Homeಕರ್ನಾಟಕಸಚಿವ ಎಂ ಬಿ ಪಾಟೀಲ ನಿರ್ದೇಶನದಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಪತ್ತೆ;...

ಸಚಿವ ಎಂ ಬಿ ಪಾಟೀಲ ನಿರ್ದೇಶನದಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಪತ್ತೆ; ₹2ಕೋಟಿ ಮೌಲ್ಯದ ಸಾಮಗ್ರಿ ವಶ

ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸಾಬೂನನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಹೈದರಾಬಾದಿನಲ್ಲಿ ಭೇದಿಸಲಾಗಿದೆ. ಈ ಕಾರ್ಯಾಚರಣೆ ವೇಳೆ ನಕಲಿ ಉತ್ಪನ್ನ, ಅದರ ಪ್ಯಾಕಿಂಗ್ ಗೆ ಬಳಸುತ್ತಿದ್ದ ಕಾರ್ಟನ್ ಬಾಕ್ಸ್ ಗಳು ಸೇರಿದಂತೆ ಸುಮಾರು ರೂ 2 ಕೋಟಿ ಬೆಲೆಯ ಮಾಲು ಪತ್ತೆಯಾಗಿದೆ.

ನಕಲಿ ತಯಾರಿಕೆ ಆರೋಪದ ಮೇಲೆ ಹೈದರಾಬಾದಿನ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವವರನ್ನು ಬಂಧಿಸಲಾಗಿದೆ. ಮಾಲಕಪೇಟೆ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆದಿದೆ.

ನಕಲಿ ಮೈಸೂರ್ ಸ್ಯಾಂಡಲ್ ಸಾಬೂನು ಹೈದರಾಬಾದ್ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಬಗ್ಗೆ ಕೆ ಎಸ್ ಡಿ ಎಲ್ ಅಧ್ಯಕ್ಷರೂ ಆದ ಸಚಿವ ಎಂ.ಬಿ ಪಾಟೀಲ ಅವರಿಗೆ‌ ಅನಾಮಧೇಯ ಕರೆ ಬಂದಿತ್ತು. ಬಳಿಕೆ ಸಚಿವರು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಅವರಿಗೆ ನಿಗಾ ವಹಿಸಲು ಸೂಚಿಸಿದ್ದರು. ಅದರಂತೆ, ಸಿಕಂದರಾಬಾದಿನಲ್ಲಿರುವ ಸಂಸ್ಥೆಯ ಅಧಿಕೃತ ಮಾರಾಟ ಕಚೇರಿಯ ಸಿಬ್ಬಂದಿ ತಮಗೆ ಸಿಕ್ಕ ಸುಳಿವಿನ ಜಾಡು ಹಿಡಿದು ಕಾರ್ಯಪ್ರವೃತ್ತರಾಗಿದ್ದರು.

ಹೈದರಾಬಾದಿನ ಕೆಲವು ಪ್ರದೇಶಗಳಲ್ಲಿ ನಕಲಿ ಸಾಬೂನು ಮಾರಾಟವಾಗುತ್ತಿರುವುದು ಕಂಡುಬಂದಿತ್ತು. ಆದರೆ, ಅದನ್ನು ಯಾರು ಪೂರೈಸುತ್ತಿದ್ದಾರೆ ಎಂಬ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಆಗ ಕೆ ಎಸ್ ಡಿ ಎಲ್ ಸಿಬ್ಬಂದಿ ಸ್ವತಃ ಒಂದು ಲಕ್ಷ ರೂಪಾಯಿ ಬೆಲೆಯ ಉತ್ಪನ್ನ ಖರೀದಿಸಿ, ಅದರ ಮೂಲ ಪತ್ತೆಗೆ ಕಾರ್ಯಪವೃತ್ತರಾದರು.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣ ಕೊಟ್ಟು 25 ಲಕ್ಷ ರೂಪಾಯಿ ಬೆಲೆಯ ಸೋಪು ಖರೀದಿಗೆ ಆರ್ಡರ್ ಕೊಟ್ಟಿದ್ದರು. ಅದನ್ನು ಸ್ವತಃ ತಾವೇ ವಾಹನದಲ್ಲಿ ಸಾಗಿಸುವ ನೆಪದಲ್ಲಿ ಉತ್ಪಾದನೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಹೀಗೆ ಕಾರ್ಯಾಚರಣೆ ನಡೆಸಿದಾಗ ನಕಲಿ ಉತ್ಪಾದನಾ ಘಟಕ ಪತ್ತೆಯಾಯಿತು ಎಂದು ಕೆ ಎಸ್ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ವಿವರಿಸಿದ್ದಾರೆ.

ತಲಾ 150 ಗ್ರಾಂ ತೂಕದ 3 ಸಾಬೂನುಗಳಿರುವ 20 ಕಾರ್ಟನ್ ಬಾಕ್ಸ್ ಗಳು (ಪ್ರತಿಯೊಂದು ಬಾಕ್ಸ್ ನಲ್ಲಿ 90ರಂತೆ ಒಟ್ಟು 1800 ಪೀಸ್ ಗಳು), ತಲಾ 75 ಗ್ರಾಂ ನ 47 ಕಾರ್ಟನ್ ಬಾಕ್ಸ್ ಗಳು (9400 ಪೀಸ್ ಗಳು), 150 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಖಾಲಿ ಕಾರ್ಟನ್ ಬಾಕ್ಸ್ ಗಳು ಮತ್ತು 75 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಕಾರ್ಟನ್ ಬಾಕ್ಸ್ ಗಳು ನಕಲಿ ಘಟಕದಲ್ಲಿ ಪತ್ತೆಯಾಗಿವೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಕೆ ಎಸ್ ಡಿ ಎಲ್ ಉತ್ಪನ್ನಗಳ ಮಾರುಕಟ್ಟೆಯನ್ನು ದೇಶ ಹಾಗೂ ವಿದೇಶಗಳಿಗೆ ವಿಸ್ತರಿಸಲು ಸ್ವತಃ ಆಸಕ್ತಿ ವಹಿಸಿ ಕ್ರಮ ತೆಗೆದುಕೊಂಡಿರುವ ಸಚಿವ ಪಾಟೀಲರು, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ಖಾತರಿಗೊಳಿಸಲು ಗಮನ ವಹಿಸಲಾಗುವುದು ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments