ಗುರುವಾರ ನಡೆದ ಕ್ಯಾಬಿನೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಡೀ ದೇಶದಲ್ಲೇ ಕರ್ನಾಟಕವು ತಲೆತಗ್ಗಿಸುವಂತೆ ಮಾಡಿರುವ ನಿರ್ಣಯ ಅಂಗೀಕರಿಸಿದ್ದಾರೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಡಿ.ಕೆ.ಶಿವಕುಮಾರ್ ಅವರು ಗಳಿಸಿದ ಅಕ್ರಮ ಆಸ್ತಿ ಸಂಬಂಧ ಸಿಬಿಐ ತನಿಖೆ ನಡೆಯುತ್ತಿದೆ. ಸಿಬಿಐ ಮತ್ತು ಕೋರ್ಟ್‍ಗಳು ಅವರ ಮೇಲೆ ಚಾರ್ಜ್‍ಶೀಟ್ ಹಾಕಲು ಬೇಕಾದ ಪ್ರಕ್ರಿಯೆ ನಡೆಸುತ್ತಿವೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮತ್ತು ಕರ್ನಾಟಕದ ಸಚಿವ ಸಂಪುಟವು ನಮ್ಮ ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಗೇ ಅಗೌರವ ಆಗುವಂಥ ನಿರ್ಣಯವನ್ನು ಕ್ಯಾಬಿನೆಟ್‍ನಲ್ಲಿ ತೆಗೆದುಕೊಂಡಿದ್ದಾರೆ” ಎಂದು ಆಕ್ಷೇಪಿಸಿದರು.
“ಕ್ಯಾಬಿನೆಟ್‍ನ ಈ ನಿರ್ಣಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಆ ನಿರ್ಣಯ ಮಾಡಲು ಸ್ಪೀಕರ್ ಸ್ಥಾನವನ್ನು ಅವರ ಬಳಕೆ ಮಾಡಿಕೊಂಡಿರುವುದು ದುರ್ದೈವದ ಸಂಗತಿ. ಸ್ಪೀಕರ್ ಸ್ಥಾನವು ಸಂವಿಧಾನಬದ್ಧವಾಗಿ ತನ್ನದೇ ಆದ ಘನತೆ, ಗೌರವವನ್ನು ಇಟ್ಟುಕೊಂಡಿದೆ. ಸ್ಪೀಕರ್ ಅವರ ಅನುಮತಿಯ ವ್ಯಾಪ್ತಿಯಲ್ಲೇ ಬರದೆ ಇರುವ ವಿಷಯಕ್ಕೆ ಸ್ಪೀಕರ್ ಅವರು ಅನುಮತಿ ಕೊಟ್ಟಿಲ್ಲವೆಂದು ಕಾರಣವನ್ನು ಹೇಳಿ ಕ್ಯಾಬಿನೆಟ್ ನಿರ್ಣಯ ಮಾಡಿದ್ದು ಕಾಂಗ್ರೆಸ್ ಸರಕಾರದ ಅಕ್ಷಮ್ಯ ಅಪರಾಧ” ಎಂದು ಟೀಕಿಸಿದರು.
“ಸಿದ್ದರಾಮಯ್ಯನವರು ಹಿರಿತನ ಉಳ್ಳವರು; ಅವರು ಯಾವ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ವ್ಯಕ್ತವಾಗುತ್ತದೆ. ಅವರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲಿ. ಅವರ ಹಿರಿತನ, ಅನುಭವಕ್ಕೆ ತಕ್ಕಂತೆ ಕೆಲಸ ಮಾಡಲಿ. ಈ ರೀತಿಯ ಒತ್ತಡಕ್ಕೆ ಮಣಿದು, ಅಸಹಾಯಕರಾಗಿ ಅಥವಾ ಬಿಜೆಪಿ ಮೇಲೆ ಇನ್ನೇನೋ ಸಿಟ್ಟು, ದ್ವೇಷ ಸಾಧನೆಗೆ ಈ ರೀತಿ ರಾಜ್ಯದ ಜನರು, ನಮ್ಮ ವ್ಯವಸ್ಥೆಯೇ ತಲೆತಗ್ಗಿಸುವಂಥ ನಿರ್ಣಯವನ್ನು ಸಿದ್ದರಾಮಯ್ಯನವರು ಮಾಡಬಾರದು” ಎಂದು ಆಗ್ರಹಿಸಿದರು.
“ಇಡೀ ಕ್ಯಾಬಿನೆಟ್ ಮತ್ತು ಮುಖ್ಯಮಂತ್ರಿಗಳು ಈ ನಿರ್ಣಯ ತೆಗೆದುಕೊಂಡಿರುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಸಿಬಿಐ ತನಿಖೆ ಮುಂದುವರಿಯಬೇಕು. ಇದರಲ್ಲಿ ಸ್ಪೀಕರ್ ಪಾತ್ರ ಏನೂ ಇಲ್ಲ. ಸ್ಪೀಕರ್ ಅವರ ವ್ಯಾಪ್ತಿಗೆ ಬರದೇ ಇರುವ ವಿಷಯವಿದು” ಎಂದರು.