Homeಕರ್ನಾಟಕರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಖಂಡನೆ

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಖಂಡನೆ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ರಾಹುಲ್ ಗಾಂಧಿಯವರು ಯಾವುದೇ ತಪ್ಪು ಮಾಡದಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಘನಘೋರ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವುದನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದೇ ಅಪರಾಧ ಎಂಬಂತೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

“ಯಾರಾದರೂ ಭಾಷಣ ಮಾಡಿದ ಜಾಗವನ್ನು ಶುದ್ಧೀಕರಣ ಮಾಡುವುದು ಸಂವಿಧಾನ ವಿರೋಧಿ ಕೆಲಸ. ಅಸ್ಪೃಶ್ಯತೆಗೆ ಅವಕಾಶವಿಲ್ಲ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಇಂತಹ ಕೃತ್ಯ ಸಂವಿಧಾನಕ್ಕೆ ಮಾಡಿದ ಅಪಚಾರ. ಇದು ಖರ್ಗೆ ಅವರಿಗೆ ಮಾಡಿದ ಅಪಮಾನ ಮಾತ್ರವಲ್ಲ, ಎಫ್‌ಐಆರ್ ದಾಖಲಿಸುವ ಮೂಲಕ ಲೋಕಸಭೆಯ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರನ್ನೂ ಅವಮಾನಿಸಲಾಗಿದೆ” ಎಂದರು.

“ರಾಹುಲ್ ಗಾಂಧಿ ಅವರು ಮಾಡಿರುವ ತಪ್ಪಾದರೂ ಏನು? ಶುದ್ಧೀಕರಣದಂತಹ ಕೃತ್ಯವನ್ನು ಪ್ರಶ್ನಿಸಿದ್ದಾರೆ ಅಷ್ಟೇ. ಆದರೆ ಅವರ ವಿರುದ್ಧ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಲಾಗಿದೆ. ಇದು ಅತ್ಯಂತ ಖೇದಕರ” ಎಂದು ಅವರು ಹೇಳಿದರು.

ಸಂವಿಧಾನದ ಆಶಯದಂತೆ ಅಸ್ಪೃಶ್ಯತೆ ಆಚರಣೆ ಮಾಡಿದವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ದುರುದ್ದೇಶಪೂರ್ವಕವಾಗಿ ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

“ಏನಾದರೂ ಮಾಡಿ ರಾಹುಲ್ ಗಾಂಧಿಯವರ ಬಾಯಿ ಮುಚ್ಚಿಸಬೇಕು ಎಂದು ಬಿಜೆಪಿ ತೀರ್ಮಾನಿಸಿದಂತಿದೆ. ಈ ಹಿಂದೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದಾಗಲೂ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅವರ ಸದಸ್ಯತ್ವವನ್ನೂ ರದ್ದು ಮಾಡಲಾಗಿತ್ತು. ಕೊನೆಗೆ ನ್ಯಾಯಾಲಯದ ಮೊರೆ ಹೋದಾಗ ಪ್ರಕರಣ ರದ್ದಾಯಿತು” ಎಂದು ಅವರು ಹೇಳಿದರು.

ರಾಹುಲ್ ಗಾಂಧಿಯವರು ಸಂವಿಧಾನದ ಪರವಾಗಿ ಮತ್ತು ಅಸ್ಪೃಶ್ಯತೆಯ ವಿರುದ್ಧವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಬಿಜೆಪಿಯವರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

“ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ರಾಹುಲ್ ಗಾಂಧಿಯವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಘೋರ ಅಪರಾಧ. ಇದನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಯಬೇಕು” ಎಂದು ಅವರು ಕರೆ ನೀಡಿದರು.

ಅಧಿಕಾರದಲ್ಲಿರಲು ಬಿಜೆಪಿ ನಾಲಾಯಕ್ ಎಂದು ಟೀಕಿಸಿದ ಸಿದ್ದರಾಮಯ್ಯ, “ನಾವೆಲ್ಲರೂ ರಾಹುಲ್ ಗಾಂಧಿಯವರ ಜೊತೆಗೆ ಇದ್ದೇವೆ. ಅವರ ಹೋರಾಟದ ಕೈಗಳನ್ನು ಬಲಪಡಿಸುತ್ತೇವೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments