Homeಕರ್ನಾಟಕವೈಟ್ ಟ್ಯಾಪಿಂಗ್‌ಗೆ ಹೆಚ್ಚಿನ ಆದ್ಯತೆ: ಡಿಸಿಎಂ ಡಿ ಕೆ ಶಿವಕುಮಾರ್

ವೈಟ್ ಟ್ಯಾಪಿಂಗ್‌ಗೆ ಹೆಚ್ಚಿನ ಆದ್ಯತೆ: ಡಿಸಿಎಂ ಡಿ ಕೆ ಶಿವಕುಮಾರ್

ಬೆಳಗಾವಿ: ಬೆಂಗಳೂರಿನ ರಸ್ತೆ ಹಾಗೂ ಚರಂಡಿಗಳನ್ನು ಅಭಿವೃದ್ಧಿಪಡಿಸಲು ವೈಟ್ ಟ್ಯಾಪಿಂಗ್‌ಗೆ ಆದ್ಯತೆ ನೀಡಲಾಗುತ್ತಿದ್ದು, ಈ ಬಗ್ಗೆ ಸದ್ಯದಲ್ಲೇ ಬೆಂಗಳೂರಿನ ಶಾಸಕರ ಸಭೆ ನಡೆಸಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಹೆಚ್ ಎಸ್ ಗೋಪಿನಾಥ್ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

“ಬೆಂಗಳೂರಿನಲ್ಲಿ 1.14 ಕೋಟಿ ವಾಹನಗಳು ಇವೆ. ಬೆಂಗಳೂರಿನ ಜನಸಂಖ್ಯೆಯಷ್ಟೇ ವಾಹನಗಳ ಸಂಖ್ಯೆ ಕೂಡ ಇದೆ. ನಗರದಲ್ಲಿ ನಿತ್ಯ ಸರಾಸರಿ 1300 ದ್ವಿಚಕ್ರ ವಾಹನಗಳು ಹಾಗೂ 490 ಕಾರುಗಳು ನೋಂದಣಿಯಾಗುತ್ತಿವೆ. ವಾಹನಗಳ ಒತ್ತಡದಿಂದ ರಸ್ತೆಗಳು ಹಾಳಾಗುತ್ತಿದ್ದು, ರಸ್ತೆಗುಂಡಿ ಮುಚ್ಚುವುದೇ ದೊಡ್ಡ ಕೆಲಸವಾಗಿದೆ. ಹೀಗಾಗಿ ರಸ್ತೆಗುಂಡಿ ಮುಚ್ಚುವ ಕೆಲಸವನ್ನು ವಿಕೇಂದ್ರೀಕರಣ ಮಾಡಲಾಗಿದೆ. ಸಾರ್ವಜನಿಕರು ಅಥವಾ ಪೊಲೀಸ್ ಸಿಬ್ಬಂದಿ ಫೋಟೋ ತೆಗೆದು ಕಳುಹಿಸುವ ಗುಂಡಿಗಳನ್ನು ಪಾಲಿಕೆ ಅಧಿಕಾರಿಗಳು ಮುಚ್ಚಿಸುತ್ತಿದ್ದಾರೆ” ಎಂದರು.

“ವೈಟ್ ಟಾಪಿಂಗ್‌ಗೆ 1000 ಕೋಟಿ ಅನುದಾನವಿದ್ದು, ಮುಖ್ಯರಸ್ತೆಗಳಲ್ಲದೆ ಬೇರೆ ರಸ್ತೆಗಳನ್ನು ಮಾಡಬೇಕೆಂಬ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಕೇಬಲ್‌ಗಳ ಹಾವಳಿ ಹೆಚ್ಚಾಗಿದೆ. ಇದಕ್ಕಾಗಿ ರಸ್ತೆ ಅಗೆಯಲಾಗುತ್ತಿದೆ. ಹೀಗಾಗಿ ಯೋಜಿತ ರೂಪದಲ್ಲಿ ವೈಟ್ ಟ್ಯಾಪಿಂಗ್ ಕೆಲಸ ಮಾಡಬೇಕಿದೆ” ಎಂದು ವಿವರಿಸಿದರು.

ಬೆಂಗಳೂರಿನ ಸ್ವಚ್ಛತೆ, ಮೂಲಭೂತ ಸೌಕರ್ಯ ಅಭಿವೃದ್ಧಿ, ಅಪರಾಧ ತಡೆ ಹಾಗೂ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಘನತೆ ಉಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಭಾರತಿ ಶೆಟ್ಟಿ ಅವರು ಕೇಳಿದ ಪ್ರಶ್ನೆಗೆ, “ನಾನು ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 60 ಲಕ್ಷ ಇತ್ತು. ಈಗ 1.40 ಕೋಟಿ ಆಗಿದೆ. ಇಷ್ಟು ದೊಡ್ಡ ಜನಸಂಖ್ಯೆಗೆ ಕುಡಿಯುವ ನೀರು ಪೂರೈಕೆ. ಘನತ್ಯಾಜ್ಯ ವಿಲೇವಾರಿ ದೊಡ್ಡ ಸವಾಲು. ಕಸ ತೆಗೆಯುವುದೇ ದೊಡ್ಡ ಸಮಸ್ಯೆ, ದಂಧೆ ಆಗಿದೆ. ಕಸ ವಿಲೇವಾರಿಗೆ ಬೇರೆ ರಾಜ್ಯಗಳಲ್ಲಿ ಅಳವಡಿಸಿರುವ ವ್ಯವಸ್ಥೆಗಳನ್ನು ಅಧ್ಯಯನ ಮಾಡಲಾಗುತ್ತಿದೆ. ದೆಹಲಿ, ಹೈದರಾಬಾದ್ ನಲ್ಲಿ ಅಧ್ಯಯನ ಮಾಡಲಾಗಿದೆ. ಇಂಧೋರ್ ಗೆ ತೆರಳಬೇಕಿದೆ. ಈ ಬಗ್ಗೆ ಎಲ್ಲಾ ಪಕ್ಷದ ನಾಯಕರು ಹಾಗೂ ಸಾರ್ವಜನಿಕರ ಸಲಹೆ ಪಡೆದಿದ್ದೇನೆ” ಎಂದರು.

“ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಸಾರ್ವಜನಿಕರಿಂದ 70 ಸಾವಿರ ಸಲಹೆ ಸಂಗ್ರಹವಾಗಿದೆ. ಆರೋಗ್ಯ, ಕುಡಿಯುವ ನೀರು, ತಂತ್ರಜ್ಞಾನ, ಪರಿಸರ ಕ್ಷೇತ್ರಗಳಾಗಿ ವಿಭಜನೆ ಮಾಡಿ ಬೆಂಗಳೂರಿನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಬೆಂಗಳೂರು ಎಲ್ಲರ ನೆಚ್ಚಿನ ನಗರ. ಬೆಂಗಳೂರಿನ ಆದಾಯ ಹಳ್ಳಿಗಳ ಅಭಿವೃದ್ಧಿಗೆ ನೆರವಾಗುತ್ತಿದೆ. ದೇಶದ ರಫ್ತು ಆದಾಯದಲ್ಲಿ 39 % ರಷ್ಟು ಬೆಂಗಳೂರಿನಿಂದ ಸಂಗ್ರಹವಾಗುತ್ತಿದೆ. ಹೀಗಾಗಿ ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ” ಎಂದು ವಿವರಿಸಿದರು.

ಬಿಡಿಎ ಸ್ವತ್ತು ವ್ಯಾಜ್ಯಗಳಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಖಾಸಗಿ ವ್ಯಕ್ತಿಗಳ ಪರ ತೀರ್ಪು ಬರುತ್ತಿರುವುದರ ಬಗ್ಗೆ ಮರೀತಿಬ್ಬೆಗೌಡರ ಪ್ರಶ್ನೆಗೆ ಉತ್ತರಿಸಿ, “ನಾನು ಮರಿತಿಬ್ಬೆಗೌಡರ ವಾದ ಒಪ್ಪುತ್ತೇನೆ. ಅಲ್ಲಿ ದೊಡ್ಡ ಮಾಫಿಯಾ ಇದೆ. ಯಾವುದೇ ಹೊಣೆಗಾರಿಕೆ ಇಲ್ಲವಾಗಿದೆ. ಈ ಹಿಂದಿನ ಸರ್ಕಾರಗಳು ಅಡ್ವೊಕೇಟ್ ಗಳನ್ನು ನೇಮಕ ಮಾಡಿದರೂ ಶೇ.90 ರಷ್ಟು ತೀರ್ಪು ಖಾಸಗಿಯವರ ಪರವಾಗಿವೆ. ಇತ್ತೀಚೆಗೆ ಸಚಿವ ಹೆಚ್.ಕೆ. ಪಾಟೀಲರು ರಾಜ್ಯದ ಅಡ್ವೊಕೇಟ್ ಗಳ ಜತೆ ಚರ್ಚೆ ಮಾಡಿದ್ದಾರೆ. ಬಿಡಿಎ ಹಾಗೂ ಪಾಲಿಕೆ ವಿಚಾರದಲ್ಲಿ ಮುಂದಿನ ಶನಿವಾರ ಅಡ್ವೊಕೇಟ್ ಗಳ ಸಭೆ ನಿಗದಿ ಮಾಡಿದ್ದು, ಯಾರು ಎಷ್ಟು ಕೇಸ್ ವಾದ ಮಾಡಿದ್ದಾರೆ, ಎಷ್ಟು ಕೇಸ್ ಗೆದ್ದಿದ್ದಾರೆ, ಮುಂದೆ ಅವರ ಕಾರ್ಯಯೋಜನೆ ಏನು ಎಂದು ಪರಿಶೀಲನೆ ಮಾಡಲಾಗುವುದು. ನಾವು ಏಕಾಏಕಿ ಒಂದೇ ದಿನ ತೆಗೆದುಹಾಕುವುದಿಲ್ಲ. ಸದಸ್ಯರು ಹೇಳಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬಿಡಿಎ ಆಸ್ತಿ ಕುರಿತ ಪ್ರಕರಣಗಳ ಪರಿಶೀಲನೆಗೆ ಪ್ರತ್ಯೇಕ ವಿಭಾಗ ರೂಪಿಸಲು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಲಾಗಿದೆ. ಸರ್ಕಾರಿ ಅಡ್ವೊಕೇಟ್ ಗಳಿಗೆ ಹೊಣೆಗರಿಕೆ ನಿಗದಿ ಮಾಡುತ್ತೇವೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments