Homeಕರ್ನಾಟಕರೈತರಿಗೆ ಬರ ಪರಿಹಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಸಚಿವ ಚಲುವರಾಯಸ್ವಾಮಿ

ರೈತರಿಗೆ ಬರ ಪರಿಹಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಸಚಿವ ಚಲುವರಾಯಸ್ವಾಮಿ

ರಾಜ್ಯದ 216 ತಾಲ್ಲೂಕುಗಳಲ್ಲಿ ಬರವಿದ್ದರೂ ಇನ್ನೂ ಕೇಂದ್ರದ ನೆರವು ಸಿಕ್ಕಿಲ್ಲ. ಆದರೆ, ರಾಜ್ಯ ಸರ್ಕಾರ ರೈತರ ಹಿತ ಕಾಯುವುದನ್ನು ಮರೆಯಲ್ಲ. ನ. 9 ರಂದು ನಡೆಯುವ ಸಂಪುಟ ಸಭೆಯಲ್ಲಿ ರೈತರಿಗೆ ನೀಡಬೇಕಾದ ನೆರವು ಕುರಿತು ಚರ್ಚಿಸಿಲಾಗುವುದು ಎಂದು ಕೃಷಿ ಸಚಿವ ಎನ್‌ ಚಲುವರಾಯಸ್ವಾಮಿ ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿ ಬರ ವೀಕ್ಷಣೆ ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ, ನಂತರ ಅವರು ಸುದ್ದಿಗಾರರರೊಂದಿಗೆ ಅವರು ಮಾತನಾಡಿದರು.

“ಕೇಂದ್ರ ಸರ್ಕಾರದ ಬರ ಆಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ತೆರಳಿದೆ, ಆದರೆ, ಈವರಗೂ ಅನುದಾನ ದೊರೆತಿಲ್ಲ. ರಾಜ್ಯ ಸರ್ಕಾರ ರೈತರ ಪರವಾಗಿ ನಿಲ್ಲಲಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಕೂಲಿ ಹಣ ಬಾಕಿ 3 ತಿಂಗಳಿಂದ ಬೆಡುಗಡೆ ಮಾಡಿರಲಿಲ್ಲ. ತಾವು, ಸಚಿವರಾದ ಕೃಷ್ಣಾ ಬೈರೇಗೌಡ, ಪ್ರಿಯಾಂಕ ಖರ್ಗೆ ಮತ್ತಿತರರು ದೆಹಲಿಗೆ ತೆರಳಿ ಮನವಿ ಮಾಡಿದ ನಂತರ 720 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ” ಎಂದು ಹೇಳಿದರು.

ರಸಗೊಬ್ಬರ ಬಳಕೆ ಬಗ್ಗೆ ಜಾಗೃತಿ

“ರೈತರಿಗೆ ರಸಗೊಬ್ಬರ, ಕೀಟನಾಶಕಗಳ ನಿಯಮಿತ ಬಳಕೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಭೂಮಿಯ ಸಾರ ಉಳಿಸಿ. ಜಿಲ್ಲೆಯಲ್ಲಿ ಈ ಬಾರಿ ಬಿತ್ತನೆ ಕಡಿಮೆಯಾದರೂ ರಸಗೊಬ್ಬರ ಬಳಕೆ ಹೆಚ್ಚಾಗಿದೆ. ಇದು ಮಣ್ಣಿನ ಫಲವತ್ತತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹಾಗಾಗಿ ಕೃಷಿಕರಿಗೆ ಅರಿವು ಮೂಡಿಸಿ” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

“ಕೃಷಿ ವಿಜ್ಞಾನಿಗಳು ರೈತರಿಗೆ ಲಾಭದಾಯಕ ಹಾಗೂ ಆರೋಗ್ಯ ಪೂರ್ಣ ಬೇಸಾಯ ಪದ್ದತಿ ಬಗ್ಗೆ ಅರಿವು ಮೂಡಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ಇದನ್ನು ಸಮನ್ವಯ ಮಾಡಬೇಕಿದೆ. ರೈತರಿಗೆ ಬೆಳೆ ವಿಮೆ ಅನುಕೂಲಗಳ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೆ ಸರ್ಕಾರದ ಎಲ್ಲ ಯೋಜನೆಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿಸಬೇಕು” ಎಂದು ಸಚಿವರು ಸೂಚಿಸಿದರು.

