ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ. ನಾನು ಈ ಬಗ್ಗೆ ಗ್ಯಾರಂಟಿ ಕೊಡುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಮುಂದೆ ಬಿಜೆಪಿ ಸರ್ಕಾರವೇ ಬರಲಿದೆ. ಸಿಎಂ ಸಿದ್ದರಾಮಯ್ಯ ರೈತರನ್ನು ಕಡೆಗಣನೆ ಮಾಡಿದ್ದಾರೆ” ಎಂದರು
“ರಾಜ್ಯದ ರೈತರ ಪಾಲಿಗೆ ಈ ಸರ್ಕಾರ ಸತ್ತುಹೋಗಿದೆ. ಇನ್ನು 200 ಯೂನಿಟ್ ವಿದ್ಯುತ್ ಯಾರಿಗೆ ಪ್ರೀ ಕೊಟ್ಟಿದ್ದೀರಿ, ಒಬ್ಬರ ಹೆಸರು ಹೇಳಲಿ ಸಾಕು. ಗೃಹಲಕ್ಷ್ಮೀ ಯೋಜನೆ ಒಂದು ತಿಂಗಳು ಬಂದರೆ, ಇನ್ನೊಂದು ತಿಂಗಳು ಬರುವುದಿಲ್ಲ” ಎಂದು ಹರಿಹಾಯ್ದರು.
ಆರ್ಥಿಕವಾಗಿ ರಾಜ್ಯ ದಿವಾಳಿ: ಬಿ ಸಿ ಪಾಟೀಲ್
ಮಾಜಿ ಸಚಿವ ಬಿ ಸಿ ಪಾಟೀಲ್ ಮಾತನಾಡಿ, “ಈಗಾಗಲೇ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಗಾಳಿ ಬಿಸಿದೆ. ಕಳೆದ ಚುನಾವಣೆಯಲ್ಲಿ ಯಾವುದೋ ತಪ್ಪಿನಿಂದಾಗಿ ನಮಗೆ ಸೋಲಾಗಿದೆ. ಈ ಭಾರಿ ಹಾಗೇ ಆಗುವುದಿಲ್ಲ. ಈಗಾಗಲೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಡಲು ವಿಫಲವಾಗಿದೆ. ರಾಜ್ಯದಲ್ಲಿ ಬರಗಾಲ ಇದ್ದು, ರೈತರಿಗೆ ಕರೆಂಟ್ ಕೊಡುತ್ತಿಲ್ಲ. ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಯಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ಸಂಪೂರ್ಣವಾಗಿ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಬಿಜೆಪಿ ಬರಲಿದೆ” ಎಂದು ಕಿಡಿಕಾರಿದರು.