ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು 2025ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ.
ಕಳೆದ 26 ವರ್ಷಗಳಿಂದ ರಾಜ್ಯ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿರುವ ದಲಿತರ ಮಾಲಿಕತ್ವ ಹಾಗೂ ಸಂಪಾದಕತ್ವದ ಪತ್ರಿಕೆಗಳ ಹಿತಾಸಕ್ತಿ ಕಾಪಾಡುವುದು, ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವವನ್ನು ಬಲಪಡಿಸುವುದು ಹಾಗೂ ದಲಿತ ಪತ್ರಕರ್ತರ ಬೌದ್ಧಿಕ ಉನ್ನತೀಕರಣ ಸೇರಿದಂತೆ ಹಲವು ರಚನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ಸಂಘ ನಡೆಸಿಕೊಂಡು ಬರುತ್ತಿದೆ.
ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು ಹಾಗೂ ಶೋಷಿತರ ಪರವಾಗಿ ನಿರಂತರವಾಗಿ ಶ್ರಮಿಸುತ್ತಿರುವ ದಲಿತರು ಮತ್ತು ದಲಿತ ಸಂವೇದನೆ ಹೊಂದಿರುವ ದಲಿತೇತರ ಹಿರಿಯ ಹಾಗೂ ಉದಯೋನ್ಮುಖ ವೃತ್ತಿಪರ ಪತ್ರಕರ್ತರು, ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯವನ್ನೂ ಸಂಘ ಮುಂದುವರೆಸಿಕೊಂಡು ಬರುತ್ತಿದೆ.
ಸಂವಿಧಾನ ಶಿಲ್ಪಿ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮದ ನೈತಿಕ ಮೌಲ್ಯಗಳ ಪ್ರತೀಕವಾಗಿರುವ ಡಾ. ಬಿ.ಆರ್. ಅಂಬೇಡ್ಕರ್, ದಲಿತ ಚಳವಳಿಯ ನೇತಾರ ಪ್ರೊ. ಬಿ. ಕೃಷ್ಣಪ್ಪ, ದಲಿತರ ಸ್ವಾಭಿಮಾನ ಮತ್ತು ಹಕ್ಕುಗಳಿಗೆ ರಾಜಕೀಯ ಶಕ್ತಿ ನೀಡಿದ ಮಾಜಿ ಸಚಿವರಾದ ಬಿ. ಬಸವಲಿಂಗಪ್ಪ ಹಾಗೂ ಮಾಜಿ ಸಚಿವ ಬಿ. ರಾಚಯ್ಯ ಅವರ ಹೆಸರಿನಲ್ಲಿ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ.
ದತ್ತಿ ಪ್ರಶಸ್ತಿ ಪುರಸ್ಕೃತರು
2025ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳಲ್ಲಿ ತಲಾ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ – ಕೆ. ದೀಪಕ್, ಸಂಪಾದಕರು, ‘ವಿಜಯ ಕಾಲ’ ಕನ್ನಡ ದಿನಪತ್ರಿಕೆ, ಮೈಸೂರು.
ಪ್ರೊ. ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿ – ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಂಡ್ಯ. ಬಿ. ರಾಚಯ್ಯ ದತ್ತಿ ಪ್ರಶಸ್ತಿ – ಬದ್ರುದ್ದೀನ್ ಕೆ., ಆಯುಕ್ತರು, ಮಾಹಿತಿ ಆಯೋಗ, ಬೆಂಗಳೂರು ಹಾಗೂ ಹಿರಿಯ ಪತ್ರಕರ್ತರು.
ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ – ಯತಿರಾಜ್ ಬಿ.ಸಿ. (ಯತಿರಾಜ್ ಬ್ಯಾಲಹಳ್ಳಿ), ಪತ್ರಕರ್ತರು, ಬೆಂಗಳೂರು.
ಸಂಪಾದಕರಿಗೆ ಗೌರವ ಪ್ರಶಸ್ತಿ
ಪತ್ರಿಕೆಗಳನ್ನು ನಡೆಸುತ್ತಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸಾಧಕ ಸಂಪಾದಕರನ್ನು ಗುರುತಿಸಿ ಸಂಘದ ವತಿಯಿಂದ ಪ್ರಶಸ್ತಿ ಫಲಕ ಹಾಗೂ ಗೌರವ ಸ್ಮರಣಿಕೆ ಒಳಗೊಂಡ ಗೌರವ ಪ್ರಶಸ್ತಿಗಳನ್ನೂ ಘೋಷಿಸಲಾಗಿದೆ.
ಗೌರವ ಪ್ರಶಸ್ತಿಗೆ ಆಯ್ಕೆಯಾದವರು:
ಚಂದ್ರಣ್ಣ – ಸಂಪಾದಕರು, ‘ಕರ್ನಾಟಕ ಎಕ್ಸ್ಪ್ರೆಸ್’, ದಾವಣಗೆರೆ.
ದೇವೇಂದ್ರಪ್ಪ ಕಪ್ಪನೂರು – ಸಂಪಾದಕರು, ‘ಬುದ್ಧಲೋಕ’, ಗುಲ್ಬರ್ಗಾ.
ಬಿ. ಓ. ಕರಿಯಮ್ಮ – ಸಂಪಾದಕರು, ‘ಜಗಳೂರು ವಾಯ್ಸ್’, ದಾವಣಗೆರೆ.
ಸುಭಾಷ್ ಹೊದ್ಲೂರು – ಸಂಪಾದಕರು, ‘ಸುದಿನ’ ಕನ್ನಡ ದಿನಪತ್ರಿಕೆ, ಬಾಗಲಕೋಟೆ.
ಅನೂಪ್ ಕುಮಾರ್ – ಕಾರ್ಯನಿರ್ವಾಹಕ ಸಂಪಾದಕರು, ‘ಬಳ್ಳಾರಿ ಬೆಳಗಾಯಿತು’, ಬಳ್ಳಾರಿ.
ಸೆ.17ರಂದು ಪ್ರಶಸ್ತಿ ಪ್ರಧಾನ
ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 17ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿರುವ ಸರ್ಕಾರಿ ನೌಕರರ ಸಂಘದ ಆಡಿಟೋರಿಯಂನಲ್ಲಿ ನಡೆಯಲಿದೆ.


