ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಗ್ಗಂಟಾಗಿದ್ದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜ ನಗರ ಹಾಗೂ ಬಳ್ಳಾರಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕೊನೆಗೂ ಬಗೆಹರಿದಿದೆ.
ಕೋಲಾರ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರದಿಂದ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್ ಹನುಮಂತಯ್ಯ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಮಾಹಿತಿಯನ್ನು ಎಲ್ ಹನುಮಂತಯ್ಯ ಅವರೇ ಖಚಿತ ಪಡಿಸಿದ್ದು, “ಬಹುತೇಕ ನನ್ನ ಹೆಸರೇ ಫೈನಲ್ ಆಗಿದೆ. ಘೋಷಿಸುವುದು ಬಾಕಿ ಇದೆ” ಎಂದಿದ್ದಾರೆ.
ಆಹಾರ ಸಚಿವ ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಇತ್ತ ರಮೇಶ್ ಕುಮಾರ್ ಬಣ ಕೂಡ ಪಟ್ಟು ಹಿಡಿದಿದ್ದು, ಅವರಿಗೆ ಟಿಕೆಟ್ ನೀಡಿದರೆ ಯಾವುದೇ ಕಾರಣಕ್ಕೂ ಕೆಲಸವೇ ಮಾಡುವುದಿಲ್ಲ ಎಂಬ ಸಂದೇಶ ಸಾರಿದ್ದರು.
ಮುನಿಯಪ್ಪ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದಕ್ಕೆ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್, ಶಾಸಕ ಕೊತ್ತೂರು ಮಂಜುನಾಥ್ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಮಾದಿಗ ಸಮುದಾಯಕ್ಕೆ ಸೇರಿದ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್ ಹನುಮಂತಯ್ಯ ಅವರನ್ನು ಕಣಕ್ಕೆ ಇಳಿಸಬೇಕು ಎಂದು ರಮೇಶ್ ಕುಮಾರ್ ಬಣದವರು ಒತ್ತಡ ಹೇರಿದ್ದು, ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ತಮ್ಮದು ಎಂದು ಕೇಂದ್ರ ನಾಯಕರಿಗೆ ಭರವಸೆ ನೀಡಿದ್ದರು. ರಮೇಶ್ ಕುಮಾರ್ ಬಣ ಕೋಲಾರದಲ್ಲಿ ಮೇಲುಗೈ ಸಾಧಿಸಿದೆ.
ಬಳ್ಳಾರಿಗೆ ಈ. ತುಕಾರಾಂ ಫೈನಲ್
ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಠಕ್ಕರ್ ಕೊಡಲು ಶಾಸಕ ಈ.ತುಕಾರಾಂ ಅವರು ತಮ್ಮ ಪುತ್ರಿಯನ್ನು ಕಣಕ್ಕಿಳಿಸಲು ಬಯಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಸಂಡೂರು ಶಾಸಕ, ಮಾಜಿ ಸಚಿವ ಈ.ತುಕಾರಾಂ ಅವರನ್ನೇ ಕಣ್ಣಕಿಳಿಸಲು ಬಯಸಿದ್ದಾರೆ.
ಬುಧವಾರ ಸಿದ್ದರಾಮಯ್ಯ ಅವರು ತುಕಾರಾಂ ಅವರಿಗೆ ನೀನು ಒಪ್ಪಲೇಬೇಕೆಂದು ಹಠ ಹಿಡಿದು ಬೆಂಗಳೂರಿಗೆ ಕರೆಸಿ ಮಾತನಾಡಿದ್ದಾರೆ. ಸಚಿವರಾದ ಸಂತೋಷ್ ಲಾಡ್, ಬಿ.ನಾಗೇಂದ್ರ, ಜಮೀರ್ ಅಹಮ್ಮದ್ , ಮಾಜಿ ಎಂಎಲ್ ಸಿ ಕೆಎಸ್.ಎಲ್ ಸ್ವಾಮಿ, ಇಬ್ಬರು ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ರಫೀಕ್, ಬಿ ವಿ ಶಿವಯೋಗಿ ಮೊದಲಾದವರು ಸೇರಿ ತುಕಾರಾಂ ಅವರಿಗೆ ಸ್ಪರ್ಧೆ ಮಾಡಲು ಒಪ್ಪಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಚಾಮರಾಜನಗರ: ಮಹದೇವಪ್ಪ ಮಗನಿಗೆ ಟಿಕೆಟ್
ಚಾಮರಾಜನಗರ ಟಿಕೆಟ್ ಹಂಚಿಕೆಯಲ್ಲಿ ನಿರ್ಮಾಣವಾಗಿದ್ದ ಗೊಂದಲಕ್ಕೆ ತೆರೆಬಿದ್ದಿದೆ. ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರು ತಮ್ಮ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್ ಕೊಡಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ. ಈ ಮಾಹಿತಿಯನ್ನು ಮಹದೇವಪ್ಪ ಆಪ್ತರು ಖಚಿತ ಪಡಿಸಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ!
ಚಿಕ್ಕಬಳ್ಳಾಪುರ ಕ್ಷೇತ್ರ ಕೂಡ ಕಾಂಗ್ರೆಸ್‌ಗೆ ಕಗ್ಗಂಟಾಗಿದೆ. ಚಿಕ್ಕಬಳ್ಳಾಪುರ ಟಿಕೆಟ್ ತಮಗೆ ನೀಡಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ ಪಟ್ಟು ಹಿಡಿದಿದ್ದಾರೆ. ರಕ್ಷಾ ರಾಮಯ್ಯ ಹೆಸರು ಕೂಡ ಕೇಳಿಬರುತ್ತಿದೆ. ಸಿದ್ದರಾಮಯ್ಯ ಅವರು ರಕ್ಷಾ ರಾಮಯ್ಯ ಪರ ಬ್ಯಾಟ್ ಮಾಡುತ್ತಿದ್ದು, ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ಲಭಿಸಲಿದೆ ಎಂದು ಮೂಲಗಳು ಹೇಳಿವೆ.