Homeಸಂಪಾದಕೀಯಸಂಪಾದಕೀಯ | ಭಾರತ ರತ್ನ ಸಾಲದು... ಅವರ ಆದರ್ಶ 'ಕರ್ಪೂರ'ದಂತೆ ಬೆಳಗಿಸಬೇಕು

ಸಂಪಾದಕೀಯ | ಭಾರತ ರತ್ನ ಸಾಲದು… ಅವರ ಆದರ್ಶ ‘ಕರ್ಪೂರ’ದಂತೆ ಬೆಳಗಿಸಬೇಕು

ಸ್ವಂತ ಕಾರು ಮತ್ತು ಸ್ವಂತ ಮನೆ ಎರಡೂ ಇಲ್ಲದೆ ಬದುಕನ್ನು ಸಮಾಜಸೇವೆಯ ಹಾದಿಯಲ್ಲಿ ಪರಿಪೂರ್ಣಗೊಳಿಸಿದ ಉದಾರವಾದಿ ಕರ್ಪೂರಿ ಠಾಕೂರ್‌ಗೆ ಸಂದ ದೊಡ್ಡ ಕೊಡುಗೆ ಭಾರತ ರತ್ನ. ಇವರ ಸುತ್ತ 'ಅಭಿಮನ್ಯು' ಕನ್ನಡ ಮಾಸ ಪತ್ರಿಕೆಯ ಫೆಬ್ರವರಿ ಸಂಚಿಕೆಯ ಸಂಪಾದಕೀಯ ಇಲ್ಲಿದೆ.

ಜನಪ್ರತಿನಿಧಿ ಹೇಗಿರಬೇಕು ಎಂದರೆ ಹೀಗಿರಬೇಕು ಎಂಬುದಕ್ಕೆ ಕಣ್ಣಮುಂದಿನ ಶಾಶ್ವತ ಸಾಕ್ಷಿ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್. ಅವರು ದೇಶಕ್ಕೆ ಮತ್ತು ದೇಶದ ರಾಜಕಾರಣಕ್ಕೆ ಕೊಡುಗೆ ನೀಡಿದ ಆದರ್ಶಗಳ ಪೈಕಿ ಕೆಲವಷ್ಟಾದರೂ ಪಾಲನೆಯಾಗಿದ್ದರೆ ಭಾರತ ಇಂದು ಸಂಪೂರ್ಣ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಭ್ರಷ್ಟಾಚಾರ ಮುಕ್ತ ಆಗಿರುತ್ತಿತ್ತು.

ಅವರ ಆದರ್ಶಗಳ ಪಾಲನೆ ಸಂಪೂರ್ಣ ಆಗುವ ಪರಿಸ್ಥಿತಿ ನಿರ್ಮಾಣ ಆಗಿದ್ದರೆ ದೇಶ ಈ ಮೂರೂವರೆ ದಶಕಗಳ ಅಂತರದಲ್ಲಿ ರಾಮರಾಜ್ಯವೇ ಆಗಿ ಬಿಡುತ್ತಿತ್ತು. ಆದರೆ, ಆ ಯಾವುದೂ ಪಾಲನೆ ಆಗಲಿಲ್ಲ. ಬದಲಿಗೆ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಅಧರ್ಮ ಪಾಲನೆ ಇಂದು ದೇಶದ ನೆಮ್ಮದಿಗೆ ದೊಡ್ಡ ಮಟ್ಟದ ಭಂಗ ಸೃಷ್ಟಿಸಿದೆ.

ಇಂತಹ ಉಸಿರುಗಟ್ಟಿಸುವ ವಾತಾವರಣದ ನಡುವೆಯೂ ಅಲ್ಲೊಂದು ಇಲ್ಲೊಂದು ಉತ್ತಮ ನಿರ್ಧಾರಗಳು ದೇಶದಲ್ಲಿ ಹೊರಬೀಳುತ್ತಿವೆ. ಆ ಪೈಕಿಯ ತಾಜಾ ನಿರ್ಧಾರವೊಂದು ದೇಶದ ಜನರ ಮುಕ್ತ ಹೊಗಳಿಕೆಗೆ ಪಾತ್ರವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಘೋಷಿರುವುದು ಇದಕ್ಕೆ ಕಾರಣವಾಗಿದೆ.

ಕರ್ಪೂರಿ ಠಾಕೂರ್ ಅವರು ಬಿಹಾರದ ಮಟ್ಟಿಗೇ ಜನನಾಯಕರಾದರೂ ಅವರು ಪಾಲಿಸಿದ ಆದರ್ಶಗಳು ಇಡೀ ದೇಶಕ್ಕೇ ಅವರನ್ನು ಜನನಾಯಕ ಎಂದು ಗುರುತಿಸುವಂತೆ ಮಾಡಿವೆ. ಅವರು ಭಾರತರತ್ನ ಪ್ರಶಸ್ತಿಗೆ ಎಲ್ಲ ರೀತಿಯಲ್ಲೂ ಅರ್ಹರು. ಅವರಿಗೆ ಈ ಪ್ರಶಸ್ತಿ ನೀಡಿದ್ದರಿಂದ ಅದರ ಗೌರವ ಹೆಚ್ಚಾಗಿದೆ.
ಅವರು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ನಾಯಿಂದ ಸಮುದಾಯಕ್ಕೆ ಸೇರಿದವರು ಎಂಬುದನ್ನು ಇಲ್ಲಿ ಪ್ರಮುಖವಾಗಿ ಎಲ್ಲರೂ ಗಮನಿಸಬೇಕು.

ದೇಶದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಈ ಸಮುದಾಯವನ್ನು ಎಲ್ಲ ರಾಜಕೀಯ ಪಕ್ಷಗಳು ಸಂಪೂರ್ಣ ನಿರ್ಲಕ್ಷ್ಯಿಸುತ್ತಾ ಬಂದಿವೆ. ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಯಾವ ಪ್ರಯತ್ನಗಳೂ ಸೂಕ್ತ ಪ್ರಮಾಣದಲ್ಲಿ ನಡೆದಿಲ್ಲ. ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಯಾವುದೇ ಮೂಲಭೂತ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಇದುವರೆಗೂ ದಕ್ಕಿಲ್ಲ. ಇಂತಹ ಸಮುದಾಯದ ಒಬ್ಬ ನಾಯಕ ಆ ಕಾಲಕ್ಕೇ ಪಾಳೇಗಾರಿಕೆಯ ಮತ್ತು ಜಮೀನುದಾರಿಕೆಯನ್ನೇ ಹೊದ್ದು ಮಲಗಿದ್ದ ಬಿಹಾರದಂತಹ ಬಿಹಾರದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದು ಕಡಿಮೆ ಸಾಧನೆಯಂತೂ ಖಂಡಿತಾ ಅಲ್ಲವೇ ಅಲ್ಲ. ಇಡೀ ದೇಶದ ಚರಿತ್ರೆಯಲ್ಲಿಯೇ ಇದು ಒಂದು ಅತ್ಯಂತ ದಾಖಲಾರ್ಹ ಸಂಗತಿ. ಇಂತಹ ನಾಯಕರು ಇಂದು ದೇಶಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಅನಿವಾರ್ಯವಾಗಿದ್ದಾರೆ. ಅದು ಅವರ ಸಮುದಾಯದ ಕಾರಣಕ್ಕೆ ಎಂಬುದಕ್ಕಿಂತ ಅವರು ಪಾಲಿಸಿದ ಅದರ್ಶಗಳ ಕಾರಣಕ್ಕೆ ಎಂಬುದನ್ನೂ ಇಲ್ಲಿ ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ.

ಕರ್ಪೂರಿ ಠಾಕೂರ್ ಅವರು ಅಪ್ಪಟ ಸಮಾಜವಾದಿ ಚಿಂತನಾ ಧಾರೆಗೆ ಒಲಿದವರು. ಡಾ. ರಾಮ ಮನೋಹರ ಲೋಹಿಯಾ ಅವರ ಅನುಯಾಯಿಗಳು. ಹಿಂದುಳಿದ ವರ್ಗಗಳ ಏಳ್ಗೆಗೆ ನಿರಂತರ ಶ್ರಮಿಸಿದವರು. ಅತ್ಯಂತ ಸರಳ ಮತ್ತು ಪ್ರಾಮಾಣಿಕ ಬದುಕು ನಡೆಸಿ ಅಕ್ಷರಶಃ ಜನನಾಯಕ ಪದಕ್ಕೆ ಅರ್ಥ ತುಂಬಿದವರು ಅವರು.
1952ರಲ್ಲಿ ಅವರು ಮೊದಲ ಬಾರಿಗೆ ಶಾಸಕರಾಗಿದ್ದರು. ಈ ವೇಳೆ ಅವರು ಆಸ್ಟ್ರಿಯಾಗೆ ನಿಯೋಗವೊಂದರಲ್ಲಿ ತೆರಳಲು ಸಿದ್ಧವಾದರು. ಆದರೆ, ಅವರ ಬಳಿ ಧರಿಸಲು ಒಂದು ಕೋಟ್ ಸಹ ಇರಲಿಲ್ಲ. ಗೆಳೆಯನ ಬಳಿ ಅದಕ್ಕಾಗಿ ಕೇಳಿದರು. ಆಗ ಅವರು ಕೊಟ್ಟಿದ್ದು ಒಂದು ಹರಿದ ಕೋಟ್. ಕರ್ಪೂರಿ ಠಾಕೂರ್ ಅವರು ಸ್ವಲ್ಪವೂ ಬೇಸರಿಸಿಕೊಳ್ಳಲಿಲ್ಲ. ಅದೇ ಕೋಟ್ ಧರಿಸಿ ಆಸ್ಟ್ರಿಯಾಗೆ ತೆರಳಿದ್ದರು. ಅಲ್ಲಿ ಯುಗೊಸ್ಲಾವಿಯಾದ ಮುಖ್ಯಸ್ಥ ಮಾರ್ಷಲ್ ಟಿಟೊ ಅವರು ಇವರ ಹರಿದ ಕೋಟ್ ಗಮನಸಿದ್ದಾರೆ. ನಂತರ ಅವರಿಗೆ ಹೊಸ ಕೋಟ್ ಉಡುಗೊರೆಯಾಗಿ ನೀಡಿದ್ದಾರೆ.

ಮುಖ್ಯಮಂತ್ರಿಯಾದ ನಂತರವೂ ಅವರು ಇಂತಹ ಹಲವು ಕಹಿ ಘಟನೆಗಳನ್ನು ಎದುರಿಸಿದ್ದಾರೆ. ಆ ನಂತರವೂ ಅವರ ಬಳಿ ಸ್ವಂತದ್ದು ಒಂದು ಕಾರೂ ಇರಲಿಲ್ಲ. ಅವರು ಬಿಹಾರದ ಪ್ರತಿಪಕ್ಷ ನಾಯಕರಾಗಿದ್ದ ದಿನಗಳವು. ಒಮ್ಮೆ ತಮ್ಮ ನಿವಾಸಕ್ಕೆ ಮಧ್ಯಾಹ್ನದ ಭೋಜನದ ಸಲುವಾಗಿ ಹೋಗಲು ನಿರ್ಧರಿಸಿದರು. ಅವರ ಸ್ವಂತ ಕಾರು ಇಲ್ಲದ ಕಾರಣ ತಮ್ಮದೇ ಪಕ್ಷದ ಶಾಸಕರೊಬ್ಬರ ಬಳಿ ಸ್ವಲ್ಪ ಸಮಯ ವಾಹನ ನೀಡುವಂತೆ ಕೇಳಿದ್ದಾರೆ. ಆದರೆ, ಆ ಯಾರೂ ಅದಕ್ಕೆ ಸಮ್ಮತಿಸಲಿಲ್ಲ. ವಾಹನದಲ್ಲಿ ಪೆಟ್ರೋಲ್ ಇಲ್ಲ ಎಂದೇ ಸಬೂಬು ಹೇಳಿ ಸತಾಯಿಸಿದ್ದಾರೆ. ಅಷ್ಟೇ ಆಗಿದ್ದರೆ ಸರಿ, ”ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಒಂದು ಕಾರು ಏಕೆ ಖರೀದಿಸಬಾರದು?” ಎಂದು ಹೀಯಾಳಿಸಿದ್ದಾರೆ. ಆದರೆ, ಆ ಯಾವುದಕ್ಕೂ ಅವರು ನೊಂದುಕೊಳ್ಳದ ಸ್ಥಿತಪ್ರಜ್ಞೆ ಬೆಳೆಸಿಕೊಂಡಿದ್ದರು. ಒಬ್ಬ ಸಮಾಜವಾದಿಗೆ ಮಾತ್ರ ಈ ಗುಣ ಸಾಧ್ಯ. ಅವರು ತಮ್ಮ ಕೊನೆಯ ಉಸಿರಿನ ತನಕವೂ ರಿಕ್ಷಾದಲ್ಲಿಯೇ ಪ್ರಯಾಣಿಸುತ್ತಿದ್ದರು ಎಂಬುದು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ.

ಅವರು ಸರಳತನಕ್ಕೆ ಎಷ್ಟು ಕಟಿಬದ್ಧರಾಗಿದ್ದರು ಎಂಬುದಕ್ಕೆ ಮತ್ತೊಂದು ಘಟನೆಯನ್ನು ಇಲ್ಲಿ ನೆನಪಿಸಲೇಬೇಕು. ಆಗ ಅವರು ಬಿಹಾರದ ಮುಖ್ಯಮಂತ್ರಿ. ಈ ವೇಳೆ ಪಾಟ್ನಾದ ಕದಮ್ ಕುವಾನ್‌ನಲ್ಲಿರುವ ಚರಖಾ ಸಮಿತಿ ಕಟ್ಟಡದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್, ನಾನಾಜಿ ದೇಶಮುಖ್ ಸೇರಿದಂತೆ ದೇಶಾದ್ಯಂತದ ಹಲವು ಮುಖಂಡರು ಭಾಗವಹಿಸಿದ್ದರು. ಕರ್ಪೂರಿ ಠಾಕೂರ್ ಅವರು ಹರಿದ ಕುರ್ತಾ ಮತ್ತು ಹರಿದ ಚಪ್ಪಲಿಯೊಂದಿಗೆ ಆಗಮಿಸಿದ್ದರು.

ಚಂದ್ರಶೇಖರ್ ಅವರು ಇದನ್ನು ಗಮನಿಸಿದ ನಂತರ ಸಭೆಯಲ್ಲಿ ಒಬ್ಬ ನಾಯಕ ಮುಖ್ಯಮಂತ್ರಿಯಾಗಿ ಉತ್ತಮರೀತಿಯಲ್ಲಿ ಬದುಕಲು ಎಷ್ಟು ಸಂಬಳ ಪಡೆಯಬೇಕು? ಎಂದು ಪ್ರಶ್ನಿಸಿದರು. ಆಗ ಎಲ್ಲರೂ ನಗಲಾರಂಭಿಸಿದರು. ಆ ಕೂಡಲೇ ಅವರು ತಮ್ಮ ಆಸನದಿಂದ ಎದ್ದು ನಿಂತು ತಮ್ಮ ಕುರ್ತಾವನ್ನು ಹರಡಿದರು. ಕರ್ಪೂರಿ ಅವರ ಕುರ್ತಾ ನಿಧಿಗೆ ದೇಣಿಗೆ ನೀಡಿ ಎಂದು ಘೋಷಿಸಿದರು. ನೂರಾರು ರೂಪಾಯಿ ಹಣ ಸಂಗ್ರಹವಾಯಿತು. ಆ ಕೂಡಲೇ ಕರ್ಪೂರಿ ಠಾಕೂರ್ ಅವರನ್ನು ಚಂದ್ರಶೇಖರ್ ಅವರು ”ಈ ಹಣದಿಂದ ನೀವು ಕುರ್ತಾ-ಧೋತಿಯನ್ನು ಮಾತ್ರ ಖರೀದಿಸುತ್ತೀರಾ” ಎಂದು ಕೇಳಿದರು. ಆಗ, ಅವರು ”ನಾನು ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇನೆ” ಎಂದು ಘೋಷಿಸಿದ್ದರು.

ಕರ್ಪೂರಿ ಠಾಕೂರ್ ಅವರು ಇಪ್ಪತ್ತರ ದಶಕದಲ್ಲೇ ಬಿಹಾರದಲ್ಲಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಮೂಲಕ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಅನುಭವಿಸುವಂತೆ ಮಾಡಿದವರು.

ಹಾಗೆ ನೋಡಿದರೆ ಅವರು ಹೆಚ್ಚು ಕಾಲ ಬಿಹಾರ ರಾಜ್ಯದ ಮುಖ್ಯಮಂತ್ರಿ ಆಗಿರಲಿಲ್ಲ. ಕಾಂಗ್ರೆಸ್ ವಿರೋಧಿ ರಾಜಕಾರಣದ ಭಾಗವಾಗಿದ್ದ ಅವರು ಅತ್ಯಂತ ಕಡಿಮೆ ಅವಧಿಗಷ್ಟೆ ಮುಖ್ಯಮಂತ್ರಿ ಆಗಿದ್ದರು. ಜೊತೆಗೆ ಅವರು ಹಿಂದುಳಿದ ಸಮುದಾಯದ ರಾಜಕೀಯ ನಡೆಗೆ ಹೆದ್ದಾರಿ ನಿರ್ಮಿಸಿದವರು.
ಈ ಹೊತ್ತು ಬಿಹಾರದ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ಮುಖ್ಯಮಂತ್ರಿ ನಿತೀಶಕುಮಾರ್, ಲಾಲುಪ್ರಸಾದ್ ಯಾದವ್ ಸೇರಿದಂತೆ ಅಸಂಖ್ಯಾತ ರಾಜಕಾರಣಿಗಳನ್ನು ಕರ್ಪೂರಿ ಠಾಕೂರ್ ಅವರು ಬೆಳೆಸಿದ್ದಾರೆ.

ಬಿಹಾರಿನ ಹಿಂದುಳಿದ ವರ್ಗಗಳಿಗೆ ಆತ್ಮಬಲ ನೀಡಿದ ಅವರು ವಿಶೇಷವಾಗಿ ಶಿಕ್ಷಕರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದವರು. ಬಿಹಾರಿನ ಫ್ಯೂಡ್‌ಲ್ ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಯಾವುದೇ ನಿರ್ಣಾಯಕ ಪಾತ್ರ ಇರಲಿಲ್ಲ. ಲೋಹಿಯಾ ಸಿದ್ಧಾಂತದಲ್ಲಿ ಅಪಾರ ನಂಬಿಕೆ ಇರಿಸಿರುವ ಮತ್ತು ಜಯಪ್ರಕಾಶ್ ನಾರಾಯಣರ ಸಂಪೂರ್ಣ ಕ್ರಾಂತಿಯಿಂದ ಪ್ರಭಾವಿತರಾಗಿದ್ದ ಅವರು ಸಿಕ್ಕ ಕಡಿಮೆ ಮತ್ತು ಸೀಮಿತ ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗಗಳಲ್ಲಿ ಸ್ವಾಭಿಮಾನದ ಕೆಚ್ಚು ಮೂಡಿಸಿದವರು.
ಯುಪಿಎ ಸರ್ಕಾರದಲ್ಲಿ ಹಿರಿಯ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದ ನಿತೀಶಕುಮಾರ್ ಅವರು ತಮಗೆ ರಾಜಕೀಯ ಬದುಕು ನೀಡಿದ ಗುರು ಕರ್ಪೂರಿ ಠಾಕೂರ ಅವರಿಗೆ ಯಾವತ್ತೋ ಭಾರತ ರತ್ನ ಕೊಡಿಸಬಹುದಿತ್ತು. ಆದರೆ, ಕೊಡಿಸದೆ ಗುರುವನ್ನೇ ಮರೆತ ಅವಕಾಶವಾದಿಗಳು ಎಂಬುದು ಸಾಬೀತಾದ ಸತ್ಯ.

ಧೀಮಂತ ರಾಜಕಾರಣಿ ಕರ್ಪೂರಿ ಠಾಕೂರ್ ಅವರನ್ನು ಮರೆತಂತೆ ರಾಜ್ಯದಲ್ಲೂ ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಉದ್ದಾರಕ ದೇವರಾಜ ಅರಸು ಅವರನ್ನು ಅವರ ಫಲಾನುಭವಿಗಳೇ ಮರೆತಿದ್ದಾರೆ. ವೀರಪ್ಪ ಮೋಯಿಲಿ, ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡಿಸ್ ಅವರುಗಳು ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದರು. ಆದರೆ, ಅವರು ಯಾರೂ ದೇವರಾಜ ಅರಸು ಅವರಿಗೆ ಭಾರತ ರತ್ನ ಕೊಡಿಸಲು ಪ್ರಯತ್ನಿಸಲಿಲ್ಲ. ಹಿಂದುಳಿದ ವರ್ಗಗಳ ಉದ್ದಾರಕ ಅರಸು ಅವರಿಗೆ ಆ ಭಾಗ್ಯ ಸಿಗಲಿಲ್ಲ.

ಕರ್ಪೂರಿ ಠಾಕೂರ ಅವರಿಗೆ ಭಾರತ ರತ್ನ ನೀಡಿದ ಈ ಸಂದರ್ಭದಲ್ಲಾದರೂ ರಾಜ್ಯದ ನಿಜ ಸಾಧಕರನ್ನು ಗೌರವಿಸುವ ಕೆಲಸ ಆಗಲಿ. ಕರ್ಪೂರಿ ಠಾಕೂರ್ ಹಿಂದುಳಿದ ವರ್ಗಗಳ ಏಳ್ಗೆ ಬಯಸುವ ಎಲ್ಲರಿಗೂ ಬಹು ದೊಡ್ಡ ಆದರ್ಶ ಕೇಂದ್ರ ಸರ್ಕಾರ ಈಗ ಘೋಷಿಸಿರುವ ಭಾರತ ರತ್ನ ದಿ. ಕರ್ಪೂರಿ ಠಾಕೂರ್ ಅವರಿಗೆ ಯಾವ ಕಾಲದಲ್ಲೋ ಸಲ್ಲಬೇಕಾಗಿತ್ತು. ಈಗ ತಡವಾಗಿಯಾದರೂ ಅವರಿಗೆ ಈ ಗೌರವ ಸಿಕ್ಕಿದೆ. ಇದು ಸಂತಸದ ವಿಷಯ. ಆದರೆ, ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ಕಣ್ಣಿಗೆ ಕಾಣದ ಇವರು ಇದೀಗ ಲೋಕಸಭಾ ಚುನಾವಣೆ ಎದುರಾಗುತ್ತಿರುವ ಸಂದರ್ಭದಲ್ಲಿ ಕಂಡಿದ್ದರ ಹಿಂದೆ ರಾಜಕೀಯ ಲಾಭದ ಉದ್ದೇಶ ಇರಬಾರದು. ಒಂದಂತೂ ಸ್ಪಷ್ಟ, ಠಾಕೂರ್ ಅವರು ಇಹಲೋಕ ತ್ಯಜಿಸಿ ಸುದೀರ್ಘ ಮೂರೂವರೆ ದಶಕಗಳೇ ಕಳೆದಿವೆ. ಇದುವರೆಗೂ ಆವರ ಅಳಿಲು ಸೇವೆಯನ್ನು ಯಾವ ಸರ್ಕಾರಗಳೂ ಗುರುತಿಸಿರಲಿಲ್ಲ. ಕೊನೆಗೂ ಆ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಪೂರೈಸಿರುವುದು ಶ್ಲಾಘನೀಯ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಹಾರಿನ ದೇವರಾಜ ಅರಸು ಕರ್ಪೂರಿ ಠಾಕೂರ ಅವರಿಗೆ ಭಾರತ ರತ್ನ ನೀಡಿದ್ದು ಅಭಿನಂದನಿಯ ಕಾರ್ಯ ಎಂದು ಶ್ಲಾಘಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ. ಇದು ಅವರ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಸಾರಿದೆ. ಇಂತಹ ಗುಣ ಬಹುತೇಕ ಸಮಾಜವಾದಿ ನಾಯಕರಲ್ಲಿ ಮಾತ್ರ ಕಾಣಲು ಸಾಧ್ಯ.

ಇದು ಕರ್ಪೂರಿ ಠಾಕೂರ್ ಅವರ ನಿಸ್ವಾರ್ಥ ಸೇವೆಗೆ ದಕ್ಕಿದ ಗೌರವ. ಅವರು ತಮ್ಮ ಬದುಕಿನ ಉದ್ದಕ್ಕೂ ಅತ್ಯಂತ ಸರಳವಾಗಿಯೇ ಜೀವಿಸಿ ಎಲ್ಲಾ ರಾಜಕಾರಣಿಗಳಿಗೂ ಆದರ್ಶಪ್ರಾಯರಾಗಿರುವುದಕ್ಕೆ ದೊರೆತ ಅತಿ ದೊಡ್ಡ ಮನ್ನಣೆ. ಸ್ವಂತ ಕಾರು ಮತ್ತು ಸ್ವಂತ ಮನೆ ಎರಡೂ ಇಲ್ಲದೆ ಬದುಕನ್ನು ಸಮಾಜಸೇವೆಯ ಹಾದಿಯಲ್ಲಿ ಪರಿಪೂರ್ಣಗೊಳಿಸಿದ ಉದಾರವಾದಿಗೆ ಸಂದ ದೊಡ್ಡ ಕೊಡುಗೆ. ಹೀಗಾಗಿ ಅವರ ಜನ್ಮ ಶತಮಾನೋತ್ಸವದ ದಿನದಂದೇ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿದ್ದು ಒಳ್ಳೆಯ ನಿರ್ಧಾರ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments