Homeಕರ್ನಾಟಕಸೆಂಟಮ್ ಎಲೆಕ್ಟ್ರಾನಿಕ್ಸ್ ನಿಂದ ನಾಲ್ಕು ವರ್ಷಗಳಲ್ಲಿ 500 ಕೋಟಿ ರೂ. ಹೂಡಿಕೆ: ಎಂ ಬಿ ಪಾಟೀಲ

ಸೆಂಟಮ್ ಎಲೆಕ್ಟ್ರಾನಿಕ್ಸ್ ನಿಂದ ನಾಲ್ಕು ವರ್ಷಗಳಲ್ಲಿ 500 ಕೋಟಿ ರೂ. ಹೂಡಿಕೆ: ಎಂ ಬಿ ಪಾಟೀಲ

ರಕ್ಷಣಾ ಉದ್ಯಮದಲ್ಲಿ ಹೆಸರು ಮಾಡಿರುವ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಈ ವರ್ಷದಿಂದ ಅನ್ವಯವಾಗುವಂತೆ ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 500 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಿಂದ 1,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಶುಕ್ರವಾರ ತಮ್ಮನ್ನು ಇಲ್ಲಿನ ಖನಿಜ ಭವನದಲ್ಲಿ ಭೇಟಿಯಾಗಿದ್ದ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ನಿಖಿಲ್ ಮಲ್ಲವರಪು ಅವರೊಂದಿಗೆ ಸಚಿವರು ವಿಚಾರ ವಿನಿಮಯ ನಡೆಸಿದರು.

ಈ ಬಗ್ಗೆ ಮಾತನಾಡಿರುವ ಅವರು, ಹೋದ ವರ್ಷ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಹೂಡಿಕೆಯ ಸಂಬಂಧ ಒಡಂಬಡಿಕೆ ಆಗಿತ್ತು. ಸೆಂಟಮ್ ಕಂಪನಿಯು ಈಗಾಗಲೇ ದೇವನಹಳ್ಳಿ ಸಮೀಪದ ವೈಮಾಂತರಿಕ್ಷ ಮತ್ತು ರಕ್ಷಣಾ ಪಾರ್ಕಿನಲ್ಲಿ ಅಗತ್ಯ ಭೂಮಿ ಹೊಂದಿದೆ. ಅಲ್ಲಿ ಮುಂದಿನ ತಿಂಗಳು ಕಾಮಗಾರಿ ಆರಂಭವಾಗಲಿದೆ. ಇಲ್ಲಿ ಕಂಪನಿಯು ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್, ರಕ್ಷಣಾ ವಿದ್ಯುನ್ಮಾನ, ರಡಾರ್ ಸೌಕರ್ಯ ಮತ್ತು ವಿದ್ಯುನ್ಮಾನ ಸಮರ ತಂತ್ರಜ್ಞಾನಗಳ ವಿಸ್ತರಣೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಕಂಪನಿಯು ಡಿ.ಆರ್.ಡಿ.ಒ, ರಕ್ಷಣಾ ವಲಯಕ್ಕೆ ಸಂಬಂಧಿಸಿದ ಸಾರ್ವಜನಿಕ ಉದ್ದಿಮೆಗಳು ಮತ್ತು ಇಸ್ರೋದಂತಹ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದ್ದು ಪ್ರಮುಖ ಕ್ಷಿಪಣಿ ಮತ್ತು ಉಪಗ್ರಹ ಯೋಜನೆಗಳಿಗೆ ಕೊಡುಗೆ ನೀಡಿದೆ. ಅಲ್ಲದೆ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷಾ ಸೌಲಭ್ಯ ಮತ್ತು ಮೈಕ್ರೋ ಎಲೆಕ್ಟ್ರಾನಿಕ್ಸ್ ಅನುಕೂಲಗಳನ್ನು ಕಂಪನಿ ಹೊಂದಿದೆ. ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ಉದ್ದಿಮೆಯಲ್ಲಿ ರಾಜ್ಯವು ಮುಂಚೂಣಿಯಲ್ಲಿ ಇರಬೇಕು ಎನ್ನುವುದು ಸರಕಾರದ ತೀರ್ಮಾನವಾಗಿದೆ ಎಂದು ಅವರು ನುಡಿದಿದ್ದಾರೆ.

ಯಲಹಂಕದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸೆಂಟಮ್ ಎಲೆಕ್ಟ್ರಾನಿಕ್ಸ್, 1993ರಿಂದಲೂ ಕ್ರಿಯಾಶೀಲವಾಗಿದೆ. ಇದು ದೇಶದ ಅತ್ಯಂತ ವಿಶ್ವಾಸಾರ್ಹ ಎಲೆಕ್ಟ್ರಾನಿಕ್ಸ್ ಕಂಪನಿಗಳಲ್ಲಿ ಒಂದಾಗಿದೆ. ಹೂಡಿಕೆ ಮತ್ತು ಉದ್ಯೋಗಸೃಷ್ಟಿ ಎರಡರ ಕಡೆಗೂ ಗಮನ ಹರಿಸಿರುವ ಕಂಪನಿಗೆ ಸರಕಾರದ ಕಡೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಪಾಟೀಲ ಭರವಸೆ ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments