿಂದೂ ಧರ್ಮ ಬಿಜೆಪಿಯವರ ಮನೆ ಆಸ್ತಿಯೇ?: ಡಿ ಕೆ ಶಿವಕುಮಾರ್ ವಾಗ್ದಾಳಿ

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಮೇಲೆ ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ದಾಳಿ ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಮಂಗಳವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಬಿಜೆಪಿ ಗೂಂಡಾಗಳು ಕೈಯಲ್ಲಿ ಮಂತ್ರಾಕ್ಷತೆ ಹಿಡಿದಿದ್ದರೆ, ಬಗಲಲ್ಲಿ ದೊಣ್ಣೆ ಹಿಡಿದಿದ್ದಾರೆ. ಈ ಗೂಂಡಾಗಳ ಗೊಡ್ಡು ಬೆದರಿಕೆಗೆ ಯಾವುದೇ ಕಾಂಗ್ರೆಸಿಗ ಹೆದರುವುದಿಲ್ಲ” ಎಂದರು.

ಅಸ್ಸಾಂನಲ್ಲಿ ಕಳೆದೆರಡು ದಿನಗಳಿಂದ ಈ ಯಾತ್ರೆಯನ್ನು ತಡೆಯಲಾಗಿದೆ. ಇಂದು ಗುವಾಹಟಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಆಮೂಲಕ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಿದೆಯೋ ಸತ್ತಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಅಸ್ಸಾಂ ಸರ್ಕಾರದ ಈ ನಡೆಯನ್ನು ನಾವೆಲ್ಲರೂ ಖಂಡಿಸುತ್ತೇವೆ” ಎಂದು ಹೇಳಿದರು.

“ರಾಹುಲ್ ಗಾಂಧಿ ಅವರು ದೇಶದ ಮನಸ್ಸುಗಳನ್ನು ಒಗ್ಗೂಡಿಸಲು, ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಅವರಿಗೆ ನ್ಯಾಯ ಒದಗಿಸಲು ಮಣಿಪುರದಿಂದ ಮುಂಬೈವರೆಗೂ ಎರಡನೇ ಹಂತದ ಭಾರತ ಜೋಡೋ ನ್ಯಾಯ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಯಾತ್ರೆಯಿಂದ ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿದೆ. ಹೀಗಾಗಿ ಅವರ ಯಾತ್ರೆಯನ್ನು ತಡೆಯುತ್ತಿದ್ದಾರೆ” ಎಂದು ಆರೋಪಿಸಿದರು.

ಧರ್ಮದ ವಿಚಾರದಲ್ಲಿ ಬಿಜೆಪಿ ರಾಜಕಾರಣ

“ಬಿಜೆಪಿಯವರು ಧರ್ಮದ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಅವರು ಒಂದು ಕೈಯಲ್ಲಿ ಮಂತ್ರಾಕ್ಷತೆ ಹಿಡಿದರೆ, ಮತ್ತೊಂದು ಕೈಯಲ್ಲಿ ದೊಣ್ಣೆ ಹಿಡಿದು ಜನಪರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ನೀವು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದರೂ ನಾವು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ, ಶಿವಕುಮಾರ ಹೆಸರಲ್ಲಿ ಶಿವ ಹಾಗೂ ಷಣ್ಮುಗ ಇದ್ದಾರೆ. ಹರಿಪ್ರಸಾದ್ ಅವರ ಹೆಸರಲ್ಲಿ ಹರಿ ಇದ್ದಾನೆ. ಕೃಷ್ಣ ಭೈರೇಗೌಡರ ಹೆಸರಲ್ಲಿ ಕೃಷ್ಣ ಇದ್ದಾನೆ. ಹಿಂದೂ ಧರ್ಮ ನಿಮ್ಮ ಮನೆ ಆಸ್ತಿಯೇ?” ಎಂದು ವಾಗ್ದಾಳಿ ನಡೆಸಿದರು.

“ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಬಲಿಷ್ಠವಾಯಿತು. ಇದನ್ನು ಬಿಜೆಪಿ ಸಹಿಸಲು ಆಗುತ್ತಿಲ್ಲ. ನಾವೆಲ್ಲರೂ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆದ ಭಾರತ ಜೋಡೋ ಯಾತ್ರೆ ವೇಳೆ ರಾಜ್ಯದಲ್ಲಿ ಚಾಮರಾಜನಗರದಿಂದ ರಾಯಚೂರಿನವರೆಗೂ ಹೆಜ್ಜೆ ಹಾಕಲಾಯಿತು. ಇದರ ಯಶಸ್ಸಿನಿಂದಾಗಿ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಬಲಿಷ್ಠವಾದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಸೇವೆ ಅವಕಾಶ ಸಿಕ್ಕಿದೆ. ರಾಹುಲ್ ಗಾಂಧಿ ಅವರ ಯಾತ್ರೆಯಿಂದ ಬಿಜೆಪಿಯವರಿಗೆ ಭಯ ಹುಟ್ಟಿದೆ” ಎಂದರು.

ಸದ್ಯದಲ್ಲೇ ಕಾರ್ಯಕರ್ತರ ಸಮಾವೇಶದ ದಿನ ಪ್ರಕಟ

“ಇದೇ 26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಧ್ವಜಾರೋಹಣ ಮಾಡಲು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. 21ರಂದು ನಡೆಯಬೇಕಿದ್ದ ಕಾರ್ಯಕರ್ತರ ಸಮಾವೇಶವನ್ನು ಮುಂದೂಡಲಾಗಿದ್ದು, ಪಕ್ಷದ ಅಧ್ಯಕ್ಷರ ಜತೆ ಮಾತನಾಡಿ ಶೀಘ್ರದಲ್ಲೇ ಸಮಾವೇಶದ ದಿನಾಂಕ ಪ್ರಕಟಿಸುತ್ತೇವೆ” ಎಂದರು.

“ಲೋಕಸಭೆ ಚುನಾವಣೆ ನಂತರ ಪಾಲಿಕೆ ಹಾಗೂ ಇತರೆ ಚುನಾವಣೆ ನಡೆಯುತ್ತದೆ. ನಿಮ್ಮ ಸಂಘಟನೆ ನೋಡಿ ನಾವು ಪಾಲಿಕೆ ಚುನಾವಣೆಯಲ್ಲಿ ನಿಮಗೆ ಅವಕಾಶ ನೀಡುತ್ತೇವೆ. ನಿಮ್ಮನ್ನು ಶಕ್ತಿಶಾಲಿಯಾಗಿ ಬೆಳೆಸುವ ಕೆಲಸ ಮಾಡುತ್ತೇವೆ” ಎಂದರು.

ಎಲ್ಲರ ಅಭಿಪ್ರಾಯ ಸ್ವೀಕಾರ

ನಿಗಮ ಮಂಡಳಿ ನೇಮಕದಲ್ಲಿ ನಮ್ಮ ಅಭಿಪ್ರಾಯ ಪಡೆದಿಲ್ಲ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಎಲ್ಲರ ಅಭಿಪ್ರಾಯವನ್ನು ಪಡೆದು, ಮಾರ್ಗಸೂಚಿ ನಿಗದಿ ಮಾಡಿದ್ದು, ಅದರಂತೆ ಎಲ್ಲರಿಗೂ ಅಧಿಕಾರ ಹಂಚಲಾಗುವುದು” ಎಂದು ತಿಳಿಸಿದರು.

ಸಚಿವರಾದ ಕೆ ಜೆ ಜಾರ್ಜ್, ಕೃಷ್ಣ ಬೈರೇಗೌಡ, ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಸಚಿವ ಎಚ್ ಎಂ ರೇವಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments