ಕರ್ನಾಟಕದ ಬರ ಪರಿಸ್ಥಿತಿಯ ತೀವ್ರತೆಯನ್ನು ಅರಿಯಲು ರಾಜ್ಯಕ್ಕೆ ಭೇಟಿ ನೀಡಿ, ರೈತರಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸುವಂತೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರದ ಮೇಲೆ ಒತ್ತಡ ಹೇರಿ ತಕ್ಷಣ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟದಿಂದ ಅಂದಾಜು ₹46,324.50 ಕೋಟಿ ಹಾನಿಯಾಗಿದೆ ಎಂದು ಅಶೋಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಷ್ಟೊಂದು ತೀವ್ರ ಬರ ಪರಿಸ್ಥಿತಿಯಲ್ಲೂ ಪ್ರತಿ ರೈತನಿಗೆ ಕೇವಲ ₹2,500 ಪರಿಹಾರ ಘೋಷಿಸಿರುವುದು ಸಮರ್ಪಕವಲ್ಲ ಎಂದು ಟೀಕಿಸಿದ್ದಾರೆ.
2019–20ರಿಂದ 2022–23ರ ಅವಧಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರವು 57.43 ಲಕ್ಷ ಹೆಕ್ಟೇರ್ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ 51.90 ಲಕ್ಷ ರೈತರಿಗೆ ₹6,651.15 ಕೋಟಿ ಇನ್ಪುಟ್ ಸಬ್ಸಿಡಿ ನೀಡಿತ್ತು ಎಂದು ಅವರು ತಿಳಿಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿದಂತೆ ರಾಜ್ಯದ ಸ್ವಂತ ಸಂಪನ್ಮೂಲಗಳಿಂದ ಹೆಚ್ಚಿನ ಪರಿಹಾರ ನೀಡಲು ಈಗಿನ ಸರ್ಕಾರಕ್ಕೆ ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.
ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುವಲ್ಲಿ ವಿಳಂಬ, ಪರಿಹಾರ ವಿತರಣೆಯಲ್ಲಿನ ನಿರ್ಲಕ್ಷ್ಯ ಹಾಗೂ ಕುಡಿಯುವ ನೀರು ಮತ್ತು ಮೇವಿನ ಕೊರತೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣ ಸಮರ್ಪಕ ಪರಿಹಾರ ನೀಡಬೇಕು. ಪರಿಹಾರ ವಿತರಣೆಗೆ ಕಾಲಮಿತಿಯ ಕಾರ್ಯಯೋಜನೆ ರೂಪಿಸಿ, ಯಾವುದೇ ರೈತ ನೆರವಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ರೈತರ ಸಂಕಷ್ಟವನ್ನು ನೇರವಾಗಿ ಅರಿತು ರಾಜ್ಯ ಸರ್ಕಾರದಿಂದ ತುರ್ತು ಕ್ರಮ ಕೈಗೊಳ್ಳುವಂತೆ ರಾಹುಲ್ ಗಾಂಧಿ ಮಧ್ಯಸ್ಥಿಕೆ ವಹಿಸಬೇಕು ಎಂದು ಅಶೋಕ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.


