Homeಕರ್ನಾಟಕನೆನಪು | ರಾಜಕಾರಣದಲ್ಲಿ ಇಂಥವರಿರಬೇಕು ಎಂಬಂತೆ ಬಾಳಿದವರು ಡಿ ಬಿ ಚಂದ್ರೇಗೌಡ

ನೆನಪು | ರಾಜಕಾರಣದಲ್ಲಿ ಇಂಥವರಿರಬೇಕು ಎಂಬಂತೆ ಬಾಳಿದವರು ಡಿ ಬಿ ಚಂದ್ರೇಗೌಡ

ಐದು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದು ಕರ್ನಾಟಕದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲ ದಾರದಹಳ್ಳಿಯ ಧೀಮಂತ ರಾಜಕಾರಣಿ ಡಿ ಬಿ ಚಂದ್ರೇಗೌಡ. ರಾಜಕಾರಣಕ್ಕೆ ಗೌರವ, ಘನತೆ ತರುವ ಮೂಲಕ, ರಾಜಕಾರಣದಲ್ಲಿ ಇಂಥವರಿರಬೇಕು ಎಂದು ಬಯಸುವಂತೆ ಬದುಕಿ ಬಾಳಿದವರು.

ರಾಜಕಾರಣಿ ಎಂದರೆ ಗೇಲಿಗೆ, ತೀವ್ರ ಅಪಹಾಸ್ಯಕ್ಕೆ ಹಾಗೂ ಟೀಕೆಗೆ ಗುರಿಯಾಗುತ್ತಿರುವ ಇಂದಿನ ದಿನಗಳಲ್ಲಿ, ಗಂಭೀರ ಮತ್ತು ಮೇರು ವ್ಯಕ್ತಿತ್ವದಿಂದ ಮಾದರಿಯಾದವರು ಕರ್ನಾಟಕ ಕಂಡ ಹಿರಿಯ ರಾಜಕೀಯ ಮುತ್ಸದ್ದಿ ರಾಜಕಾರಣಿ ಡಿ ಬಿ ಚಂದ್ರೇಗೌಡ.

ರಾಜಕಾರಣಕ್ಕೆ ಗೌರವ, ಘನತೆ ತರುವ ಮೂಲಕ, ರಾಜಕಾರಣದಲ್ಲಿ ಇಂಥವರಿರಬೇಕು ಎಂದು ಬಯಸುವಂತೆ ಬದುಕಿ ಬಾಳಿದವರು. ನಾಡಿನ ಜನರ ನೆನಪಿನಲ್ಲಿ ಬಹುಕಾಲ ಉಳಿಯುವಂತಹ ವ್ಯಕ್ತಿತ್ವ ಇವರದಾಗಿತ್ತು. ಸ್ವತಃ ಡಿ ಬಿ ಚಂದ್ರೇಗೌಡ ಅವರೇ ಹೇಳಿದ ಹಾಗೆ, “ನೆನಪುಗಳನ್ನು ಕಳೆದುಹೋಗಲಿಕ್ಕೆ ಬಿಡಬಾರದು, ದಾಖಲಿಸಿ ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವಾಗಬೇಕು” ಎಂದಿದ್ದರು. ಹಾಗೇ ಬದುಕಿದವರು ಕೂಡ.

1936, ಆಗಸ್ಟ್ 26ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ಡಿ ಎ ಬೈರೇಗೌಡ ಮತ್ತು ಪುಟ್ಟಮ್ಮ ದಂಪತಿಗಳ ಪುತ್ರನಾಗಿ ಜನಿಸಿ, ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣವನ್ನು ಮತ್ತು ಬೆಳಗಾವಿಯ ಆರ್ ಎಲ್ ಕಾನೂನು ಕಾಲೇಜಿನಲ್ಲಿ ಎಲ್ ಎಲ್ ಬಿ ಪೂರ್ಣಗೊಳಿಸಿದ್ದರು.

22 ಮೇ 1966 ರಂದು ಪೂರ್ಣ ಎನ್ನುವರನ್ನು ವಿವಾಹವಾದರು. ವಕೀಲರಾಗಿ ವೃತ್ತಿ ಆರಂಭಿಸಿದ್ದ ಡಿ ಬಿ ಚಂದ್ರೇಗೌಡ ಅವರು ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್, ಮೂರು ಅವಧಿಗೆ ಶಾಸಕ, ಒಂದು-ಅವಧಿಯ ವಿಧಾನಪರಿಷತ್ ಹಾಗೂ ಮೂರು ಬಾರಿ ಸಂಸತ್ ಸದಸ್ಯರಾಗಿದ್ದರು.

ಇಂದಿರಾಗಾಂಧಿ ಅವರಿಗೆ ಕ್ಷೇತ್ರ ತ್ಯಾಗ

1971ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. 1977 ರಲ್ಲಿ ಎರಡನೇ ಅವಧಿಗೆ ಸಂಸದರಾಗಿ ಆಯ್ಕೆಯಾಗಿ, 1978ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲೆಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಂದಿರಾ ಗಾಂಧಿ ಅವರಿಗೆ ಚಿಕ್ಕಮಗಳೂರಿನಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದರು.

1978-1983 ರ ಅವಧಿಯಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯರಾಗಿದ್ದರು. ಬಳಿಕ ದೇವರಾಜ್ ಅರಸ್ ಅವರ ಕ್ರಾಂತಿರಂಗಕ್ಕೆ ಸೇರ್ಪಡೆಯಾಗಿದ್ದರು. ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಚಂದ್ರೇಗೌಡ ಮುಖ್ಯಮಂತ್ರಿ ದೇವರಾಜು ಅರಸು ಅವರ ಸಂಪುಟದಲ್ಲಿ 1979-1980 ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದರು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 1980-81 ರ ಅವಧಿಯಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. 1983ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಶಾಸಕರಾಗಿ(ಜನತಾ ಪಕ್ಷ) ಆಯ್ಕೆಯಾಗಿದ್ದರು.

ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1983-85 ರವರೆಗೆ ಚಂದ್ರೇಗೌಡರು ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1986ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. (ಜನತಾದಳ). 1989ರಲ್ಲಿ ಮತ್ತೆ ತೀರ್ಥಹಳ್ಳಿಯಿಂದ ಸ್ಪರ್ಧಿಸಿ ಮತ್ತೊಮ್ಮೆ ಶಾಸಕರಾಗಿ (ಜನತಾ ದಳ) ಆಯ್ಕೆಯಾಗಿದ್ದರು.

1999ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶೃಂಗೇರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ 1999 ರಿಂದ 2004ರ ವರೆಗೆ ಎಸ್ ಎಂ ಕೃಷ್ಣಾ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. 2008ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. 2009ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಪೂರ್ಣ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಸಮಾಜವಾದಿ ಚಿಂತಕರಾಗಿದ್ದ ಡಿ ಬಿ ಚಂದ್ರೇಗೌಡರು ನಾಲ್ಕೂವರೆ ದಶಕಗಳ ಕಾಲ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ವೈವಿದ್ಯಮಯವಾಗಿ ತೊಡಗಿಸಿಕೊಂಡಿದ್ದರು. ಸುಶಿಕ್ಷಿತ ರಾಜಕಾರಣಿ ಎಂದೇ ಹೆಸರಾದ ಇವರು ಆಳವಾದ ಅಧ್ಯಯನ, ಆರೋಗ್ಯಕರ ಚಿಂತನೆ, ಶಿಸ್ತುಬದ್ಧ ಜೀವನ, ಸಂಯಮದ ನಡತೆ, ಕಳಂಕರಹಿತ ರಾಜಕಾರಣವನ್ನು ವೃತದಂತೆ ಪಾಲಿಸಿಕೊಂಡು ಬಂದ ಹೆಗ್ಗಳಿಕೆ ಇವರದ್ದು.

2009ರಲ್ಲಿ ಬಿಜೆಪಿ ಸೇರುವ ಮೂಲಕ ಚಂದ್ರೇಗೌಡರು ರಾಜಕೀಯ-ಸಾಮಾಜಿಕ ವಲಯದಲ್ಲಿ ಚರ್ಚೆಯ ವಸ್ತುವಾಗಿದ್ದರು. ಆ ಬಗ್ಗೆ ಅವರೇ ಹೇಳುವಂತೆ, “ಕಾಂಗ್ರೆಸ್ ಪಕ್ಷಕ್ಕೆ ನನ್ನ ಕೊಡುಗೆ ಏನಿಲ್ಲವೇ? ನಾನೇನು ಭ್ರಷ್ಟನೇ, ದುರಾಡಳಿತ ನಡೆಸಿದ ದುಷ್ಟನೇ? ರಾಜಕಾರಣಕ್ಕೆ ಕಳಂಕ ತಂದ ವ್ಯಕ್ತಿಯಾಗಿದ್ದನೇ? ಕಾಂಗ್ರೆಸ್ಸಿನಿಂದ ನಾನು ಯಾವ ಲಾಭವನ್ನೂ ಮಾಡಿಕೊಂಡವನಲ್ಲ, ಬಯಸಿದವನೂ ಅಲ್ಲ. ಆದರೂ ಅವರು ನನ್ನನ್ನು ಕಡೆಗಣಿಸಿದರು. ಮುಗಿದ ಅಧ್ಯಾಯ ಎಂದು ನನ್ನ ಬೆನ್ನ ಹಿಂದೆಯೇ ಕುಹಕವಾಡಿದರು. ಅದೇ ಸಂದರ್ಭದಲ್ಲಿ ಮನೆಗೆ ಬಂದ ಬಿಜೆಪಿಯ ಅನಂತಕುಮಾರ್ ಮತ್ತು ಯಡಿಯೂರಪ್ಪ, ನನ್ನನ್ನು ಗೌರವದಿಂದ ಕಂಡರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂದು ಕೇಳಿಕೊಂಡರು. ನಾನು ವಾಜಪೇಯಿ ಮತ್ತು ಅಡ್ವಾಣಿಯವರ ಮಾತಿಗೆ ಮರ್ಯಾದೆ ಕೊಟ್ಟು, ಬಿಜೆಪಿ ಸೇರಿದೆ. ಗೆದ್ದು ನನ್ನ ರಾಜಕೀಯ ‘ಮಿತ್ರ’ರಿಗೆ ಉತ್ತರ ಕೊಟ್ಟೆ, ಕೊಡಬೇಕಿತ್ತು” ಎಂದಿದ್ದರು.

ಐದು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದು ಕರ್ನಾಟಕದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲ ದಾರದಹಳ್ಳಿಯ ಧೀಮಂತ ರಾಜಕಾರಣಿ ಚಂದ್ರೇಗೌಡರು 2014 ರಿಂದೀಚೆಗೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದರು. ದಾರದಹಳ್ಳಿಯ ತಮ್ಮ ಪೂರ್ಣಚಂದ್ರ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ನ.7ರಂದು ಬೆಳಗ್ಗೆ ತಮ್ಮ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದು, ತಮ್ಮ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments