ಹಿಂದೂಸ್ತಾನ್ ಮೆಷಿನ್ ಅಂಡ್ ಟೂಲ್ಸ್ (HMT) ಕಾರ್ಖಾನೆಯ ಹಾಲಿ ಹಾಗೂ ನಿವೃತ್ತ ಉದ್ಯೋಗಿಗಳು ಸೋಮವಾರ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು.
ಬೆಂಗಳೂರಿನ ಹೆಚ್‌ಎಂಟಿ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಉದ್ಯೋಗಿಗಳು; ವೇತನ, ಗ್ರಾಚ್ಯುಟಿ, ಭವಿಷ್ಯ ನಿಧಿ ಪಾವತಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
“ನಿವೃತ್ತಿ ನಂತರ ಕಂಪನಿಯಿಂದ ಬರಬೇಕಾದ ನಮ್ಮ ಸೌಲಭ್ಯಗಳು ಬಾರದೆ ಇರುವುದರಿಂದ ನಮಗೆ ಕಾಯಿಲೆ ಬಂದಾಗ ಔಷಧ ಖರೀದಿ ಮಾಡುವುದು ಕೂಡ ಕಷ್ಟವಾಗಿದೆ. ಸುಮಾರು ಐದಾರು ವರ್ಷಗಳಿಂದ ನಮಗೆ ಬರಬೇಕಿರುವ 30ರಿಂದ 40 ಲಕ್ಷ ರೂಪಾಯಿ ಹಣ ಕಂಪನಿಯಲ್ಲಿಯೇ ಉಳಿದಿದೆ. ಈ ಹಣವನ್ನು ತಾವು ಕೊಡಿಸಬೇಕು” ಎಂದು ಕೋರಿದರು.
“ಯಾವುದೇ ಕಾರಣಕ್ಕೂ ದೇಶದ ಪ್ರತಿಷ್ಠೆಯ ಕಂಪನಿಯಾಗಿದ್ದ ಹೆಚ್‌ಎಂಟಿಯನ್ನು ಮುಚ್ಚಬಾರದು. ಒಂದು ವೇಳೆ ಅಂತಹ ಸಂದರ್ಭ ಬಂದರೆ ಬಿಹೆಚ್ ಇಎಲ್, ಬಿಇಎಲ್, ಬಿಇಎಂಎಲ್ ದಂತಹ ಕಂಪನಿಗಳಲ್ಲಿ ಹೆಚ್‌ಎಂಟಿಯನ್ನು ವಿಲೀನ ಮಾಡಬೇಕು ಅಥವಾ ನೌಕರಿಗಾದರೂ ಆ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿಕೊಂಡರು.
ಉದ್ಯೋಗಿಗಳ ಮನವಿ ಆಲಿಸಿದ ನಂತರ ಮಾತನಾಡಿದ ಸಚಿವ ಕುಮಾರಸ್ವಾಮಿ, “ಈ ವಿಷಯ ನನ್ನ ಗಮನಕ್ಕೆ ಈಗಾಗಲೇ ಬಂದಿದೆ. ಉದ್ಯೋಗಿಗಳಿಗೆ ಬಾಕಿ ಇರುವ ₹361 ಕೋಟಿ ಮೊತ್ತ ಪಾವತಿಸುವ ಬಗ್ಗೆ ಮಾರ್ಗೋಪಾಯ ಹುಡುಕಲಾಗುವುದು. ಈ ಬಗ್ಗೆ ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಖಂಡಿತಾ ಚರ್ಚೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಹೆಚ್‌ಎಂಟಿ ಕಾರ್ಖಾನೆಯನ್ನು ಪುನಶ್ಚೇತನ ಮಾಡುವುದು ಒಂದು ಭಾಗವಾದರೆ, ನಿವೃತ್ತ ಹಾಗೂ ಹಾಲಿ ಕಾರ್ಮಿಕರ ಬಾಕಿ ಪಾವತಿ ಮಾಡುವುದು ಮತ್ತೊಂದು ಸವಾಲಾಗಿದೆ. ಈ ಬಗ್ಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳಿಗೆ ಕಾಯಕಲ್ಪ ನೀಡುವ ಪ್ರಯತ್ನ ಮಾಡುತ್ತಿದ್ದೇನೆ” ಎಂದರು.
“ಪ್ರಧಾನಿಗಳ ನೇತೃತ್ವದಲ್ಲಿ ಸಂಕಷ್ಟದಲ್ಲಿರುವ ವಿವಿಧ ಕೈಗಾರಿಕೆಗಳಿಗೆ ಮರುಜೀವ ಕೊಡುವ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ವೈಜಾಗ್ ಸ್ಟೀಲ್, ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಅದಿರು ಕಾರ್ಖಾನೆ, ಸೇಲಂ ಸ್ಟೀಲ್ ಇತ್ಯಾದಿ ಸೇರಿವೆ” ಎಂದು ತಿಳಿಸಿದರು.