Homeಕರ್ನಾಟಕಸಂಘಟನೆಗಳ ಮೇಲಿನ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ಉಪಸಮಿತಿ ರಚನೆ

ಸಂಘಟನೆಗಳ ಮೇಲಿನ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ಉಪಸಮಿತಿ ರಚನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಿದ ರೈತರು, ದಲಿತ ಸಂಘಟನೆಗಳ ಕಾರ್ಯಕರ್ತರು ಕನ್ನಡಪರ ಹೋರಾಟಗಾರರು ಮತ್ತು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತಂತೆ ಮಾಹಿತಿ ನೀಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್, “ಇದಕ್ಕಾಗಿ ತಮ್ಮ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಅಲ್ಲಿ ಪರಿಶೀಲನೆ ನಡೆಸಲಾಗುವುದು” ಎಂದು ಮಂಗಳವಾರ ಸುದ್ದಿಗಾರರಿಗೆ ಹೇಳಿದರು.

“ರಾಜ್ಯಾದ್ಯಂತ 400ಕ್ಕೂ ಹೆಚ್ಚು ಅರ್ಜಿಗಳು ಪ್ರಕರಣವನ್ನು ಹಿಂಪಡೆಯುವ ಸಲುವಾಗಿ ಬಂದಿವೆ. ಇದರಲ್ಲಿ ಸ್ಪಷ್ಟವಾದ ಮಾರ್ಗಸೂಚಿ ಪಾಲನೆ ಮಾಡಲಾಗುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಂಬ ಆದ್ಯತೆಗಳಿರುವುದಿಲ್ಲ” ಎಂದು ತಿಳಿಸಿದರು.

“ಪೊಲೀಸ್ ಅಧಿಕಾರಿಗಳು ಪ್ರಕರಣ ಹಿಂಪಡೆಯ ಬಹುದೇ ಅಥವಾ ಬೇಡವೇ ಎಂಬುದರ ಬಗ್ಗೆ ಸ್ಪಷ್ಟ ಶಿಫಾರಸ್ಸಿನೊಂದಿಗೆ ಕಡತ ಮಂಡಿಸಲಿದ್ದಾರೆ. ಉಪಸಮಿತಿ ಅದನ್ನು ಪರಿಶೀಲಿಸಲಿದೆ. ಸೂಕ್ತವಾಗಿದ್ದರೆ ಹಿಂಪಡೆಯುವ ಬಗ್ಗೆ ಪ್ರಕ್ರಿಯೆ ಮುಂದುವರೆಸಲು ಸಂಪುಟಕ್ಕೆ ಶಿಫಾರಸ್ಸು ಮಾಡಲಾಗುವುದು. ಇಲ್ಲವಾದರೆ ಪ್ರಕರಣವನ್ನು ಮುಂದುವರೆಸಲು ಪೊಲೀಸರಿಗೆ ಸೂಚಿಸಲಾಗುವುದು” ಎಂದರು.

“ರಾಜ್ಯಾದ್ಯಂತ ಇರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಎಲ್ಲ ಜಿಲ್ಲೆಗಳ ಎಸ್ಪಿಗಳು, ನಗರ ಪ್ರದೇಶದ ಆಯುಕ್ತರು ಪರಿಶೀಲನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಪರಿಶೀಲನೆ ನಡೆಸುವಾಗ 32 ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ ರಾಮ ಜನ್ಮಭೂಮಿ ಹೋರಾಟ ಪ್ರಕರಣದಲ್ಲಿ ಭಾಗಿಯಾದವರೂ ಸೇರಿದ್ದಾರೆ. ಆದರೆ ಅದೊಂದೇ ಪ್ರಕರಣವನ್ನು ನಾವು ಕೆದಕಿಲ್ಲ. ರಾಜ್ಯಾದ್ಯಂತ ಪರಿಶೀಲನೆ ನಡೆಯುವಾಗ ಹುಬ್ಬಳ್ಳಿ ಪ್ರಕರಣವೂ ಕಂಡುಬಂದಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ಇದು ಕಂಡುಬಂದಿರುವುದು ಕಾಕತಾಳೀಯವಷ್ಟೇ” ಎಂದು ಸ್ಪಷ್ಟಪಡಿಸಿದರು.

“ಬಿಜೆಪಿಯವರು ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹಳೆಯ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾದರೂ ಆಗಬೇಕು, ಶಿಕ್ಷೆಗಾದರೂ ಒಳಗಾಗಬೇಕು. ಎಷ್ಟು ದಿನ ಎಂದು ಅವು ಬಾಕಿ ಪ್ರಕರಣಗಳಲ್ಲಿ ನನೆಗುದಿಯಲ್ಲಿರಲು ಸಾಧ್ಯ. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮುಖಂಡರೂ ಕೂಡ ಅಧಿಕಾರ ನಡೆಸಿದ್ದಾರೆ. ಅವರಿಗೆ ಈ ವಿಚಾರ ಗೊತ್ತಿಲ್ಲವೇ” ಎಂದು ತಿರುಗೇಟು ನೀಡಿದರು.

ಕ್ರಿಯಾ ಯೋಜನೆ

“ಇದಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕರ್ನಾಟಕವನ್ನು “ಮಾದಕದ್ರವ್ಯ ಮುಕ್ತ” ರಾಜ್ಯವನ್ನಾಗಿಸುವುದು ಪ್ರಮುಖ ಗುರಿಯಾಗಬೇಕು.ಇದಕ್ಕಾಗಿ ಕ್ರಿಯಾ ಯೋಜನೆ’ ರೂಪಿಸಬೇಕು, ಕೆಲವು ದೇಶಗಳ ಪ್ರಜೆಗಳು ಹೆಚ್ಚಾಗಿ ಮಾದಕದ್ರವ್ಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದು, ಹಲವು ವರ್ಷಗಳಿಂದ ವಾಸಿಸುತ್ತಿರುವ ಹಾಗೂ ರಾಜ್ಯಕ್ಕೆ ಬರುವ ವಿದೇಶಿ ಪ್ರಜೆಗಳ ಮೇಲೆ ನಿಗಾವಹಿಸಬೇಕು” ಎಂದು ಸೂಚಿಸಿದರು.

“ಪೊಲೀಸ್ ಇ-ಬೀಟ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು, ಆಯಾ ವಿಭಾಗದಲ್ಲಿ ನಡೆಯುವ ಘಟನೆಗಳಿಗೆ ಡಿಸಿಪಿಗಳು ಜವಾಬ್ದಾರರು, ಹಳೇ ಪ್ರಕರಣಗಳ ಮೇಲೆ ನಿಗಾವಹಿಸಿ” ಎಂದು ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments