ತಮಿಳುನಾಡಿನ ರಾಜಕಾರಣದಲ್ಲಿ ಕಡುವೈರಿ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ನಡೆದರೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಎಲ್ಲ ಶಾಸಕರ ರಾಜೀನಾಮೆ ಖಚಿತ ಎಂದು ಸರ್ಕಾರ ರಚನೆಯ ಸಮೀಪದಲ್ಲಿರುವ ದಳಪತಿ ವಿಜಯ್ ಘೋಷಿಸಿರುವ ಬಗ್ಗೆ ವರದಿಯಾಗಿದೆ.
ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ, ತಮಿಳುನಾಡಿನ ರಾಜಕಾರಣದ ದಿಕ್ಕನ್ನೇ ಸಂಪೂರ್ಣವಾಗಿ ಬದಲಾಯಿಸುವ ಲಕ್ಷಣಗಳು ಕಂಡುಬರುತ್ತಿವೆ. ಒಂದು ಕಡೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲ ಕ್ರೂಢೀಕರಿಸಲು ಹರಸಾಹಸಪಡುತ್ತಿದೆ.
ಮತ್ತೊಂದು ಕಡೆ ತಮಿಳುನಾಡಿನ ರಾಜಕಾರಣದಲ್ಲಿ ಕಡುವೈರಿ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಸಾಧ್ಯತೆಯ ಮಾತುಗಳು ಕೇಳಿಬರುತ್ತಿವೆ. ಇದು ನಿಜವಾದರೆ ತಮಿಳುನಾಡಿನ ರಾಜಕಾರಣ ಮಗ್ಗಲು ಬದಲಿಸುವುದು ಖಂಡಿತವಾಗಿಯೂ ಸತ್ಯ
ನಿನ್ನೆ ಗುರುವಾರ ನಡೆದ ನಾಯಕರ ಹಾಗೂ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಿದೆ. ಸಾರ್ವಜನಿಕವಾಗಿ ಇದನ್ನು ನಿರಾಕರಿಸಿದರೂ, ಮೈತ್ರಿಗೆ ಇನ್ನೂ ಬಾಗಿಲು ತೆರೆದೇ ಇದೆ ಎಂಬ ಸೂಚನೆ ಇದರಿಂದ ದೊರಕಿದೆ.
ಎಂ ಕೆ ಸ್ಟಾಲಿನ್ ಅವರು “ಆರು ತಿಂಗಳೊಳಗೆ ಮತ್ತೊಮ್ಮೆ ಚುನಾವಣೆ ಎದುರಿಸಲು ಪಕ್ಷ ಸಿದ್ಧವಿಲ್ಲ” ಎಂದು ಖಚಿತವಾಗಿ ಹೇಳಿದ್ದಾರೆ. ಟಿವಿಕೆ ಸರ್ಕಾರ ರಚಿಸುವುದನ್ನು ಡಿಎಂಕೆ ತಡೆಯುವುದಿಲ್ಲ. ಆದರೆ ಅವರಿಗೆ ಬೇಕಾದ ಬಹುಮತ ಸಿಗದಿದ್ದರೆ, ನಾವು ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಿಲ್ಲ. ಆದರೆ ಸ್ಥಿರ ಸರ್ಕಾರಕ್ಕಾಗಿ ಎಐಎಡಿಎಂಕೆಗೆ ಹೊರಗಿನಿಂದ ಬೆಂಬಲ ನೀಡಬಹುದು ಎಂದು ವರದಿಯಾಗಿದೆ.


