ಕೆಇಎ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್‌ನನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಆದರೆ, ಬಿಜೆಪಿಯವರು ಸುಮ್ಮನೆ ನಮ್ಮ ಮುಖಂಡ ಪ್ರಿಯಾಂಕ್ ಖರ್ಗೆ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹರಿಹಾಯ್ದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, “ಬಿಜೆಪಿಯವರಿಗೆ ಕಾಮಾಲೆ ಕಣ್ಣು ಇರುವುದರಿಂದ, ಅವರಿಗೆ ಕಾಣುವುದೆಲ್ಲ ಹಳದಿಯೇ. ಆರ್ ಡಿ ಪಾಟೀಲ್ ನಾಪತ್ತೆ ಪ್ರಕರಣದಲ್ಲಿ ಪೊಲೀಸರ ತಪ್ಪಿದ್ದರೆ, ನಾವು ಪೊಲೀಸರ ವಿರುದ್ದವೂ ಕ್ರಮ ತೆಗೆದುಕೊಳ್ತಿದ್ದೇವೆ. ಈಗಾಗಲೇ ಇಬ್ಬರು ಪೋಲೀಸರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗಿದೆ” ಎಂದರು.
ಇದೇ ವೇಳೆ ಜಾತಿ ಗಣತಿ ಬಗ್ಗೆ ಮಾತನಾಡಿ, “ನೂರಾರು ಕೋಟಿ ಖರ್ಚು ಮಾಡಿ ಜಾತಿಗಣತಿ ಮಾಡಿಸಲಾಗಿದೆ. ಈಗ ವರದಿಯಲ್ಲಿ ಏನು ಇದೆ ಅಂತ ರಾಜ್ಯಕ್ಕೆ ಗೊತ್ತಾಗಬೇಕು. ಒಳ ಮೀಸಲಾತಿ ವಿಚಾರದಲ್ಲಿ ನಾನು ಪರವಾಗಿದ್ದೇನೆ” ಎಂದು ಹೇಳಿದರು.
“ಸದಾಶಿವ ಆಯೋಗದ ವರದಿ ವಿಚಾರ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ನಾವು ಘೋಷಣೆ ಮಾಡಿದ್ದೇವೆ. ನಾವು ಘೋಷಣೆ ಮಾಡಿದಂತೆ ನಡೆದುಕೊಳ್ಳುತ್ತೇವೆ” ಎಂದು ತಿಳಿಸಿದರು.
“ಅನ್ಯ ಪಕ್ಷದ ಶಾಸಕರು ಕಾಂಗ್ರೆಸ್‌ಗೆ ಬರುವ ವಿಚಾರ ಡಿಕೆ ಶಿವಕುಮಾರ್ ಅವರಿಗೆ ಗೊತ್ತಿರಬಹುದು. ಹೀಗಾಗಿ ಅವರು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿಕೊಂಡರು ಯಾರೇ ಬಂದರೂ ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದರು.