ಕನ್ನಡಪರ ಹಿರಿಯ ಹೋರಾಟಗಾರರ ಸಮಿತಿಯ ವತಿಯಿಂದ ಮಂಗಳವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಏಕವಚನದಲ್ಲಿ ನಿಂದಿಸಿರುವ ಸಂಸದ ಅನಂತಕುಮಾರ್ ಹೆಗಡೆ ರವರ ಧೋರಣೆ ಖಂಡಿಸಿ ಸಭೆ ನಡೆಯಿತು.
ಸಭೆ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಹಾಗೂ ಮಾಜಿ ಮಂತ್ರಿಗಳಾದ ಬಿ ಟಿ ಲಲಿತ ನಾಯಕ್, “ಅನಂತಕುಮಾರ್ ಹೆಗಡೆ ಅವರು ಲೋಕಸಭೆ ಚುನಾವಣೆಯ ಹತ್ತಿರ ಬರುತ್ತಿದ್ದಂತೆಯೇ ಪ್ರತ್ಯಕ್ಷವಾಗಿ ಕಾರ್ಕೋಟಕ ವಿಷದಂತಹ ಮಾತುಗಳನ್ನು ಕಕ್ಕುತ್ತಿರುವುದು ವಿಷಾದನೀಯ. ಇವರು ಬಳಸುತ್ತಿರುವ ಮಾತುಗಳನ್ನು ಗಮನಿಸಿದರೆ ಇವರು ಮನುಷ್ಯರೇ ಅಲ್ಲವೇನೋ ಎಂಬ ಗುಮಾನಿ ಹುಟ್ಟುತ್ತದೆ” ಎಂದು ಟೀಕಿಸಿದರು.
“ಸಿದ್ದರಾಮಯ್ಯರವರನ್ನು ‘ಮಗನೇ’ ಎನ್ನುವ ಮಟ್ಟಿಗೆ ಕಾಲರ್ ಹಿಡಿದು ಬೀದಿಯ ರೌಡಿಗಳು ಹೊಡೆಯುವ ಶೈಲಿಯಲ್ಲಿ ಮಾತನಾಡಿರುವುದು ಇವರ ವ್ಯಕ್ತಿತ್ವಕ್ಕೆ ಶೋಭೆ ತಾರದು. ಉತ್ತರ ಕನ್ನಡದ ಪ್ರಜ್ಞಾವಂತ ಮತದಾರರಿಂದ ಮತವನ್ನು ಪಡೆದ ಇವರು ಆ ಜನರ ಸಂಸ್ಕೃತಿಗೆ ವಿರುದ್ಧವಾದ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ” ಎಂದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ ವಿರುದ್ಧ ಟೀಕೆ ಟಿಪ್ಪಣಿ ಅನಿವಾರ್ಯ, ಆದರೆ ಇಂಹ ಅನಾಗರಿಕ ಪದ ಬಳಕೆ ಖಂಡನೀಯ. ಸಮಾಜದಲ್ಲಿ ದ್ವೇಷವನ್ನು ಹರಡುತ್ತಾ ಧರ್ಮಾಂಧತೆಯನ್ನು ಪಸರಿಸುತ್ತಾ ಕಾನೂನಿಗೆ ಸವಾಲು ಹಾಕುತ್ತಾ ಮೆರೆಯುತ್ತಿರುವ ಇವರ ಈ ನಡೆ ಖಂಡನಾರ್ಹ. ಸುಪ್ರೀಂ ಕೋರ್ಟ್ ಹೇಳಿರುವಂತೆ ದ್ವೇಷ ಭಾಷಣಗಳ ಮೂಲಕ ಅಶಾಂತಿಗೆ ಕಾರಣವಾಗುತ್ತಿರುವ ಇವರ ಮೇಲೆ ಸರ್ಕಾರವು ಕಾನೂನು ರೀತಿಯ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಮಾವಳ್ಳಿ ಶಂಕರ್ ಮಾತನಾಡಿ, “ಸಾರ್ವಜನಿಕರು ಸುಮ್ಮನಿರುವುದೇ ಇವರ ಅಟ್ಟಹಾಸಕ್ಕೆ ಕಾರಣವಾಗಿದೆ. ಖ್ಯಾತ ಸಂಶೋಧಕರಾದ ಎಂ ಎಂ ಕಲ್ಬುರ್ಗಿ ಹಾಗೂ ಖ್ಯಾತ ಪತ್ರಕರ್ತರಾದ ಗೌರಿ ಲಂಕೇಶ್ ರವರ ಕೊಲೆಯಾದಾಗ ನಾಡಿನ ಪ್ರಜೆಗಳು ಸುಮ್ಮನೆ ಇದ್ದಿದ್ದರೆ ಪರಿಣಾಮವೇ ಇದು” ಎಂದರು.
ಬೆಳಗೂರು ಸಮಿವುಲ್ಲ ಮಾತನಾಡಿ, “ಸಂಸದ ಅನಂತಕುಮಾರ್ ಹೆಗಡೆ ರವರ ಈ ರೀತಿ ದ್ವೇಷದ ಭಾಷಣವೇ ಇಂದಿನ ಒಟ್ಟು ರಾಜಕಾರಣದ ಮೂಲ ಸೆಲೆ ಅಥವಾ ಬಂಡವಾಳ. ಇದೇ ಅನಂತಕುಮಾರ್ ಹೆಗಡೆ ಈ ಹಿಂದೆ ದಲಿತರನ್ನು ನಾಯಿಗಳು ಎಂದು ಕರೆದಿದ್ದು ದಾಖಲೆಯಲ್ಲಿದೆ. ಕಳೆದ ನಾಲ್ಕುವರೆ ವರ್ಷಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದಿದ್ದ ಇವರು ಈಗ ಏಕಾಏಕಿ ಸಾರ್ವಜನಿಕರ ಮುಂದೆ ದುತ್ತನೆ ಬಂದು ದ್ವೇಷದ ಭಾಷಣವನ್ನು ಮಾಡುತ್ತಿರುವುದನ್ನು ಗಮನಿಸಿದರೆ ಇದರಲ್ಲಿ ವಿಷಯಾಂತರ ಮಾಡುವ ಹುನ್ನಾರವೇ ಅಡಗಿದೆ” ಎಂದು ಆರೋಪಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡಪರ ಹಿರಿಯ ಹೋರಾಟಗಾರರು ಸಮಿತಿಯ ಅಧ್ಯಕ್ಷ ಡಾ.ತಲಕಾಡು ಚಿಕ್ಕರಂಗೇಗೌಡರು ಮಾತನಾಡಿ, ಅನಂತಕುಮಾರ್ ಹೆಗಡೆ ಅವರ ಅನಾಗರಿಕ ಹೇಳಿಕೆಯನ್ನು ಖಂಡಿಸಿದ್ದಲ್ಲದೆ ಅವರು ಈ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳ ಹಾಗೂ ಪ್ರಜೆಗಳ ಕ್ಷಮೆಯನ್ನು ಬೇಷರತ್ತಾಗಿ ಯಾಚಿಸಬೇಕು. ಬಿಜೆಪಿ ಪಕ್ಷದವರು ಇವರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಟೀಕೆ ಟಿಪ್ಪಣಿಗಳು ಸಭ್ಯತೆಯ ಗೆರೆಯನ್ನು ದಾಟಬಾರದು, ಸುಸಂಸ್ಕೃತ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಈ ರೀತಿಯ ಹೇಳಿಕೆ ಕೊಡುವವರನ್ನು ಮುಂದುವರಿಯಲು ಬಿಡಬಾರದು. ಅದೇ ರೀತಿಯಾಗಿ ಕಾಂಗ್ರೆಸ್ ಪಕ್ಷವು ಕೂಡ ಮುಖ್ಯಮಂತ್ರಿ ಆಗಿರುವ ತಮ್ಮದೇ ಪಕ್ಷದ ನಾಯಕನ ಬಗ್ಗೆ ವಿರೋಧ ಪಕ್ಷದವರು ಸಭ್ಯತೆಯನ್ನು ಮೀರಿ ಟೀಕಿಸಿದಾಗ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕ” ಎಂದು ಆಗ್ರಹಿಸಿದರು.
ಮಾಜಿ ಮಹಾಪೌರ ರಾಮಚಂದ್ರಪ್ಪ, ಜೆ. ಹುಚ್ಚಪ್ಪ, ಕನ್ನಡಪರ ಹಿರಿಯ ಹೋರಾಟಗಾರ ಎಲ್. ಶಿವ ಶಂಕರ್ , ಸಮಿತಿಯ ಕಾರ್ಯದರ್ಶಿ ಜಿ. ಜ್ಞಾನೇಶ್, ಯುವಜನ ಸಂಘಟನೆಯ ಅಭಿಮನ್ಯು ರಮೇಶ್, ಸಾಹಿತಿ ಹಾಗೂ ಹೋರಾಟಗಾರ ಶೇ. ಭೋ.ರಾಧಾಕೃಷ್ಣ, ಬಂಜಾರ ಸಂಸ್ಕೃತಿ ಚಿಂತಕ ರುದ್ರು ಪುನೀತ್, ಡಾ.ರಾಜಕುಮಾರ್ ಸೇನೆಯ ಅಧ್ಯಕ್ಷ ವಿ. ತ್ಯಾಗರಾಜ್ ಮಾತನಾಡಿದರು.
ಖಂಡನಾ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು
೧. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸಂಸತ್ ಸದಸ್ಯ ಅನಂತಕುಮಾರ್ ಹೆಗಡೆ ರವರು ಬಳಸಿರುವ ಪದವು ಖಂಡನೀಯವಾಗಿರುವುದರಿಂದ ಅವರು ಈ ಕೂಡಲೇ ರಾಜ್ಯದ ಮುಖ್ಯಮಂತ್ರಿ ಹಾಗೂ ಜನತೆಯ ಕ್ಷಮೆಯನ್ನು ಭೇಷರತ್ತಾಗಿ ಕೇಳಬೇಕು.
೨. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಗ್ಗೆ ಅನಾಗರಿಕ ಪದವನ್ನು ಬಳಸಿ ನಿಂದಿಸಿರುವ ಸಂಸದ ಅನಂತಕುಮಾರ್ ಹೆಗಡೆಯವರ ವಿರುದ್ಧ ರಾಜ್ಯ ಸರ್ಕಾರವು ಈ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು.
೩. ತಮ್ಮದೇ ಪಕ್ಷದ ಸಂಸತ್ ಸದಸ್ಯನು ರಾಜ್ಯದ ಚುನಾಯಿತ ಮುಖ್ಯಮಂತ್ರಿ ವಿರುದ್ಧ ಈ ರೀತಿ ಅನಾಗರಿಕ ಪದ ಬಳಸಿರುವುದನ್ನು ಬಿಜೆಪಿ ಖಂಡಿಸುವುದರ ಜೊತೆಗೆ ಅವರ ಮೇಲೆ ಸೂಕ್ತವಾದ ಶಿಸ್ತು ಕ್ರಮವನ್ನು ಎಂಟು ದಿನಗಳ ಒಳಗಾಗಿ ಕೈಗೊಳ್ಳಬೇಕು.
೪. ಶಿಸ್ತುಕ್ರಮ ಕೈಗೊಳ್ಳಲು ಬಿಜೆಪಿ ಪಕ್ಷವು ವಿಫಲಗೊಂಡರೆ ಆ ಪಕ್ಷದ ಕಚೇರಿಯ ಮುಂದೆ ನಮ್ಮ ಸಮಿತಿಯು ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ.