ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸದಂತೆ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಉಪ ರಾಷ್ಟ್ರಪತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
24 ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಸಹಿ ಮಾಡಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ನಾಸೀರ್ ಹುಸೇನ್ ಅವರು ಗೆದ್ದಿದ್ದು, ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದರು. ಇದು ಎಫ್ಎಸ್ಎಲ್ ವರದಿಯಲ್ಲೂ ಸಹ ದೃಢಪಟ್ಟಿದೆ. ಈ ಸಂಬಂಧ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೂ ನಾಸೀರ್ ಹುಸೇನ್ ಅವರಿಗೆ ಯಾವುದೇ ಕಾರಣಕ್ಕೂ ಪ್ರಮಾಣವಚನ ಬೋಧಿಸಬಾರದು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಆರ್ ಅಶೋಕ್ ಸ್ವಾಗತ
ಉಪರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದನ್ನು ವಿಪಕ್ಷ ನಾಯಕ ಆರ್ ಅಶೋಕ್ ಸ್ವಾಗತಿಸಿದ್ದಾರೆ. ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ರಾಜ್ಯಸಭಾ ಚುನಾವಣೆಯಲ್ಲಿ ಚುನಾಯಿತರಾಗಿರುವ ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ಅವರ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಘಟನೆ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬಾರದು ಎಂದು 17 ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಘನತೆವೆತ್ತ ಪರಾಷ್ಟಪತಿಗಳು ಹಾಗೂ ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಹಿರಿಯ ಅಧಿಕಾರಿಗಳ ನಿಲುವನ್ನು ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ” ಎಂದಿದ್ದಾರೆ.
“ದೇಶದ್ರೋಹಿಗಳನ್ನು ಪೋಷಿಸಿ, ಬೆಂಬಲಿಸಿ ಅವರು ರಾಷ್ಟ್ರ ವಿದ್ರೋಹದ ಪಾಪದ ಕೆಲಸ ಮಾಡಿದ ಮೇಲೂ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗೆ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ಒಳಗೆ ಪ್ರವೇಶಿಸುವ ಅರ್ಹತೆಯೇ ಇಲ್ಲ. ಇಂತಹ ವ್ಯಕ್ತಿಗಳಿಗೆ ರಾಜ್ಯಸಭಾ ಸದಸ್ಯತ್ವ ನೀಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಕಿಂಚಿತ್ತಾದರೂ ದೇಶಪ್ರೇಮವಿದ್ದರೆ ನಾಸಿರ್ ಹುಸೇನ್ ಅವರ ರಾಜೀನಾಮೆ ಪಡೆದು ಮರುಚುನಾವಣೆ ನಡೆಸಬೇಕು” ಎಂದು ಅಶೋಕ್ ಆಗ್ರಹಿಸಿದ್ದಾರೆ.