ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಚುನಾವಣೆಯಲ್ಲಿ ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗಂಭೀರ ಆರೋಪಿಸಿದ್ದಾರೆ.
ಸೋಮವಾರ ರಾತ್ರಿ ಬೆಳಗಾವಿಯಲ್ಲಿ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಬಿ ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
“ಬೊಮ್ಮಾಯಿ ಸೋಲಿಸಲು ಹಣ ಕಳುಹಿಸಿದ್ದ ವಿಜಯೇಂದ್ರ ಈಗ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಬೊಮ್ಮಾಯಿ ಅವರೇ ವಿಜಯೇಂದ್ರ ಹಣ ಕಳುಹಿಸಿದ್ದ ಬಗ್ಗೆ ನನಗೆ ಹೇಳಿದ್ದರು. ಒಮ್ಮೆ ಸತ್ಯ ಹೊರಬರಬೇಕು ರಾಜ್ಯದಲ್ಲಿ. ಅಪ್ಪ, ಮಕ್ಕಳು ಏನು ಮಾಡಿದ್ದಾರೆ ಎಂಬುದು ಗೊತ್ತಾಗಬೇಕು” ಎಂದು ಆಗ್ರಹಿಸಿದರು.
“ವಿ. ಸೋಮಣ್ಣ ಅವರನ್ನು ಸೋಲಿಸಿದ್ದು ಯಾರು? ಲಿಂಗಾಯತರನ್ನು ಅಲ್ಲಿಗೆ ಕಳುಹಿಸಿ ಸೋಮಣ್ಣ ಅವರನ್ನು ಬಲಿ ಕೊಟ್ಟರು. ಸೋಮಣ್ಣ ಅವರನ್ನು ಗೋವಿಂದರಾಜ ನಗರದಲ್ಲಿ 20-25 ಸಾವಿರ ಮತಗಳಿಂದ ಗೆಲ್ಲಿಬೇಕಿತ್ತು. ಆದರೆ ಅವರನ್ನು ಬಲಿಪಶು ಮಾಡಿದರು” ಎಂದು ದೂರಿದರು.
“ತಮ್ಮ ವಿರುದ್ಧ ದುರ್ಬಲ ಅಭ್ಯರ್ಥಿ ಹಾಕಿಸಿಕೊಂಡರು. ಅಲ್ಲಿ ಸಿದ್ದರಾಮಯ್ಯಗೆ ಸಪೋರ್ಟ್ ಮಾಡಿದರು. ಕನಕಪುರದಲ್ಲಿ ಅವರಿಬ್ಬರದು ಹೊಂದಾಣಿಕೆ ಇದೆ. ಹಿಂಗೆಲ್ಲ ಮಾಡಿ ನಮ್ಮ ಹೆಸರನ್ನು ಕೆಡಿಸುವ ಪ್ರಯತ್ನ ಮಾಡಿದರು” ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
“ಹೈಕಮಾಂಡ್ನವರನ್ನು ಯಡಿಯೂರಪ್ಪ ಬ್ಲ್ಯಾಕ್ ಮೆಲ್ ಮಾಡಿ ವಿಜಯೇಂದ್ರನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹೈಕಮಾಂಡ್ ಕೂಡ ಯಾಕೆ ಹೆದರಿತೋ ಗೊತ್ತಿಲ್ಲ. ಸುಮ್ಮನೆ ಶಿಸ್ತು, ಶಿಸ್ತು ಎಂದು ಹೇಳುತ್ತಾರೆ, ನಾವೇನು ಗುಲಾಮರಾ? ನಮ್ಮದೇನು ಶಕ್ತಿ ಇಲ್ಲವೇ? ನಮ್ಮ ಹಿಂದೆಯೂ ಜನ ಇದ್ದಾರೆ. ನೀವೆಲ್ಲ ಗಟ್ಟಿಯಾಗಿ ನಿಲ್ಲಿ, ಎಲ್ಲರನ್ನೂ ಸರಿ ಮಾಡೋಣ” ಎಂದು ಸಮುದಾಯದ ನಾಯಕರಿಗೆ ಕರೆ ನೀಡಿದರು.
“ಲೋಕಸಭಾ ಚುನಾವಣೆ ಪ್ರಚಾರಕ್ಕೆ ರಾಜ್ಯದಲ್ಲಿ ಎಲ್ಲಿಯೂ ಹೋಗಲ್ಲ ಎಂದು ಯಡಿಯೂರಪ್ಪ ಬ್ಲ್ಯಾಕ್ಮೇಲ್ ಮಾಡಿ ಹೆದರಿಸಿದ್ದರು. ಶಿವಮೊಗ್ಗ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುವೆ, ಉಳಿದ ಕಡೆ ಹೋಗಲ್ಲ ಎಂದಿದ್ದರು” ಎಂದು ಯತ್ನಾಳ್ ಆರೋಪಿಸಿದರು.
ಪ್ರತಿಕ್ರಿಯೆ ನೀಡಲು ವಿಜಯೇಂದ್ರ ನಿರಾಕರಣೆ
ಬೊಮ್ಮಾಯಿ ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ವಿಜಯೇಂದ್ರ ನಿರಾಕರಿಸಿದರು. ಈ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೈ ಮುಗಿದು, ದಿನಕ್ಕೊಂದು ಹೇಳಿಕೆ ಕೊಡಲು ಆಗಲ್ಲ, ಧನ್ಯವಾದ” ಎಂದಷ್ಟೇ ಹೇಳಿ ಮುಂದೆ ತೆರಳಿದರು.