ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಬಗ್ಗೆ ಎಫ್‍ಎಸ್‍ಎಲ್ ವರದಿ ಬಹಿರಂಗ ಮಾಡುವಂತೆ ಬಿಜೆಪಿ ನಿಯೋಗವು ಐಜಿಪಿಗೆ ಮನವಿ ಸಲ್ಲಿಸಿತು.
ಶಾಸಕರಾದ ಎಲ್ ಎ ರವಿಸುಬ್ರಹ್ಮಣ್ಯ, ಸಿ ಕೆ ರಾಮಮೂರ್ತಿ, ಉದಯ ಬಿ. ಗರುಡಾಚಾರ್ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರು ಸೋಮವಾರ ನೃಪತುಂಗ ರಸ್ತೆಯಲ್ಲಿರುವ ಇನ್‍ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
“ಫೆಬ್ರವರಿ 27ರಂದು ವಿಧಾನಸೌಧದ ಕಾರಿಡಾರ್‌ನಲ್ಲಿ ರಾಜ್ಯಸಭಾ ಸಂಸದ ಸೈಯದ್ ನಾಸೀರ್ ಹುಸೇನ್ ಅವರ ಬೆಂಬಲಿಗರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ. ನಂತರ ಗೃಹ ಸಚಿವ ಡಾ. ಪರಮೇಶ್ವರ್ ಅವರು ಎಫ್‍ಎಸ್‍ಎಲ್ ವರದಿಯನ್ನು ಶೀಘ್ರವೇ ಬಹಿರಂಗ ಮಾಡುವ ಭರವಸೆ ನೀಡಿದ್ದರು. ಘಟನೆ ನಡೆದು ಒಂದು ವಾರ ಕಳೆದರೂ ಎಫ್‍ಎಸ್‍ಎಲ್ ವರದಿಯ ಮಾಹಿತಿ ಇಲ್ಲ” ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಸತ್ಯ ತಿಳಿಸಲು ವಿಳಂಬವೇಕೆ?
“ವಾಸ್ತವ ಸಂಗತಿ ಮರೆಮಾಚಲು ಮತ್ತು ತನಿಖೆಯ ದಿಕ್ಕನ್ನು ಹಳಿ ತಪ್ಪಿಸಲು ನಿಮ್ಮ ಮೇಲೆ ಯಾವುದಾದರೂ ಒತ್ತಡವಿದೆಯೇ ಎಂದು ಪ್ರಶ್ನಿಸಲಾಗಿದೆ. ಇಂತಹ ವಿಳಂಬದಿಂದ ಮುಂದಿನ ದಿನಗಳಲ್ಲಿ ಈ ರೀತಿ ದೇಶವಿರೋಧಿ ಮತ್ತು ಸಮಾಜಘಾತುಕ ಕೆಲಸ ಮಾಡುವ ಜನರಿಗೆ ಮತ್ತಷ್ಟು ಬಲ ಬಂದಂತಾಗುತ್ತದೆ. ಸತ್ಯ ತಿಳಿಸಲು ವಿಳಂಬವೇಕೆ?” ಎಂದು ಕೇಳಿದ್ದಾರೆ.
“ರಾಜ್ಯದ ಜವಾಬ್ದಾರಿಯುತ ವಿಪಕ್ಷವಾಗಿ, ನಾವು ಈ ಪತ್ರಕ್ಕೆ ನಿಮ್ಮಿಂದ ಪ್ರಾಮಾಣಿಕ ಮತ್ತು ತ್ವರಿತ ಪ್ರತ್ಯುತ್ತರದ ನಿರೀಕ್ಷೆಯಲ್ಲಿದ್ದೇವೆ” ಎಂದು ತಿಳಿಸಲಾಗಿದೆ.