ಕಿಸಿತೀನಿ ಕಿಸಿತೀನಿ ಅಂತ ಬರೀ ಬಾಯಿ ಹರಿದುಕೊಳ್ಳುತ್ತಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರೇ ‘ಕುಣಿಯಲಾರದವರಿಗೆ ನೆಲ ಡೊಂಕು’ ಎನ್ನುವಂತೆ ನಿಮ್ಮ ಯೋಗ್ಯತೆಗೆ 3 ವರ್ಷವಾದರೂ ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಕಸದ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮಂಗಳವಾರ ನಡೆದ ‘ಸಾರ್ಥಕ ಸೇವೆಯ ಸಮರ್ಪಣೆ’ ಸಮಾವೇಶದಲ್ಲಿ ಶಿವಕುಮಾರ್ ಅವರು ಮಾತನಾಡುತ್ತ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಹರಿಹಾಯ್ದಿದ್ದರು. ಇದಕ್ಕೆ ಎಕ್ಸ್ ಖಾತೆಯಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನಿಮ್ಮ ಸಾಧನೆ 000!!! ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ. ಮಳೆಗೆ ಬೆಂಗಳೂರು ಮುಳುಗುತ್ತಿದೆ, ಕೈಚೆಲ್ಲಿ ಕೂತಿದ್ದೀರಿ. ಕುರ್ಚಿ ಸಿಗದಿರುವ ಹತಾಶೆಯಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತಿದ್ದೀರಿ ಎಂದು ಟೀಕಿಸಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರ ಮತ್ತು ನಿಮ್ಮಂತಹ ʼಕೈ’ಲಾಗದ ವ್ಯಕ್ತಿಗಳು ಹೆಚ್.ಡಿ. ಕುಮಾರಸ್ವಾಮಿಯವರ ವಿರುದ್ಧ ಮಾತನಾಡುವುದು ಹತಾಶೆಯನ್ನು ತೋರಿಸುತ್ತಿದೆ ಅಷ್ಟೇ ಎಂದು ಕುಟುಕಿದ್ದಾರೆ.


