ದೇಶದ 15 ರಾಜ್ಯಗಳ ಒಟ್ಟು 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಪೈಕಿ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ನ ಡಾ. ಎಲ್. ಹನುಮಂತಯ್ಯ, ಜಿ ಸಿ ಚಂದ್ರಶೇಖರ್ ಮತ್ತು ಸೈಯದ್ ನಾಸಿರ್ ಹುಸೇನ್ ಅವರ ಅವಧಿ ಏಪ್ರಿಲ್ 2 ರಂದು ಅಂತ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು, ಚುನಾವಣೆ ದಿನಾಂಕ ಘೋಷಿಸಿದ್ದು, ಇದೇ ಫೆಬ್ರವರಿ 27 ಮತದಾನ ಮತ್ತು ಮತ ಎಣಿಕೆ ನಡೆಯಲಿದೆ.
ಕರ್ನಾಟಕದ ಬಲಾಬಲ
ರಾಜ್ಯಸಭೆಯ ಸದಸ್ಯರನ್ನು ರಾಜ್ಯ ವಿಧಾನಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ. ಓರ್ವ ರಾಜ್ಯಸಭಾ ಅಭ್ಯರ್ಥಿ ಗೆಲ್ಲಲು 45 ಬೇಕು. ಈಗಾಗಲೇ ಕಾಂಗ್ರೆಸ್ ಕಾಂಗ್ರೆಸ್ ಬಳಿ 135 ವಿಧಾನಸಭಾ ಸ್ಥಾನಗಳು ಇದ್ದರೆ, ಬಿಜೆಪಿ ಬಳಿ 66 ಹಾಗೂ ಜೆಡಿಎಸ್ 19 ಸ್ಥಾನಗಳನ್ನು ಹೊಂದಿದೆ. ಹಾಗಾಗಿ ಕಾಂಗ್ರೆಸ್ ಮತ್ತೆ ಮೂರು ಸ್ಥಾನ ಹಾಗೂ ಬಿಜೆಪಿ 1 ಸ್ಥಾನದಲ್ಲಿ ನಿರಾಯಾಸವಾಗಿ ಗೆಲ್ಲಲಿದೆ.
ಒಂದು ವೇಳೆ ಐದನೇ ಅಭ್ಯರ್ಥಿ ಕಣಕ್ಕಿಳಿದರೆ ಮಾತ್ರ ಚುನಾವಣೆ ನಡೆಯಲಿದೆ. ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳಿಗೆ ತಲಾ 45 ಮತಗಳ ಹಂಚಿಕೆಯಾದರೆ ಅಲ್ಲಿಗೆ ಬರೋಬ್ಬರಿ 135 ಮತಗಳು ಪೂರ್ಣಗೊಳ್ಳಲಿವೆ. ಹಾಗೆಯೇ ಬಿಜೆಪಿಯ 66 ಸ್ಥಾನಗಳ ಪೈಕಿ ಓರ್ವ ಅಭ್ಯರ್ಥಿಗೆ 45 ಮತ ಬಿದ್ದರೆ, ಇನ್ನೂ ಹೆಚ್ಚುವರಿಯಾಗಿ 21 ಮತಗಳು ಉಳಿಯಲಿವೆ. ಇನ್ನು ಜೆಡಿಎಸ್ ಬಳಿ 19 ಮತಗಳು ಇವೆ. ಪಕ್ಷೇತರ ನಾಲ್ಕು ಶಾಸಕರು ಇದ್ದಾರೆ.
ಬಿಜೆಪಿ ತನ್ನ ಮೊದಲ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಳಿಕ ಜೆಡಿಎಸ್ನ 19 ಮತಗಳ ಬೆಂಬಲದೊಂದಿಗೆ 2ನೇ ಅಭ್ಯರ್ಥಿ ಗೆಲುವಿಗಾಗಿ ಕಸರತ್ತು ನಡೆಸಬಹುದು. ಇಲ್ಲವೇ ಕಾಂಗ್ರೆಸ್ ನಾಲ್ಕನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಬಹುದು.
ಮತದಾನ ಪ್ರಕ್ರಿಯೆ
ರಾಜ್ಯಸಭಾ ಚುನಾವಣೆಯಲ್ಲಿ ತಮ್ಮತಮ್ಮ ಪಕ್ಷದ ಅಧಿಕೃತ ಪ್ರತಿನಿಧಿ/ಏಜೆಂಟ್‌ಗಳಿಗೆ ತೋರಿಸಿಯೇ ಮತ ಚಲಾಯಿಸಬೇಕು. ಹಾಗಂತ, ವಿಪ್ ಉಲ್ಲಂಘಿಸಿ ಕ್ರಾಸ್ ವೋಟಿಂಗ್ ಮಾಡಬಾರದು ಎನ್ನುವ ಕಾನೂನೇನೂ ಇಲ್ಲ. ಒಂದು ವೇಳೆ ಅಡ್ಡಮತದಾನ ಮಾಡಿದರೆ ಆಯಾ ಪಕ್ಷದಿಂದ ಪಕ್ಷ ವಿರೋಧಿ ಚಟುವಟಿಕೆ ಅಡಿಯಲ್ಲಿ ಕ್ರಮಕೈಗೊಳ್ಳುವ ಅವಕಾಶವೂ ಇದೆ.