ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಬಗ್ಗೆ ಖಾಸಗಿ ಎಫ್‌ಎಸ್‌ಎಲ್ ವರದಿ ನನ್ನ ಬಳಿಯೂ ಇದೆ, ಆದರೆ ನಾನು ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಆಗುತ್ತಾ? ಖಾಸಗಿ ಎಫ್‌ಎಸ್‌ಎಲ್ ವರದಿ ಬಿಡುಗಡೆ ಮಾಡಿದ ಬಿಜೆಪಿ ನಡೆ ದೇಶದ್ರೋಹ ನಡೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, “ಪ್ರಕರಣ ಬಗ್ಗೆ ವರದಿ ಬಿಡುಗಡೆ ಮಾಡಲು ಸಂವಾದ ಫೌಂಡೇಶನ್‌ಗೆ ಏನು ಆಸಕ್ತಿ? ಯಾರವರು? ಸಂವಾದ ಎಂಬುದು ಆರ್‌ಎಸ್‌ಎಸ್‌ನವರ ಭಜನೆ ಮಾಡುವ ಸಂಸ್ಥೆ. ಇದು ಹೇಗೆಲ್ಲಾ ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ” ಎಂದು ಕಿಡಿಕಾರಿದರು.
ನಾನೂ ಖಾಸಗಿ ಸಂಸ್ಥೆಗಳಿಗೆ ಕೊಟ್ಟು ನಾನೂ ರಿಪೋರ್ಟ್ ತೆಗೆದುಕೊಂಡಿದ್ದೇನೆ. ಹಾಗಾದರೆ ನಾನೂ ಅದನ್ನು ಸಾರ್ವಜನಿಕವಾಗಿ ಪಬ್ಲಿಷ್ ಮಾಡಬಹುದಲ್ಲ? ನಾನೂ ಯಾವುದೋ ರಿಪೋರ್ಟ್ ತಂದು ಹೇಳಬಹುದಲ್ಲ? ನಾನೂ ಹಾಗೆ ಮಾಡಿಲ್ಲ. ಅದಕ್ಕೊಂದು ರೀತಿ ನೀತಿ ಇದೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೋವನ್ನು ಲ್ಯಾಬ್ ಟೆಸ್ಟ್ ಮಾಡುವುದಕ್ಕೆ ಅವರು ಯಾರು” ಎಂದು ಪ್ರಶ್ನಿಸಿದರು.
ಗೃಹ ಇಲಾಖೆ ಈ ಬಗ್ಗೆ ವರದಿ ಕೊಡಬೇಕೇ ಹೊರತು ಸಂವಾದ ಫೌಂಡೇಶನ್ ಅಲ್ಲ. ಸರ್ಕಾರ ಪದೇ ಪದೇ ಎಫ್ಎಸ್ಎಲ್ ರಿಪೋರ್ಟ್ ನೋಡುವುದಕ್ಕೆ ಕಾರಣ ಯಾವುದೇ ಗೊಂದಲ ಇರಬಾರದು ಅಂತ. ಇವರು ಯಾವ ಫೂಟೇಜ್ ಕೊಟ್ಟಿದ್ದಾರೋ? ಗೊತ್ತಿಲ್ಲ. ಬಿಜೆಪಿಯವರಿಗೆ ಜವಾಬ್ದಾರಿಯುತ ಪಕ್ಷವಾಗಿ ಸಂವಾದ ಹಾಕಿದ ತಾಳಕ್ಕೆ ಕುಣಿತಾರಲ್ಲ ಇವರಿಗೆ ನಾಚಿಕೆ ಬೇಡವಾ?” ಎಂದು ಕುಟುಕಿದರು.
“ಸಮಾಜದಲ್ಲಿ ಗೊಂದಲ ಇದ್ದಾಗಲೆಲ್ಲ ರಾಜಕೀಯ ಲಾಭ ಬಿಜೆಪಿಗೆ ಆಗುತ್ತದೆ. ಸಂವಾದ ಯಾವತ್ತೂ ದೀಪ ಹಚ್ಚುವ ಕೆಲಸ ಮಾಡಿಲ್ಲ, ಬರೀ ಬೆಂಕಿ ಹಚ್ಚುವ ಕೆಲಸವನ್ನೇ ಮಾಡಿದೆ. ಆ ರಿಪೋರ್ಟ್ ಇಟ್ಟುಕೊಂಡು ಕುಣಿಯುತ್ತಿದ್ದಾರೆ. ಇದರ ಮೇಲೆ ತಿಳಿಯುತ್ತದೆ ಬಿಜೆಪಿಯವರು ಎಷ್ಟು ಹತಾಶರಾಗಿದ್ದಾರೆ ಎಂಬುದು” ಎಂದು ಟೀಕಿಸಿದರು.