ಹುಬ್ಬಳ್ಳಿ: ಜಾತಿ ಕಾರಣಕ್ಕೆ ನಾಗ್ಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿರುವ ಹೆಡಗೇವಾರ್ ಸ್ಮಾರಕದೊಳಗೆ ತನಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕೂಡ ಧ್ವನಿಗೂಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಆದ ಅಸ್ಪೃಶ್ಯತೆ ಅನುಭವ ಬಿಜೆಪಿಯಲ್ಲಿದ್ದಾಗ ನನಗೂ ಆಗಿದೆ” ಎಂದು ಚಂದ್ರು ತಿಳಿಸಿದ್ದಾರೆ.
“ನಾನು ಕೂಡಾ ಬಿಜೆಪಿಯಲ್ಲಿದ್ದು ಬಂದವ. ಆ ಸಂದರ್ಭ ಕೆಲವೊಂದು ಕಡೆ ನಮಗೆ ಆಹ್ವಾನವೂ ಇರುತ್ತಿರಲಿಲ್ಲ. ಕೆಲವೊಂದಿಷ್ಟು ವಿಷಯಗಳಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಗೂಳಿಹಟ್ಟಿ ಶೇಖರ್ ಹೇಳಿಕೆ ನಂತರ ನನಗೆ ಅದು ಮನವರಿಕೆ ಆಗುತ್ತಿದೆ” ಎಂದಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ 4 ತಿಂಗಳ ಮುಂಚೆ ನಾಗಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿರುವ ಹೆಡಗೇವಾರ್ ಸ್ಮಾರಕದ ಒಳಗೆ ಜಾತಿ ಕಾರಣಕ್ಕೆ ತನಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಬಿಜೆಪಿಯ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಇತ್ತೀಚೆಗೆ ಆರೋಪಿಸಿದ್ದರು.