ದೇಶದ ಜನರು ನರೇಂದ್ರ ಮೋದಿ ಸರ್ಕಾರದ “ಅಚ್ಚೇದಿನ್” ನೋಡಲೂ ಇಲ್ಲ, “ಅಮೃತಕಾಲ”ದಲ್ಲಿ ಬದುಕಲೂ ಆಗುತ್ತಿಲ್ಲ. ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆ ಏರಿಕೆಯಿಂದ ದೇಶದ ಜನರ ಜೀವನವೇ ಬರ್ಬಾದ್ ಆಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, “ಅಚ್ಚೇ ದಿನ್” ಹೆಸರಿನಲ್ಲಿ ದೇಶದ ಜನರನ್ನು ಮೋಸ ಮಾಡಿದ ನರೇಂದ್ರ ಮಾಡಿನ ಸರ್ಕಾರ, ಇಂದು ಜನರಿಗೆ ಕೊಟ್ಟಿರುವುದು — ದುಬಾರಿ ಬದುಕು, ತೆರಿಗೆ ದರೋಡೆ ಮತ್ತು ಯುವಜನತೆಗೆ ನಿರುದ್ಯೋಗದ ನರಕ!” ಎಂದು ಕುಟುಕಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿದೆ ಎಂದು ಸಬೂಬು ಹೇಳುತ್ತಿರುವ ಕೇಂದ್ರ ಸರ್ಕಾರ, ಅದೇ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲಬೆಲೆ ಇಳಿಕೆಯಲ್ಲಿದ್ದಾಗ ಯಾಕೆ ಪೆಟ್ರೋಲ್ ಡಿಸೇಲ್ ದರ ಕಡಿಮೆ ಮಾಡಲಿಲ್ಲ.? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದರೂ ದೇಶದ ಜನರಿಗೆ ಲಾಭ ಸಿಗಲಿಲ್ಲ ಯಾಕೆ? ಅದಾನಿ-ಅಂಬಾನಿ ತೈಲ ಕಂಪನಿಗಳ ಲಾಭಕ್ಕಾಗಿ ಜನ ಸಾಮಾನ್ಯರ ಮೇಲೆ ತೆರಿಗೆ ಹೇರಿದ್ದು ಕೇಂದ್ರ ಸರ್ಕಾರ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲ್ ಡೀಸೆಲ್ ತೈಲ ದರ ಏರಿದರೆ ಅದರ ಪರಿಣಾಮ ಕೇವಲ ವಾಹನಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ದೇಶದ ಬೆನ್ನೆಲುಬು ರೈತನ ಹೊಲದಿಂದ ಮಾರುಕಟ್ಟೆಗೆ ಬರುವ ಪ್ರತಿಯೊಂದು ಆಹಾರ ವಸ್ತುವಿನ ಮೇಲೂ ಅದರ ಹೊರೆ ಬೀಳುತ್ತದೆ. ಸಾರಿಗೆ ವೆಚ್ಚ ಹೆಚ್ಚುತ್ತದೆ, ಅದರ ಪರಿಣಾಮವಾಗಿ ತರಕಾರಿ, ಅಕ್ಕಿ, ಹಣ್ಣು, ಹಾಲು ದಿನಬಳಕೆಯ ಪ್ರತಿಯೊಂದು ವಸ್ತುವಿನ ದರವೂ ಏರುತ್ತದೆ. ಅಂತಿಮವಾಗಿ ಸಾಮಾನ್ಯ ಜನರ ಅಡಿಗೆ ಮನೆಯೇ ಕುಸಿದು ಬೀಳುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜನರಿಗೆ “ಅಚ್ಚೇ ದಿನ್” ಭ್ರಮೆ ಸೃಷ್ಟಿಸಿ, ಅದಾನಿ-ಅಂಬಾನಿಗಳಂಥ ಕಾರ್ಪೊರೇಟ್ ಸಾಮ್ರಾಜ್ಯಗಳಿಗೆ “ಅಮೃತಕಾಲ”ವನ್ನೇ ಮೋದಿ ಸರ್ಕಾರ ಧಾರೆ ಎರೆದಿದೆ. ಚುನಾವಣೆ ಮುಗಿಯುವವರೆಗೆ “ಧರ್ಮ ಅಪಾಯದಲ್ಲಿದೆ”, “ಹಿಂದೂಗಳು ಅಪಾಯದಲ್ಲಿದ್ದಾರೆ”, “ಪಾಕಿಸ್ತಾನ”, “ಮಂದಿರ”, “ಮಂಗಲಸೂತ್ರ” ಎಂಬ ಭಾವನಾತ್ಮಕ ನಾಟಕ. ಚುನಾವಣೆ ಮುಗಿದ ತಕ್ಷಣ ಜನರಿಗೆ ಸಿಗೋದು ಪೆಟ್ರೋಲ್ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ, ತೆರಿಗೆ ಹೊಡೆತ ಮತ್ತು ಬದುಕಿನ ಉಸಿರುಗಟ್ಟುವ ಸಂಕಷ್ಟ ಎಂದಿದ್ದಾರೆ.
ಜನರ ಜೇಬು ಖಾಲಿ ಮಾಡಿ, ಕಾರ್ಪೊರೇಟ್ ಖಜಾನೆ ತುಂಬಿಸುವ ರಾಜಕಾರಣಕ್ಕೆ ದೇಶ ಎಷ್ಟು ದಿನ ಬಲಿಯಾಗಬೇಕು? ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನರು ಭಾರಿ ಬೆಲೆ ತೇರಬೇಕಿದೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಕುಸಿಯುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


