ಮಾಜಿ ಶಾಸಕರಾದ ಡಿ ಸಿ ಗೌರಿಶಂಕರ್ ಮತ್ತು ದಾಸರಹಳ್ಳಿಯ ಮಂಜುನಾಥ್ ಅವರು ಜೆಡಿಎಸ್ ತೊರೆದು ಬುಧವಾರ (ನ.15) ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ. ಮಾಜಿ ಶಾಸಕರ ಜೊತೆಯಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಮಾಜಿ ಶಾಸಕ ಗೌರಿಶಂಕರ್ ಅವರು ತುಮಕೂರು ಮತ್ತು ನೆಲಮಂಗಲ ಭಾಗದಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದಾರೆ. ಇನ್ನು ಮಂಜುನಾಥ್ ಸಹ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಗೌರಿಶಂಕರ್ ಮತ್ತು ಮಂಜುನಾಥ್ ಮನವೊಲಿಕೆಗೆ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅಂತಿಮವಾಗಿ ಕಾಂಗ್ರೆಸ್ ಕರೆತರುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ: ಎಚ್‌ಡಿಕೆ
ಜೆಡಿಎಸ್ ನಾಯಕರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಮಾಜಿ ಶಾಸಕರಾದ ಗೌರಿಶಂಕರ್, ಮಂಜುನಾಥ್ ಕಾಂಗ್ರೆಸ್ ಸೇರುವ ವಿಚಾರ ಹಳೆಯದು. ನನಗೇನೂ ಆಶ್ಚರ್ಯ ಆಗಲ್ಲ. ಗೌರಿಶಂಕರ್, ಮಂಜುನಾಥ್ ಕರೆದು ಎರಡು ಬಾರಿ ಮಾತನಾಡಿದ್ದೇನೆ. ಅವರಿಗೆ ಅನುಕೂಲ ಆಗುವ ಕಡೆ ಹೋಗಿದ್ದಾರೆ. ನಮಗೆ ಯಾವುದೇ ತೊಂದರೆ ಇಲ್ಲ. ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ” ಎಂದರು.