ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಕೇಂದ್ರ ಸರ್ಕಾರದಿಂದ ತೆರಿಗೆಯ ಪಾಲು ಪಡೆಯುವ ವಿಚಾರದಲ್ಲಿ 10ನೇ ಸ್ಥಾನದಲ್ಲಿದೆ. ನನ್ನ ಸರ್ಕಾರವು ಎಲ್ಲ ರೀತಿಯ ಪ್ರಯತ್ನ ಮಾಡಿದರೂ ಅನ್ಯಾಯ ಹಾಗೇ ಇದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ವಿಧಾನ ಮಂಡಲದ ಬಜೆಟ್ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡಿರು.
“ಬರ ಪೀಡಿತ ತಾಲೂಕುಗಳಲ್ಲಿ ಬರ ಪರಿಹಾರ ಕ್ರಮಗಳಿಗಾಗಿ ಎನ್‌ಡಿಆರ್‌ಎಫ್‌ನಿಂದ 18,171.44 ಕೋಟಿ ರೂ. ಆರ್ಥಿಕ ನೆರವು ಕೋರಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ರಾಜ್ಯ ಸರ್ಕಾರವು ಖಾರಿಫ್ ಬರ ಪರಿಹಾರಕ್ಕೆ ಸಂಬಂಧಿಸಿದ ಜ್ಞಾಪನ ಪತ್ರಗಳನ್ನು ಸಲ್ಲಿಸಿದೆ. ಆದರೆ, ಇದುವರೆಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ. ಬರ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಹೇಳಿದರು.
“ಕೇಂದ್ರದಿಂದ ನಮಗೆ ನ್ಯಾಯ ಮತ್ತು ನ್ಯಾಯಯುತವಾಗಿ ಸಿಗಬೇಕಾದ ಪಾಲನ್ನು ಪಡೆಯಲು ನನ್ನ ಸರ್ಕಾರವು ಈಗಲೂ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ರಾಜ್ಯಪಾಲರು ಹೇಳಿದರು.
ಕರ್ನಾಟಕ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಕರ್ನಾಟಕ ಮಾದರಿಯನ್ನು ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಅನುಸರಿಸುತ್ತಾ ಬಂದಿದೆ. ಸರ್ಕಾರವು ನಡೆ ನುಡಿಗಳಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಡವರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನ ಒದಗಿಸಿವೆ” ಎಂದು ಬಣ್ಣಿಸಿದರು.
“ಸರ್ಕಾರವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಎರಡು ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ. ಆರ್ಥಿಕ ಅಸಮಾನತೆಯಿಂದ ಅಶಕ್ತರಾಗಿರುವ ಜನತೆಯ ಬದುಕಿಗೆ ಕೇವಲ ಈ ಗ್ಯಾರಂಟಿಗಳು ಮಾತ್ರ ಸಾಕಾಗುವುದಿಲ್ಲ ಎನ್ನುವ ಅರಿವು ಸರ್ಕಾರಕ್ಕೆ ಇದೆ” ಎಂದು ಹೇಳಿದರು.
“ಜನವರಿ ತಿಂಗಳ ಅಂತ್ಯದವರೆಗೆ ನಮ್ಮ ರಾಜ್ಯದ ಜಿಎಸ್‌ಟಿ ಸಂಗ್ರಹಣೆಯ ಬೆಳವಣಿಗೆ ದರವು ಇಡೀ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಲು ಖುಷಿಪಡುತ್ತೇನೆ. ನನ್ನ ಸರ್ಕಾರ ಭವಿಷ್ಯದತ್ತ ದೃಷ್ಟಿ ನೆಟ್ಟಿರುವ ಸರ್ಕಾರ. ಈ ಎಂಟು ತಿಂಗಳಲ್ಲಿ 77,000 ಕೋಟಿಗೂ ಹೆಚ್ಚು ಬಂಡವಾಳವು ರಾಜ್ಯಕ್ಕೆ ಹರಿದು ಬಂದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬರಪೀಡಿತ ಜಿಲ್ಲೆಗಳಿಗೆ 324 ಕೋಟಿ ಬಿಡುಗಡೆ
“ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅವುಗಳಲ್ಲಿ 196 ತಡಲೂಕುಗಳನ್ನ ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಕಾರ್ಯಕ್ರಮಗಳನ್ನು ಕೈಗೊಳ್ಳಲು 31 ಜಿಲ್ಲೆಗಳಿಗೆ 324 ಕೋಟಿ ರೂ. ಬಿಡುಗಡೆ ಮಾಡಲಾಗಿದೆ” ಎಂದು ಗೆಹ್ಲೋಟ್ ತಿಳಿಸಿದರು.
“ಹೊಸ ಸರ್ಕಾರ ರಚನೆಯಾದ ನಂತರ ಕಂದಾಯ ಇಲಾಖೆಯ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿಗಳಲ್ಲಿ ಒಟ್ಟು 93,350 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ 2024 ರ ಫೆಬ್ರವರಿ 5 ರ ವರೆಗೆ 84,253 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. 5,787 ಪ್ರಕರಣಗಳು ಬಾಕಿ ಉಳಿದಿವೆ” ಎಂದರು.
ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಭವ್ಯ ಸ್ವಾಗತ ದೊರೆಯಿತು. ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ ದ್ವಾರದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮೈಸೂರು ಕರ್ನಾಟಿಕ್ ಬ್ಯಾಂಡ್, ಮೈಸೂರು ಇಂಗ್ಲಿಷ್ ಬ್ಯಾಂಡ್, ಮೌಂಟೆಡ್ ಲ್ಯಾನ್ಸ್ ಮೇನ್, ಮೌಂಟೆಡ್ ಹಾರ್ಸ್ ಎಸ್ಕಾರ್ಟ್, ಸಿಎಆರ್ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಯಿತು.
ರಾಜ್ಯಪಾಲ ಗೆಹ್ಲೋಟ್ರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ಈ ವೇಳೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಇತರರು ಇದ್ದರು.