ಪ್ರಗತಿ ಪರಿಶೀಲನೆ ಸಭೆಗೂ ಮುನ್ನ ಚಲುವರಾಯಸ್ವಾಮಿ ಅವರು ರಾಯಚೂರು ತಾಲ್ಲೂಕಿನ ತುಂಟಾಪುರ ಗ್ರಾಮದ ಬರಪೀಡಿತ ಹತ್ತಿ ಬೆಳೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದ ನರಸಿಂಹಲು ಅವರ ಜಮೀನಿಗೆ ಭೇಟಿ ನೀಡಿದ ಸಚಿವರು ರೈತರ ಅಹವಾಲು ಆಲಿಸಿದರು.

“ಸರ್ಕಾರದ ಪರಿಹಾರ ನಿರೀಕ್ಷೆ ಮಾಡುವ ಜೊತೆಗೆ ರೈತರು ಪ್ರತಿವರ್ಷವೂ ಬೆಳೆ ವಿಮೆ ಮಾಡಿಸುವುದು ಅಗತ್ಯ ಎಂದು ಸಚಿವರು ವಿವರಿಸಿದರು. ಇದೇ ವೇಳೆ ರೈತರು ಉಳಿದ ಬೆಳೆಗಳ ಬಿತ್ತನೆ ಬೀಜಗಳಿಗೆ ನೀಡುವ ರೀಯಾಯಿತಿಯನ್ನೂ ಬಿಟಿ ಹತ್ತಿ ಬೀಜಕ್ಕೂ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

“ಫ್ರೋಟ್ ಆಧಾರಿತ ಅಧಿಕೃತ ದತ್ತಾಂಶ ಆಧಾರದ ಮೇಲೆ ಭಾರತೀಯ ಹತ್ತಿ ಕಾರ್ಪೊರೇಷನ್ ವತಿಯಿಂದ ರೈತರು ಬೆಳೆದ ಹತ್ತಿಯನ್ನು ಕನಿಷ್ಟ ಬೆಂಬಲ ಬೆಲೆಯೊಂದಿಗೆ ಖರೀದಿಸಲು ಕನಿಷ್ಟ ಬೆಂಬಲ ಬೆಲೆ ನಿಗಧಿಮಾಡಲು ರಚಿಸಿದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು” ಎಂದು ಸಚಿವರು ರೈತರಿಗೆ ತಿಳಿಸಿದರು.

“ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಎಂದಿನಂತಿದೆ. ಆದರೆ ಬಳಕೆ ಹೆಚ್ಚಿರುವುದರಿಂದ ಪಂಪ್ ಸೆಟ್ ಗಳಿಗೆ 5-7 ಗಂಟೆ ಶಿಫ್ಟ್ ಆಧಾರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಸಗೊಬ್ಬರ ಬಿತ್ತನೆ ಬೀಜದ ಪೂರೈಕೆ ಕೊರತೆ ಇಲ್ಲ. ರೈತರ ಅನುಕೂಲಕ್ಕಾಗಿ ಏಕೀಕೃತ ಕರೆ ಕೇಂದ್ರ ಸ್ಥಾಪಿಸಲಾಗಿದೆ. ಕೃಷಿ ನವೋದ್ಯಮ ಪ್ರೋತ್ಸಾಹ, ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಯೋಜನೆ ಜಾರಿಗೊಳಿಸಲಾಗುತ್ತಿದೆ” ಎಂದು ಸಚಿವರು ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments