ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ, ಈ ವಿಚಾರವಾಗಿ ಚರ್ಚೆಗೆ ಸಿದ್ಧ ಎನ್ನುವ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿ, “ಪಾಪ, ಕುಮಾರಸ್ವಾಮಿ ಅವರಿಗೆ ಅಸೂಯೆ, ಈ ಅಸೂಯೆಗೆ ಯಾವುದೇ ಮದ್ದಿಲ್ಲ. ನನಗೆ ಈ ಅವಕಾಶ ಸಿಕ್ಕಿಲ್ಲವಲ್ಲ ಎಂದು ಕೈ, ಕೈ ಹಿಸುಕಿಕೊಳ್ಳುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.
“ಕುಮಾರಸ್ವಾಮಿ ಅವರು ದೇವೇಗೌಡರ ಕೊನೆಗಾಲದಲ್ಲಿ ಅವರ ಜಾತಿ ಕೆಡಿಸಿದ್ದಾರೆ. ದೇವೇಗೌಡರು ಜೀವನದ ಉದ್ದಕ್ಕೂ ಕಾಪಾಡಿಕೊಂಡು ಬಂದಿದ್ದ ಮೌಲ್ಯಗಳನ್ನ ಅವರ ಕೊನೆಗಾಲದಲ್ಲಿ ಕುಮಾರಸ್ವಾಮಿ ನಾಶ ಮಾಡಿದ್ದಾರೆ” ಎಂದು ಛೇಡಿಸಿದರು.
“ಹಿರಿಯರಾದ ದೇವೇಗೌಡರಿಗೆ ವಿಧಿಯೇ ಇಲ್ಲದಂತೆ ಕುಮಾರಸ್ವಾಮಿ ಮಾಡಿದ್ದು ನೋಡಿದರೆ, ನನಗೆ ಮಾತುಗಳೇ ಹೊರಡುತ್ತಿಲ್ಲ, ನನಗೇ ಅಯ್ಯೋ ಅನಿಸುತ್ತದೆ. I feel very sorry. ಎನ್‌ಡಿಎ ಸರ್ಕಾರದ ಜೊತೆ ಕೈ ಜೋಡಿಸಿರುವ ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ” ಎಂದು ಹೇಳಿದರು.
ಈ ಸುದ್ದಿ ಓದಿ: ವಿದ್ಯುತ್ ಕಳ್ಳತನ ಆರೋಪ | ಅಚಾತುರ್ಯಕ್ಕೆ ವಿಷಾದವಿದೆ, ದಂಡ ಕಟ್ಟುವೆ: ಕುಮಾರಸ್ವಾಮಿ
ವಿದ್ಯುತ್ ಕಳ್ಳತನ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆ
“ಅಚಾತುರ್ಯವೋ, ಕಳ್ಳತನವೋ ಒಟ್ಟಿನಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಕುಮಾರಸ್ವಾಮಿ ಅವರು ಒಪ್ಪಿಕೊಂಡು, ದಂಡ ಕಟ್ಟುತ್ತೇನೆ ಎಂದು ಹೇಳಿರುವುದು ಅಭಿನಂದನೀಯ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
“ಕುಮಾರಸ್ವಾಮಿ ಮನೆಗೆ ವಿದ್ಯುತ್ ಕಳವು ವಿಚಾರವನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಅವರ ನೆರೆಹೊರೆಯವರೇ ಅಕ್ರಮ ವಿದ್ಯುತ್ ಸಂಪರ್ಕದ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ. ಆನಂತರ ನಮ್ಮ ಪಕ್ಷದ ಸಾಮಾಜಿಕ ಜಾಲತಾಣ ಘಟಕ ಏನು ಕೆಲಸ ಮಾಡಬೇಕೊ ಅದನ್ನು ಮಾಡಿದೆ” ಎಂದರು.
ಸರ್ಕಾರ ಮಧ್ಯೆ ಪ್ರವೇಶ ಮಾಡುವುದಿಲ್ಲ
ಕುಮಾರಸ್ವಾಮಿ ಅವರು ಈ ರೀತಿಯ ಕೆಲಸ ಮಾಡಿರುವುದು ತಪ್ಪಲ್ಲವೇ ಎಂದು ಕೇಳಿದಾಗ, “ವಿದ್ಯುತ್ ಕಳ್ಳತನ ಮಾಡಬಾರದು, ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ನಮ್ಮಂತವವರೇ ಹೀಗೆ ಕಳವು ಮಾಡಿದರೆ ತಪ್ಪಲ್ಲವೇ? ಸಂಬಂಧಿಸಿದ ಇಲಾಖೆಯವರು ಏನು ಕ್ರಮ ತೆಗೆದುಕೊಳ್ಳುತ್ತಾರೋ ನೋಡೋಣ. ಈ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ, ನಮಗೆ ಅದರ ಅವಶ್ಯಕತೆಯೂ ಇಲ್ಲ” ಎಂದು ತಿಳಿಸಿದರು.