ದಾವಣಗೆರೆ: ಅರಣ್ಯ ಭೂಮಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಮತ್ತು ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಹೆಚ್ಚುವರಿ ಫಾರೆಸ್ಟ್ ಸೆಟಲ್ಮೆಂಟ್ ಅಧಿಕಾರಿ (ಎಸ್‌ಎಫ್ಓ)ಗಳನ್ನು ನಿಯೋಜಿಸುವುದಾಗಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ದಾವಣಗೆರೆ ಮತ್ತು ಕೊಪ್ಪಳ ಅರಣ್ಯ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, 25 -30 ವರ್ಷಗಳಿಂದ ಹಲವು ಪ್ರಕರಣ ಇತ್ಯರ್ಥ ಆಗದೆ ಉಳಿದಿದ್ದು, ಇದರಿಂದಾಗಿ ಬಡವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 3 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡವರಿಗೆ ತ್ವರಿತವಾಗಿ ನ್ಯಾಯಕೊಡಿಸುವಂತೆ ಮತ್ತು 1978ಕ್ಕೆ ಮುನ್ನ ಅರಣ್ಯದಲ್ಲಿದ್ದವರಿಗೆ ಹಕ್ಕು ಕೊಡಿಸಲು ಮುಂದಾಗಿದ್ದೇವೆ” ಎಂದರು.
ಹೊಸಪೇಟೆಯಲ್ಲಿ 5 ಕೋಟಿ ರೂ. ಕಾಮಗಾರಿ
“ಕರ್ನಾಟಕ ಕೈಗಾರಿಕಾ ಪುನಶ್ಚೇತನ ನಿಗಮ (ಕೆ.ಎಂ.ಇ.ಆರ್.ಸಿ.) ಅಡಿಯಲ್ಲಿ ಹೊಸಪೇಟೆಯಲ್ಲಿ ಡಿ.31ರಂದು 5 ಕೋಟಿ ರೂ. ಮೌಲ್ಯದ ಅರಣ್ಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ದಾವಣಗೆರೆ ಅರಣ್ಯ ವಿಭಾಗಕ್ಕೆ ಪ್ರಸ್ತುತ ಭದ್ರಾವತಿ ವಲಯದಲ್ಲಿರುವ ಮಾವಿನಕಟ್ಟೆ ಮತ್ತು ಚೆನ್ನಗಿರಿ ಅರಣ್ಯ ವಲಯವನ್ನು ಸೇರಿಸಿ ಅರಣ್ಯ ವಿಭಾಗ ಪುನರ್ ವಿಂಗಡಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು” ಸೂಚಿಸಿದರು.
“ಅರಣ್ಯ ಮತ್ತು ಸರ್ಕಾರಿ ಭೂಮಿ ಒತ್ತುವರಿ ತಡೆಯಲು ತೀರುವಳಿ ಭೂಮಿಯಲ್ಲಿ ಮರಗಳನ್ನು ಬೆಳೆಸಲು ಮತ್ತು ಆದ್ಯತೆಯ ಮೇಲೆ ಮೀಸಲು ಅರಣ್ಯ ಎಂದು ಘೋಷಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದ ಸಚಿವರು, ಪ್ರಸ್ತುತ ದಾವಣಗೆರೆ ವೃತ್ತದಲ್ಲಿರುವ 32 ಸಾವಿರ ಹೆಕ್ಟರ್ ಪರಿಭಾವಿತ ಅರಣ್ಯದಲ್ಲಿ ವಸತಿ ಪ್ರದೇಶ, ದೇವಸ್ಥಾನ, ಸ್ಮಶಾನಭೂಮಿ, ಅಂಗನವಾಡಿ, ಆಸ್ಪತ್ರೆ ಇತ್ಯಾದಿಗಳಿದ್ದರೆ, ಅವುಗಳನ್ನು ಕೈ ಬಿಡಲು ಮತ್ತು ಅದಕ್ಕೆ ಪರ್ಯಾಯವಾಗಿ ಭೂಮಿ ಗುರುತಿಸಿ ಸುಪ್ರೀಂಕೋರ್ಟ್‌ಗೆ ಐಎ ಸಲ್ಲಿಸಲು ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವೆ ಕಳುಹಿಸಲು ಕ್ರಮವಹಿಸುವಂತೆ” ಸೂಚಿಸಿದರು.