Homeಕರ್ನಾಟಕಗುತ್ತಿಗೆ ಆಧಾರದ ಮೇಲೆ ನಿಯೋಜನೆಗೊಂಡ ನಿವೃತ್ತ ಸರ್ಕಾರಿ ಅಧಿಕಾರಿಗಳು, ನೌಕರರನ್ನು ಸೇವೆಯಿಂದ ಕೈಬಿಡಲು ಸರ್ಕಾರ ಆದೇಶ

ಗುತ್ತಿಗೆ ಆಧಾರದ ಮೇಲೆ ನಿಯೋಜನೆಗೊಂಡ ನಿವೃತ್ತ ಸರ್ಕಾರಿ ಅಧಿಕಾರಿಗಳು, ನೌಕರರನ್ನು ಸೇವೆಯಿಂದ ಕೈಬಿಡಲು ಸರ್ಕಾರ ಆದೇಶ

ಕರ್ನಾಟಕ ಸರ್ಕಾರ ಸಚಿವಾಲಯ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಲಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌ ಅವರು ಆದೇಶ ಹೊರಡಿಸಿದ್ದಾರೆ.

ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ/ ನೌಕರರುಗಳನ್ನು ನಿಯೋಜನೆ ಮಾಡಲು ಹಾಗೂ ವಿವಿಧ ಇಲಾಖೆಗಳಲ್ಲಿ ಹಾಲಿ ಗುತ್ತಿಗೆ/ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಲು ಅಗತ್ಯ ಕ್ರಮವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು.

ಜ.9ರಂದು ಟಿಪ್ಪಣಿ ಹೊರಡಿಸಿದ್ದ ಸಿದ್ದರಾಮಯ್ಯ ಅವರು, “ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ರಾಜ್ಯ ಸರ್ಕಾರದ ಕೆಲವು ಇಲಾಖೆಗಳಲ್ಲಿ/ಸಚಿವಾಲಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ/ ನೌಕರರನ್ನು ಅನಗತ್ಯವಾಗಿ ಹುದ್ದೆಗಳನ್ನು ಸೃಜಿಸಿ ಸಮಾಲೋಚಕರು/ ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಹಾಗೂ ಕೆಲವು ಗ್ರೂಪ್-ಎ ವೃಂದದ ಹುದ್ದೆಗಳಿಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿರುತ್ತದೆ. ಸದರಿ ನಿವೃತ್ತ ನೌಕರರಿಗೆ ವೇತನ, ವಾಹನ ಸೌಲಭ್ಯ ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಲ್ಲದೆ, ಕಾರ್ಯಕ್ಷಮತೆಯ ಗುಣಮಟ್ಟ ಹಾಗೂ ಉತ್ತರದಾಯಿತ್ಯದ ಕೊರತೆಯೂ ಎದ್ದು ಕಾಣುತ್ತಿದೆ” ಎಂದು ಉಲ್ಲೇಖಿಸಿದ್ದರು.

ಈ ಬಗ್ಗೆ ಕಾರ್ಯಪ್ರವೃತ್ತಾದ ಮುಖ್ಯಕಾರ್ಯದರ್ಶಿಗಳು, ಸಿದ್ದರಾಮಯ್ಯ ಸೂಚನೆ ಅನುಸಾರ ಹಾಲಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಿ, ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ/ನೌಕರರುಗಳನ್ನು ನಿಯೋಜನೆ ಮಾಡಲು ಕೂಡಲೇ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಈ ಕಚೇರಿಗೆ ಸಲ್ಲಿಸುವಂತೆ ಗೋಯಲ್‌ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments