ಹಾವೇರಿ ನೈತಿಕ ಪೊಲಿಸ್ ಗಿರಿ ಬಗ್ಗೆ ಈ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿ ಭಾಗದಲ್ಲಿ ನೈತಿಕ ಪೊಲಿಸ್ ಗಿರಿ ನಡೆದಾಗ ಜೋರಾಗಿ ಮಾತನಾಡುತ್ತಿದ್ದರು. ಈಗ ಹಾವೇರಿ ಪ್ರಕರಣದ ಕುರಿತು ಸಿಎಂ ಯಾವುದೇ ಮಾತನಾಡುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹರಿಹಾಯ್ದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಲೈಂಗಿಕ ದೌರ್ಜನ್ಯಕ್ಕೆ ಒಳಗಾದವಳು ಅಲ್ಪ ಸಂಖ್ಯಾತ ಮಹಿಳೆ ಅವಳಿಗೂ ರಕ್ಷಣೆ ನೀಡದೆ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ. ಆರಂಭದಲ್ಲಿ ಪೊಲೀಸರು ಅದನ್ನು ತಳ್ಳಿ ಹಾಕುವ ಪ್ರಯತ್ನ ನಡೆಸಿದರು. ಆರೋಪಿಗಳಿಗೆ ಜಾಮೀನು ಸಿಗುವಂತ ಪ್ರಕರಣ ದಾಖಲಿಸಿದರು. ಯುವತಿ ದೈರ್ಯವಾಗಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದ್ದಾಳೆ. ಇದರಿಂದ ಪ್ರಕರಣ ಗಂಭೀರವಾಗಿದೆ. ಮತ್ತೊಂದು ಬಾರಿ ಯುವತಿಯ ಮೆಡಿಕೆಲ್ ಟೆಸ್ಟ್ ಆಗಬೇಕು” ಎಂದು ಒತ್ತಾಯಿಸಿದರು.
“ಸಿಎಂ ಸಿದ್ದರಾಮಯ್ಯ ಅಲ್ಪ ಸಂಖ್ಯಾತರ ಚಾಂಪಿಯನ್. ಇಲ್ಲಿ ಅಲ್ಪ ಸಂಖ್ಯಾತ ಯುವತಿಯ ಮೇಲೆ ಅತ್ಯಾಚಾರವಾಗಿದೆ. ಆ ಯುವತಿಯ ರಕ್ಷಣೆಗೂ ಮುಂದಾಗುತ್ತಿಲ್ಲ. ರಾಜ್ಯದಲ್ಲಿ ಒಂಬತ್ತು ತಿಂಗಳಲ್ಲಿ ಶೇ. 30% ರಷ್ಟು ಅಪರಾಧ ಪ್ರಕರಣಗಳು ಹೆಚ್ಚಳವಾಗಿವೆ. ಈ ಗ್ಯಾಂಗ್ ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದೆ ಅದನ್ನು ಮುಚ್ಚಿ ಹಾಕಲಾಗಿದೆ. ಅದನ್ನೂ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಈ ಪ್ರಕರಣಗಳ ಕುರಿತು ತನಿಖೆ ನಡೆಸಲು ಪ್ರತ್ಯೇಕ ತಂಡ ರಚನೆ ಮಾಡಬೇಕು” ಎಂದು ಆಗ್ರಹಿಸಿದರು.
ಕಾನೂನು ಬಾಹಿರ ಹುದ್ದೆ
“ರಾಜ್ಯದಲ್ಲಿ ದೊಡ್ಡ ಮಟ್ಟದ ಬರ ಬಿದ್ದಿದೆ. ಸಿಎಂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಿಎಂ ಆರ್ಥಿಕ ಪರಿಸ್ಥಿತಿ ಸರಿಯಾಗಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ಬರ ಪರಿಹಾರ, ಶಾಲಾ ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದರು. ಕಲ್ಯಾಣ ಕರ್ನಾಟಕ ಭಾಗಕ್ಕೆ 3000 ಕೊಟಿ ರೂ.ಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಅದನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕೆ ಬಂದ ಮೆಲೆ ಕಾರ್ಯಕರ್ತರನ್ನು ಮರೆತಿದ್ದರು. ಅವರು ಆಕ್ರೊಶಗೊಂಡಿದ್ದರಿಂದ ಅವರನ್ನು ಸಮಾಧಾನ ಪಡಿಸಲು ಕಾನೂನು ಬಾಹಿರವಾಗಿ ಸಂವಿಧಾನ ಬಾಹಿರವಾಗಿ ಈ ಹುದ್ದೆ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
“ಗ್ಯಾರಂಟಿ ಉಸ್ತುವಾರಿಗೆ ಕ್ಯಾಬಿನೆಟ್ ರ್ಯಾಂಕ್ ನೀಡುವುದು ಸಂವಿಧಾನ ಬಾಹಿರ ಇದನ್ನು ಸಂಪುಟದ ಸಚಿವರು ಗಂಭಿರವಾಗಿ ಯೋಚಿಸಬೇಕು. ಸಂಪುಟದ ಮರ್ಯಾದೆ ಹಾಳಾಗುತ್ತಿದೆ” ಎಂದು ಹೇಳಿದರು.