ಗೃಹ ಖಾತೆ ಬದಲಾವಣೆಯ ಬಗ್ಗೆ ನಾನು ಸಿಎಂ ಬಳಿ ಹೇಳಿಕೊಂಡಿಲ್ಲ. ಖಾತೆ ಬದಲಾವಣೆಗೆ ಕೇಳಿದ್ದೇನೆ ಅನ್ನೋ ವಿಚಾರವನ್ನು ಹೇಳಿದ್ಯಾರು? ಒಬ್ಬರ ವ್ಯಕ್ತಿತ್ವವನ್ನು ಹೀಗೆ ಕೊಲೆ ಮಾಡಬಾರದು ಎಂದು ಸಚಿವ ಜಿ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ಗೃಹ ಇಲಾಖೆ ಸಹವಾಸ ಸಾಕು, ಖಾತೆ ಬದಲಿಸಿ ಎಂದು ಪರಮೇಶ್ವರ್ ಅವರು ಸಿಎಂ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿರುವ ವರದಿಯೊಂದನ್ನು ಆರ್ ಅಶೋಕ್ ಟ್ವೀಟ್ ಮಾಡಿ, “ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಖಾತೆ ನಿರ್ವಹಣೆ ಮಾಡಬಲ್ಲ ಸಮರ್ಥರು, ಯೋಗ್ಯರು ಬೇರೆ ಯಾರೂ ಇಲ್ಲವೇ” ಎಂದು ಪ್ರಶ್ನಿಸಿದ್ದರು.
ಅಶೋಕ್ ಹೇಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಇದು ಶೋಭೆ ತರುವುದಿಲ್ಲ. ಏನೇ ಇದ್ದರೂ ನನ್ನನ್ನೇ ಕೇಳಿ, ಉತ್ತರ ಕೊಡುತ್ತೇನೆ” ಎಂದರು.
“ನನ್ನ ಪತ್ನಿ ಜೊತೆಗೂ ರಾಜಕೀಯ ವಿಚಾರದ ಬಗ್ಗೆ ಮಾತನಾಡಲ್ಲ. ಖಾತೆ ಬದಲಾಯಿಸಿ ಅಂತಾ ಸಿಎಂ ಬಳಿ ಹೇಳಿದ್ದಾರೆ ಎಂಬುದು ಸುಳ್ಳು. ಇಂತಹ ಖಾತೆಯೇ ಬೇಕು ಎಂದು ನಾನು ಯಾವತ್ತೂ ಕೇಳಿಲ್ಲ. ಬೆಂಗಳೂರು ಘಟನೆಯಿಂದ ನಾವೂ ನೋವು ಅನುಭವಿಸುತ್ತಿದ್ದೇವೆ. ಇದು ಸವಾಲು, ಇದನ್ನು ಎದುರಿಸಬೇಕು” ಎಂದು ಹೇಳಿದರು.
“ದೆಹಲಿಗೆ ನಮ್ಮನ್ನು ಕರೆದಿಲ್ಲ, ಇದು ಸತ್ಯಕ್ಕೆ ದೂರವಾದದ್ದು ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ಗೆ ದೂರವಾಣಿ ಮೂಲಕ ಮಾಹಿತಿ ಕೊಟ್ಟಿದ್ದೇವೆ. ಆದರೆ ಯಾರೂ ನಮ್ಮನ್ನು ದೆಹಲಿಗೆ ಕರೆದಿಲ್ಲ, ಮುಂಬೈಗೂ ಕರೆದಿಲ್ಲ. ಹೈಕಮಾಂಡ್ನವರು ಮಾಹಿತಿ ಕೇಳ್ತಾರೆ, ಅವರಿಗೆ ಆತಂಕ ಇರುತ್ತೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಮಾಹಿತಿ ಕೇಳುತ್ತಾರೆ” ಎಂದರು.
ಸುಹಾಸ್ ಶೆಟ್ಟಿ ಹತ್ಯೆ ಕೇಸ್ ತನಿಖೆ ಎನ್‌ಐಎ ವಹಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, “ಎನ್‌ಐಗೆ ವಹಿಸಿದ ಬಗ್ಗೆ ಕೇಂದ್ರ ಗೃಹ ಇಲಾಖೆ ಪತ್ರ ಬಂದಿದೆ. ಈ ಪತ್ರದ ಬಗ್ಗೆ ಇಂದು ಸಭೆ ನಡೆಸುತ್ತೇನೆ.ಎನ್‌ಐಎಗೆ ಪ್ರಕರಣ ನೀಡಬೇಕಾ ಬೇಡ್ವಾ ಎಂದು ನಿರ್ಧರಿಸುತ್ತೇವೆ. ಎನ್‌ಐಎ ತನಿಖೆಗೆ ಯಾರು ರೆಫರ್ ಮಾಡಿದ್ದಾರೋ ಗೊತ್ತಿಲ್ಲ. ನಮ್ಮ ಪೊಲೀಸರು ಕೂಡ ಸಮರ್ಥವಾಗಿ ತನಿಖೆ ಮಾಡುತ್ತಿದ್ದಾರೆ. ಯಾವ ಆಧಾರದ ಮೇಲೆ ವರ್ಗಾವಣೆಗೆ ಕೇಳಿದ್ದಾರೋ ಗೊತ್ತಿಲ್ಲ. ಇವತ್ತು ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ” ಎಂದು ಹೇಳಿದರು.