ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಒಬ್ಬೊಬ್ಬ ವೈದ್ಯರಿಂದ 300 ಭ್ರೂಣ ಹತ್ಯೆ ನಡೆದಿದೆ. 27 ವರ್ಷಗಳಲ್ಲಿ ಆರೋಗ್ಯ ಇಲಾಖೆ ಕೇವಲ 87 ಪ್ರಕರಣ ದಾಖಲಿಸಿದೆ. ಇದೊಂದು ರೀತಿಯಲ್ಲಿ ನನ್ನ ಪ್ರಕಾರ ಕೊಲೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ತನಿಖೆಗೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಆಗ್ರಹಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಭ್ರೂಣ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, “ಗಂಡು ಮಗ ಬೇಕು ಆಸೆಯಿಂದ ಹೆಣ್ಣು ಭ್ರೂಣ ಹತ್ತೆ ಮಾಡಲಾಗುತ್ತಿದೆ. ವರದಕ್ಷಿಣೆ ಕೂಡಾ ಇದಕ್ಕೆ ಕಾರಣವಾಗಿದೆ” ಎಂದು ಆರೋಪಿಸಿದರು.
“ಈಗಾಗಲೇ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿದೆ. ಆದರೆ ಸಿಐಡಿಗಿಂತ ಎಸ್ ಐ ಟಿ ಗೆ ನೀಡಿ. ಅಲ್ಲದೆ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು” ಎಂದು ಆರ್ ಅಶೋಕ ಒತ್ತಾಯಿಸಿದರು.
“ಭ್ರೂಣ ಹತ್ಯೆ ವಿಚಾರ ಬಗ್ಗೆ ಇಷ್ಟೆಲ್ಲಾ ಚರ್ಚೆಯಾದರೂ ಹೊಸಕೋಟೆಯಲ್ಲಿ 16 ವಾರಗಳ ಭ್ರೂಣ ಹತ್ಯೆ ಮಾಡಲಾಗಿದೆ. ಕಾನೂನಿಗೆ ಎಷ್ಟು ಗೌರವ ಕೊಡುತ್ತಾರೆ? ಎಷ್ಟು ಬಲಾಢ್ಯರಿದ್ದಾರೆ? ಎಂದು ಅರ್ಥವಾಗುತ್ತದೆ. ಎಲ್ಲ ರಂಗದಲ್ಲೂ ಹೆಣ್ಣು ಗುರುತಿಸಿಕೊಂಡಿರುವ ಈ ಕಾಲದಲ್ಲಿ ಭ್ರೂಣ ಹತ್ಯೆ ತಲೆ ತಗ್ಗಿಸುವ ಘಟನೆ. ಎರಡ್ಮೂರು ಜಿಲ್ಲೆಯಲ್ಲಿ ಇದು ಕಂಡಿದೆ. ನನ್ನ ಪ್ರಕಾರ ಇಡೀ ರಾಜ್ಯದಲ್ಲಿ ಇದೆ” ಎಂದು ಆರೋಪಿಸಿದರು.
“ಗರ್ಭಿಣಿ ತಾಯಿಗೆ ತೀರ್ಮಾನದ ಅಧಿಕಾರ ಇರಲ್ಲ, ಬದಲಾಗಿ ಕುಟುಂಬ ಮಾಡುತ್ತಿದೆ. ಮನೆ ಹಾಳು ಕೆಲಸ ಮಾಡುವ ಆಸ್ಪತ್ರೆಗೆ ನಮ್ಮ ‘ಮನೆ ಕ್ಲೀನಿಕ್’ ಎಂದು ಹೆಸರು ಇಡಲಾಗಿದೆ. ಇವರೆಲ್ಲರದ್ದು ಒಂದು ದೊಡ್ಡ ಗ್ಯಾಂಗ್ ಇದೆ. ಮನೆಯ ಸದಸ್ಯರ ಕಿರಕುಳ ಕೂಡ ಭ್ರೂಣ ಹತ್ಯೆಗೆ ಕಾರಣವಾಗುತ್ತಿದೆ. ಇಂತಹ ಘಟನೆಗಳನ್ನು ಹುಡುಕುವ ಏಜೆಂಟರು ಇದ್ದಾರೆ. ಈ ಕೃತ್ಯದಲ್ಲಿ ವೈದ್ಯರೂ ಸೇರಿರುವುದು ಖೇದಕರ, ಅವರಿಗೆ ನಾಚಿಕೆ ಆಗಬೇಕು” ಎಂದು ಹರಿಹಾಯ್ದರು.
“ಭ್ರೂಣ ಹತ್ಯೆ ಮಾಡುವ ಒಂದು ದೊಡ್ಡ ಜಾಲವೇ ರಾಜ್ಯದಲ್ಲಿದೆ. ಹೆಜ್ಜೆ ಹೆಜ್ಜೆಗೂ ಕಾರ ಬದಲಾಯಿಸಲಾಗುತ್ತದೆ. ಆಸ್ಪತ್ರೆಗಳ ಜೊತೆ ಈ ಜಾಲ ಒಪ್ಪಂದ ಮಾಡಿಕೊಂಡಿದೆ. ಯಾರು ಇಂದು ನಾವು ದೇವರನ್ನು ಎಂದುಕೊಂಡಿದ್ದೇವೆಯೋ ಅವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ” ಎಂದು ಹೇಳಿದರು.
“ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗಲೇ ಇಂತಹ ಘಟನೆ ಚರ್ಚೆ ಆಗಿತ್ತು. ಈವರೆಗೂ ಇದು ಕಡಿಮೆಯಾಗಿಲ್ಲ. 2015-16ರಲ್ಲಿ 1000 ಕ್ಕೆ 1029 ಹೆಣ್ಣುಮಕ್ಕಳು ಇದ್ದರು. 2019-20 ರಲ್ಲಿ 1000 ಕ್ಕೆ 797 ಹೆಣ್ಣು ಮಕ್ಕಳ ಅನುಪಾತ ಇದೆ ದಾವಣಗೆರೆಯಲ್ಲಿ. ಹಾಸನದಲ್ಲಿ 1000 ಗಂಡು ಮಕ್ಕಳಿಗೆ 870 ಹೆಣ್ಣು ಮಕ್ಕಳ ಅನುಪಾತ ಆಗಿದೆ” ಎಂದು ಮಾಹಿತಿ ಹಂಚಿಕೊಂಡರು.
ಸಚಿವ ಚಲುವರಾಯಸ್ವಾಮಿ ಮಧ್ಯ ಪ್ರವೇಶಿಸಿ, “ಭ್ರೂಣ ಹತ್ಯೆ ಪ್ರಕರಣದಲ್ಲಿ ದೊಡ್ಡ ಜಾಲವೇ ಇದೆ. ಅವರು ಹಂತ ಹಂತವಾಗಿ ಇದನ್ನು ರಾಜ್ಯದಲ್ಲಿ ವಿಸ್ತರಿಸಿದ್ದಾರೆ. ನಮ್ಮ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲಿದ್ದಾರೆ” ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಿ, “ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾರಿಯಲ್ಲಿರುವ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಇದಕ್ಕೆ ಹೊಸ ನೀತಿಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ” ಎಂದು ಹೇಳಿದರು.