Homeಕರ್ನಾಟಕಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ ಎಂ ಬಸವರಾಜು ಅಮಾನತು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ ಎಂ ಬಸವರಾಜು ಅಮಾನತು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ ಎಂ ಬಸವರಾಜು ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾಗಿ ಈ ಹಿಂದೆ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ವಿರುದ್ಧ ಜಿಲ್ಲಾ ಕಚೇರಿ ಸಿಬ್ಬಂದಿಗಳಿಗೆ ಹಾಗೂ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಕಿರುಕುಳ, ಮಾನಸಿಕ ಹಿಂಸೆ, ಮಹಿಳಾ ಸಿಬ್ಬಂದಿಗಳ ಜೊತೆ ದುರ್ನಡತೆ, ದಬ್ಬಾಳಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿಬಂದಿದ್ದು, ಸಾರ್ವಜನಿಕರ ಮುಂದೆ ಸಿಬ್ಬಂದಿಗಳನ್ನು ಅವಮಾನಿಸುತ್ತಿದ್ದರು ಎನ್ನುವ ಆರೋಪಗಳಿವೆ.

ಅಲ್ಲದೇ ಕಚೇರಿ ಸಮಯ ಮುಗಿದ ನಂತರವೂ ಅವಶ್ಯಕತೆ ಇಲ್ಲದಿದ್ದರೂ ಮಹಿಳಾ ಸಿಬ್ಬಂದಿಗಳನ್ನು ರಾತ್ರಿ 8-9 ಗಂಟೆವರೆಗೆ ಕಚೇರಿಯಲ್ಲಿ ಉಳಿಯುವಂತೆ ಆದೇಶಿಸಿದ್ದರು. ಮನೆಗೆ ಹೋದ ಬಳಿಕವೂ ಸಿಬ್ಬಂದಿಗಳಿಗೆ ರಾತ್ರಿ 10-11 ಗಂಟೆಗೆ ಕರೆ ಮಾಡಿ ಕೆಲಸ ಹೇಳುತ್ತಿದ್ದರು. ಇಲಾಖೆಯ ಕಾರ್ಯಕ್ರಮ ನಡೆಯುತ್ತಿದ್ದಾಗ ಬೇರೆ ಇಲಾಖೆ ಅಧಿಕಾರಿಗಳ ಎದುರಿಗೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳನ್ನು ಕೆಟ್ಟ ಶಬ್ದಗಳಿಂದ ಬೈದು ಅವಮಾನಿಸುತ್ತಿದ್ದರು.

ಸಿಬ್ಬಂದಿಗಳಿಗೆ ಯೋಗ್ಯತೆ ಇಲ್ಲ, ದನ ಕಾಯೋನು, ಯೂಸ್ ಲೆಸ್ ಫೆಲೋ, ಕತ್ತೆ ಮೇಯಿಸೋಕೆ ಹೋಗಿ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಕಾಲಕಾಲಕ್ಕೆ ಕಡತಗಳನ್ನು ಸಿಬ್ಬದಿಗಳು ತಯಾರಿಸಿಕೊಟ್ಟರೂ ಮೇಲಧಿಕಾರಿಗಳ ಬಳಿ ಹೋಗಿ ಕಡತಕ್ಕೆ ಸಹಿ ಹಾಕಿಸಿಕೊಂಡು ಬರದೇ ಕೆಲಸದಲ್ಲಿ ವಿಳಂಬ ಧೋರಣೆ ಅನುಸರಿಸುತ್ತ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳು ಬಸವರಾಜು ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.

ಅಲ್ಲದೇ ಚಿಕ್ಕೋಡಿ ಸಂಸದ ಅಣ್ಣಸಾಹೇಬ ಜೊಲ್ಲೆ ಸೇರಿದಂತೆ ಹಲವರು ಎ.ಎಂ.ಬಸವರಾಜು ವಿರುದ್ಧ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರು. ಮಾತ್ರವಲ್ಲ ಬಸವರಾಜು ಅವರನ್ನು ಬೆಳಗಾವಿ ಜಿಲ್ಲೆಯಿಂದ ಬೇರೆಕಡೆಗೆ ವರ್ಗಾವಣೆ ಮಾಡಬಹುದಾಗಿದೆ ಅಥವಾ ಚುನಾವಣಾ ಕರ್ತವ್ಯದಿಂದ ನಿರ್ಭಂದಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದರು.

ಇತ್ತೀಚೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಮತ್ತೆ ಬೆಳಗಾವಿಗೆ ಆಗಮಿಸಿ ಹಾಲಿ ಉಪನಿರ್ದೇಶಕ ನಾಗರಾಜ ಅವರು ಸುವರ್ಣ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತನಗೆ ನ್ಯಾಯಾಲಯದಿಂದ ಆದೇಶವಾಗಿದೆ ಎಂದು ಹೇಳಿ ಕಚೇರಿಗೆ ಹಾಜರಾಗಿ ಸಿಬ್ಬಂದಿಯನ್ನು ಅವಾಚ್ಯವಾಗಿ ಬೈದು, ಅನುಚಿತವಾಗಿ ವರ್ತಿಸಿದ್ದರು ಎನ್ನುವ ಆರೋಪ ಬಸವರಾಜು ಮೇಲಿದೆ.

ಪರಿಶಿಷ್ಟ ಜಾತಿಯ ನೌಕರರಿಗೆ ಜಾತಿ ನಿಂದನೆ ಮಾಡಿದ ಆರೋಪ, ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ಮೊದಲಾದ ಆರೋಪಗಳು ಸಹ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್ ಬಸವರಾಜು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments