ಸರ್ಕಾರಕ್ಕೆ 100 ದಿನ ಪೂರ್ಣಗೊಳ್ಳುವ ಹೊತ್ತಿನಲ್ಲೇ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಲಾಗುತ್ತಿದೆ
100% ಸತೀಶ್ ಜಾರಕಿಹೊಳಿ ಪರ ನಾವಿದ್ದೇವೆ. ಬಿಜೆಪಿಯವರಿಗೆ ದಲಿತ ನಾಯಕರ ಬೆಳವಣಿಗೆಯನ್ನು ಸಹಿಸಲಾಗುತ್ತಿಲ್ಲ.
ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿಯವರು ರಾಜಕೀಯಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಮಾತನಾಡಿದ ಶಿವಕುಮಾರ್, “ಈ ಹಿಂದೆಯೂ ದಾಳಿ ಮಾಡಿದ್ದರು. ಸತೀಶ್ ಜಾರಕಿಹೊಳಿ ಹಿರಿಯ ಸಚಿವರಾಗಿದ್ದು, ರಾಜಕಾರಣದ ಜೊತೆಗೆ ವ್ಯವಹಾರ ಮತ್ತು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರು ಕಾನೂನಿನ ಚೌಕಟ್ಟಿನಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ಇಡಿ ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲಿದ್ದಾರೆ. ಹೀಗಾಗಿ ಯಾರೂ ಗಾಬರಿಯಾಗಬೇಕಿಲ್ಲ. ಸಂಬಂಧಿಕರ ವ್ಯವಹಾರಗಳ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಸತೀಶ್ ಜಾರಕಿಹೊಳಿ ಪ್ರಾಮಾಣಿಕ ರಾಜಕಾರಣಿ, ಅವರು ಯಾವುದೇ ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ 100 ದಿನ ಪೂರ್ಣಗೊಳ್ಳುವ ಹೊತ್ತಿನಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಸಂದರ್ಭದಲ್ಲಿ ಇಂತಹ ತನಿಖಾ ಕ್ರಮಗಳು ನಡೆಯುತ್ತಿರುವುದು ರಾಜಕೀಯ ಪ್ರೇರಿತ ಉದ್ದೇಶ ಹೊಂದಿದೆ ಎಂದು ಅವರು ಆರೋಪಿಸಿದರು. “ನಮ್ಮ ಸರ್ಕಾರ ಮತ್ತು ಪಕ್ಷವನ್ನು ಎಲ್ಲ ಕಡೆಗಳಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. 100 ದಿನಗಳ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗಿದೆ” ಎಂದು ಹರಿಹಾಯ್ದರು.
ದಲಿತ ನಾಯಕರ ಬೆಳವಣಿಗೆ ಸಹಿಸದ ಬಿಜೆಪಿ
ಸತೀಶ್ ಜಾರಕಿಹೊಳಿ ಅವರು ಪ್ರಬಲವಾಗಿ ಬೆಳೆಯುತ್ತಿರುವ ನಾಯಕನಾಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ ಎಂದು ಸಿಎಂ ಹೇಳಿದರು. “ಅವರನ್ನು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಇದು ಅವರಿಗೆ ತಿರುಗುಬಾಣವಾಗಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನನ್ನ ಮೇಲೂ ದಾಳಿ ಮಾಡಿ ಬಂಧಿಸಿದ್ದರು. ಆದರೆ ಇಂದು ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ” ಎಂದರು.
ನಾಗೇಂದ್ರ ಅವರ ಮೇಲಿನ ದಾಳಿ ಪ್ರಕರಣವನ್ನು ಉಲ್ಲೇಖಿಸಿ, “ಯಾವುದೇ ತಪ್ಪು ಮಾಡಿರಲಿಲ್ಲ. ಬ್ಯಾಂಕ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ನಾವೇ ಹೇಳಿದ್ದು. ₹84 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಸ್ಪಷ್ಟಪಡಿಸಲಾಗಿತ್ತು. ಸಿಐಡಿ ಹಾಗೂ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿ ₹79 ಕೋಟಿ ಹಣವನ್ನು ವಾಪಸ್ ಪಡೆದಿದ್ದಾರೆ. ಇನ್ನೂ ₹5 ಕೋಟಿ ಮಾತ್ರ ಬಾಕಿ ಉಳಿದಿದೆ. ನಾಗೇಂದ್ರ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ ಬಳಿಕವೂ ಈ ವಿಚಾರವನ್ನು ರಾಜಕೀಯಗೊಳಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ಶಾಸಕರು, ಸಚಿವರಿಗೆ ಎಚ್ಚರಿಕೆ
ಮುಂದಿನ ದಿನಗಳಲ್ಲಿ ಇನ್ನೂ ಹಲವು ಕಾಂಗ್ರೆಸ್ ನಾಯಕರು, ಸಚಿವರು ಮತ್ತು ಶಾಸಕರ ಮೇಲೂ ತನಿಖಾ ಸಂಸ್ಥೆಗಳ ಕ್ರಮ ನಡೆಯುವ ಸಾಧ್ಯತೆ ಇದೆ ಎಂದು ಸಿಎಂ ಎಚ್ಚರಿಕೆ ನೀಡಿದರು. “ಪಕ್ಷದ ಎಲ್ಲ ಶಾಸಕರು ಮತ್ತು ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ತನಿಖೆಗೆ ನಾವು ಹೆದರುವುದಿಲ್ಲ. ಆದರೆ ಸುಳ್ಳು ಕಥೆ ಕಟ್ಟುವುದು, ಸುಳ್ಳು ಆರೋಪ ಮಾಡುವುದು ಹಾಗೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಖಂಡಿಸುತ್ತೇವೆ” ಎಂದರು.
ಕಾಂಗ್ರೆಸ್ ಸರ್ಕಾರ ಸತೀಶ್ ಜಾರಕಿಹೊಳಿಯವರ ಬೆಂಬಲಕ್ಕೆ ನಿಲ್ಲುತ್ತದೆಯೇ ಎಂಬ ಪ್ರಶ್ನೆಗೆ, “ನಾವು ನೂರಕ್ಕೆ ನೂರು ಬೆಂಬಲ ನೀಡುತ್ತೇವೆ. ಸಚಿವರ ಕುಟುಂಬದವರ ಮೇಲೆಯೂ ಇಡಿ ದಾಳಿ ನಡೆಸಿರುವುದು ದುರದೃಷ್ಟಕರ. ಅವರು ಒಬ್ಬ ಪ್ರಗತಿಪರ, ದೂರದೃಷ್ಟಿಯುಳ್ಳ ಪ್ರಾಮಾಣಿಕ ರಾಜಕಾರಣಿ. ಅವರು ಯಾವುದೇ ತಪ್ಪು ಎಸಗಿಲ್ಲ ಎಂಬ ವಿಶ್ವಾಸ ನನಗಿದೆ” ಎಂದು ಉತ್ತರಿಸಿದರು.
ಎಲ್ಲ ವರ್ಗದವರೂ ಸಮಾನರು
ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದಾರಾ? ಎಂದು ಕೇಳಿದಾಗ, “ಖಂಡಿತವಾಗಿಯೂ ನಮ್ಮ ಸರ್ಕಾರವನ್ನು, ನಮ್ಮ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಪೌರ ಕಾರ್ಮಿಕರ ಪುತ್ರನನ್ನು ಮುಜರಾಯಿ ಸಚಿವರನ್ನಾಗಿ ಮಾಡಿದೆ. ದೇವರು ಎಲ್ಲರಿಗೂ ಸೇರಿದವನು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮೇಲ್ವರ್ಗದವರು ಎಲ್ಲರೂ ಸಮಾನರು ಎಂಬುದು ನಮ್ಮ ಸರ್ಕಾರದ ಚಿಂತನೆ. ಪರಿಶಿಷ್ಠ ಜಾತಿಗೆ ಸೇರಿದ ನಾಯಕರನ್ನು ಮುಗಿಸಲು ಬಿಜೆಪಿಯವರು ಮುಂದಾಗಿದ್ದಾರೆ” ಎಂದು ತಿರುಗೇಟು ನೀಡಿದರು.
ವಿದೇಶಿ ವ್ಯವಹಾರ ತಪ್ಪಲ್ಲ
ಇಡಿ FEMA ಕಾಯ್ದೆ ಉಲ್ಲಂಘನೆಯಡಿ ದಾಳಿ ನಡೆಸಿದೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಭಾರತದಲ್ಲಿದ್ದುಕೊಂಡು ವಿದೇಶದಲ್ಲಿ ಹೂಡಿಕೆ, ವ್ಯಾಪಾರ ಮಾಡಲು ಕಾನೂನಿನಡಿ ಅವಕಾಶವಿದೆ. ಅವರ ಕುಟುಂಬ ಸದಸ್ಯರು ವಿದೇಶದಲ್ಲಿ ವ್ಯವಹಾರ ಮಾಡುವುದು ತಪ್ಪಲ್ಲ. ಈ ಇಡಿ ದಾಳಿಯನ್ನು ರಾಜಕೀಯ ಉದ್ದೇಶದಿಂದ ಮಾಡಲಾಗಿದೆ” ಎಂದರು.
“ನೂರು ಪ್ರತಿಭಟನೆ ಮಾಡಲಿ, ನೂರು ಹೋರಾಟ ಮಾಡಲಿ, ನೂರು ಪತ್ರಿಕಾಗೋಷ್ಠಿ ನಡೆಸಲಿ ನಾವು ಯಾವುದಕ್ಕೂ ಹೆದರುವುದಿಲ್ಲ” ಎಂದು ಸಿಎಂ ಸ್ಪಷ್ಟಪಡಿಸಿದರು.
ಕೆಪಿಎಸ್ ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ತಪ್ಪೆಸಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಶಿವಕುಮಾರ್, “ಕಾನೂನಿನ ಚೌಕಟ್ಟನ್ನು ಮೀರಿ ನಾವು ಯಾರಿಗೂ ಸಹಾಯ ಮಾಡಿಲ್ಲ. ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ನಮಗೆ ದೇಶ ಹಾಗೂ ರಾಜ್ಯದ ಹಿತಾಸಕ್ತಿ ಪ್ರಮುಖವಾಗಿದೆ” ಎಂದು ತಿಳಿಸಿದರು.


