ಶಾಲೆಗಳಲ್ಲಿ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಪೊಲೀಸರೊಂದಿಗೆ ಮಾತನಾಡಿದ್ದು, ಎಲ್ಲೆಡೆ ಭದ್ರತೆ ಒದಗಿಸಿ, ಎಚ್ಚರಿಕೆಯಿಂದ ಇರಬೇಕು. ಬೆದರಿಕೆ ಸುದ್ದಿ ಮಾಡಿದವರನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ದಿ ಕೆಂಗಲ್ ಹನುಮಂತಯ್ಯ ಅವರ ಪುಣ್ಯ ತಿಥಿಯ ಅಂಗವಾಗಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
“ಪೋಷಕರು ಆತಂಕ ಪಡಬಾರದು. ಈ ಬಗ್ಗೆ ವರದಿ ಪಡೆಯಲಾಗಿದೆ. ಈ ರೀತಿ ಹಿಂದೆಯೂ ಮಾಡಿದ್ದಾರೆ. ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು”ಎಂದರು.
“ಕೆಂಗಲ್ ಹನುಮಂತಯ್ಯ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದರು. ಕರ್ನಾಟಕ ಏಕೀಕರಣಕ್ಕೆ ಹೋರಾಡಿದರು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ವಿಧಾನಸೌಧವನ್ನು ಕಟ್ಟಿದರು. ಅವರೇ ಸ್ವತ ನಿಂತು ಉಸ್ತುವಾರಿ ವಹಿಸಿದ್ದರು. ಇಡೀ ದೇಶದಲ್ಲಿಯೇ ಸುಂದರವಾದ ವಿಧಾನಮಂಡಲದ ಕಟ್ಟಡ ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದರು.
ಆತಂಕ ಪಡುವುದು ಬೇಡ: ಡಿ ಕೆ ಶಿವಕುಮಾರ್
ಬೆಂಗಳೂರಿನ 15 ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದಿರುವ ವಿಚಾರವಾಗಿ ಸಾರ್ವಜನಿಕರು ಆತಂಕ ಪಡುವುದು ಬೇಡ. ಹುಸಿ ಬೆದರಿಕೆ ಹಾಕಿದವರನ್ನು 24 ಗಂಟೆಯೋಳಗೆ ಪತ್ತೆ ಮಾಡಲಾಗುವುದು. ಪೊಲೀಸರು ಈಗಾಗಲೆ ಕಾರ್ಯಚರಣೆ ನಡೆಸುತ್ತಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಹುಸಿ ಬಾಂಬ್ ಕರೆ ಪಡೆದಿದ್ದ ನೀವ್ ಅಕಾಡೆಮಿಗೆ ಭೇಟಿ ನೀಡಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಕಳೆದ ಒಂದು ವರ್ಷದ ಹಿಂದೆಯೂ ಹೀಗೆ ಆಗಿತ್ತು. ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿರುವ ಸುದ್ದಿ ತಿಳಿದ ಕೂಡಲೆ ಗಾಬರಿಯಾಯಿತು. ನನಗೆ ಪರಿಚಯವಿರುವ ಕೆಲವು ಶಾಲೆಗಳಿಗೆ ಹೀಗೆ ಇ- ಮೇಲ್ ಸಂದೇಶದ ಮೂಲಕ ಬೆದರಿಕೆ ಬಂದಿದೆ. ಪೋಲಿಸ್ ಆಯುಕ್ತರು ಈಗಾಗಲೆ ಸುದ್ದಿಗೋಷ್ಠಿ ನಡೆಸಿ ಇದು ಹುಸಿ ಬಾಂಬ್ ಬೆದರಿಕೆ ಎಂದು ಮಾಹಿತಿ ನೀಡಿದ್ದಾರೆ. ಪೋಷಕರು ಆತಂಕದಲ್ಲಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಧೈರ್ಯದಿಂದ ಇರಬೇಕು” ಎಂದರು.
“ಈಗಾಗಲೆ ಬಾಂಬ್ ನಿಷ್ಕ್ರಿಯದಳ ಸ್ಥಳ ಪರಿಶೀಲನೆ ನಡೆಸಿದೆ. ಪೊಲೀಸ್ ಭದ್ರತೆ ಇರುವ ಕಾರಣ ನಮ್ಮ ಮನೆ ಹತ್ತಿರ ಹೀಗೆ ಆಗುವ ಸಾಧ್ಯತೆ ಕಡಿಮೆ. ಆದರೂ ಇದು ಪ್ರಮುಖ ಪ್ರದೇಶವಾದರಿಂದ ಸ್ವಲ್ಪ ಎಚ್ಚರದಿಂದ ಇರಬೇಕು. ಬೆಂಗಳೂರು ಜನತೆಗೆ ಯಾವ ಆತಂಕ ಬೇಡ ಕೆಲವು ದುಷ್ಕರ್ಮಿಗಳಿಂದ ಈ ಬೆದರಿಕೆ ಕರೆ ಬಂದಿದ್ದು, 24 ಗಂಟೆಯೊಳಗೆ ಆರೋಪಗಳನ್ನು ಪತ್ತೆ ಹಚ್ಚುತ್ತೇವೆ” ಎಂದು ಹೇಳಿದರು.
ಬೆಂಗಳೂರು ಹಬ್ಬ ನಡೆಯುವ ಸಂದರ್ಭದಲ್ಲೆ ಹೀಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಕೇಳಿದಾಗ, “ಕೆಲವರು ಕಿಡಿಗೇಡಿಗಳು ಈ ರೀತಿ ಚೇಷ್ಟೆ ಮಾಡುತ್ತಾರೆ, ಹಬ್ಬ ಅದರ ಪಾಡಿಗೆ ಅದು ನಡೆಯುತ್ತದೆ” ಎಂದು ತಿಳಿಸಿದರು.
ಸುಳ್ಳು ಸುದ್ದಿ ಕೊಟ್ಟವರನ್ನು ಪತ್ತೆ ಹಚ್ಚುತ್ತೇವೆ: ಮಧು ಬಂಗಾರಪ್ಪ
ಬಾಂಬ್ ಬೆದರಿಕೆಯ ಸುಳ್ಳು ಸುದ್ದಿಯನ್ನು ಯಾರು ಕೊಟ್ಟಿದ್ದಾರೋ ಅವರನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ನಾವೂ ಕೂಡ ಪೋಷಕರಿಗೆ ಮನವಿ ಮಾಡುತ್ತೇವೆ; ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಸ್ವಾಭಾವಿಕವಾಗಿ ಪೋಷಕರಿಗೆ ಭಯ ಆಗುವುದು ಸಹಜ. ಇದೆಲ್ಲ ಸುಳ್ಳು ಸುದ್ದಿ. ಈಗಾಗಲೇ ಶಾಲೆಗಳಿಗೆ ನಮ್ಮ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೇಟಿ ಆಗಿದ್ದಾರೆ. ನಾನು ಸಂಜೆ ಭೇಟಿ ನೀಡುವೆ” ಎಂದರು.
“ಯಾರು ಸುಳ್ಳು ಸುದ್ದಿ ಕೊಟ್ಟಿದ್ದಾರೋ ಅವರ ಮೇಲೆ ಸೂಕ್ತ ಕಾನೂನು ಕ್ರಮ ಆಗಲಿದೆ. ಕಳೆದ ವರ್ಷವೂ ಹೀಗೆ ಸುಳ್ಳು ಸುದ್ದಿ ಹರಿ ಬಿಡಲಾಗಿತ್ತು. ಗೃಹ ಇಲಾಖೆಯ ಸಹಕಾರ ನಮಗೆ ಬೇಕಾಗುತ್ತದೆ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಲಾಗಿದೆ. ತಲೆಕೆಡಿಸಿಕೊಳ್ಳುವುದು ಬೇಡ” ಎಂದು ಹೇಳಿದರು.