ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ರಾಜಸ್ಥಾನ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿಗೆ ಆನೆ ಬಲ ತಂದೊಡ್ಡಿದೆ. ಜೊತೆಗೆ ಹಲವು ಸವಾಲುಗಳನ್ನು ಮುಂದೊಡ್ಡಿದೆ.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸೇರಿದಂತೆ ಬಿಜೆಪಿಯಿಂದ ಕಣಕ್ಕಿಳಿದಿದ್ದ ಆರು ಮಂದಿ ರಾಜವಂಶಸ್ಥರು ಭರ್ಜರಿ ಗೆಲುವು ಸಾಧಿಸಿದ್ದಾರೆ.ಇವರ ಜೊತೆಗೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಮಂತ್ರಿಗಳು ಮತ್ತು ಸಂಸದರು ಉನ್ನತ ಹುದ್ದೆಗಾಗಿ ಪ್ರಬಲ ಲಾಭಿ ನಡೆಸಿದ್ದಾರೆ.
ಯಾರನ್ನೂ ಆಯ್ಕೆ ಮಾಡಿದರೂ ಅದು ಸುಲಭದ ಆಯ್ಕೆಯಾಗುವುದಿಲ್ಲ. ಭಿನ್ನಮತ, ಅಪಸ್ವರ ಕಟ್ಟಿಟ್ಟ ಬುತ್ತಿ ಎಂಬ ವಾತಾವರಣ ಮನೆ ಮಾಡಿದೆ. ಅದರಲ್ಲೂ ವಸುಂಧರಾ ರಾಜೆ ಅವರು ಪ್ರಧಾನಿ ಮೋದಿ ಸೇರಿದಂತೆ ಯಾರೂ ಹೇಳಿದರೂ ಕೇಳಿದಂತಹ ನಿಲುವು ಹೊಂದಿದ್ದಾರೆ. ಹೀಗಾಗಿ ಎಲ್ಲರಿಗೂ ಸಮ್ಮತವಾಗುವ ವ್ಯಕ್ತಿ ಬೇಕಾಗಿದೆ.
ಹೀಗಾಗಿ ಈಗ ರಾಜಸ್ಥಾನದಲ್ಲಿ ಸಿಎಂ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಕೇಳಿಬರುತ್ತಿದೆ. ಸಾಕಷ್ಟು ಮಂದಿ ಹೆಸರು ಕೇಳಿಬರುತ್ತಿದೆ. ಇದರಲ್ಲಿ ಪ್ರಮುಖವಾದ ಹೆಸರು ಮಹಂತ್ ಬಾಲಕನಾಥ್ ಅವರದ್ದು.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿರುವ ಬಿಜೆಪಿ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಂತಹದ್ದೇ ಒಂದು ಪ್ರಯೋಗವನ್ನು ರಾಜಸ್ಥಾನದಲ್ಲಿ ಮಾಡಲು ಬಿಜೆಪಿಯ ಚಿಂತಕರ ಚಾವಡಿ ಮುಂದಾಗಿದೆ. ಈ ರೀತಿ ಆದಲ್ಲಿ ಸಂಭಾವ್ಯ ಭಿನ್ನಮತ ಹತ್ತಿಕ್ಕಬಹುದು.ಅಷ್ಟೇ ಅಲ್ಲ ಪ್ರಬಲ ಹಿಂದುತ್ವ ಪ್ರತಿಪಾನೆಯೊಂದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.
ಇಂತಹ ಲೆಕ್ಕಾಚಾರ ಯಶಸ್ವಿಯಾಗಬೇಕಾದರೆ ಅದಕ್ಕೆ ಸೂಕ್ತವಾದವರು ಆಲ್ವಾರ್ ಕ್ಷೇತ್ರದ ಸಂಸದ ಮಹಂತ್ ಬಾಲಕನಾಥ್ ಎಂಬ ಚರ್ಚೆಗಳು ನಡೆದಿವೆ. ಜೊತೆಗೆ 39 ವರ್ಷದ ಮಹಂತ್ ಬಾಲಕನಾಥ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಡುವೆ ಸಾಕಷ್ಟು ಹೋಲಿಕೆಗಳು ಮತ್ತು ಸಾಮ್ಯತೆಗಳಿವೆ.
ಮಹಾಂತಾ ಬಾಲಕನಾಥ್ ಮತ್ತು ಯೋಗಿ ಆದಿತ್ಯನಾಥ್ ಇಬ್ಬರೂ ನಾಥ ಪರಂಪರೆಯ ಮಠಗಳಿಗೆ ಸೇರಿದವರು. ಇಬ್ಬರೂ ಕೂಡ ಹಿಂದುತ್ವದ ಪರವಾದ ಪ್ರಖರ ವಾಗ್ಮಿಗಳೆಂದು ಗುರುತಿಸಿಕೊಂಡಿದ್ದಾರೆ. ಇಬ್ಬರ ಆಲೋಚನೆ, ವಿಚಾರಧಾರೆ, ಕಾರ್ಯಶೈಲಿ ಒಂದೇ ರೀತಿಯಲ್ಲಿದೆ.
ಆಲ್ವಾರ್ ಲೋಕಸಭಾ ಕ್ಷೇತ್ರದ ಮತದಾರರು ಬಾಲಕನಾಥ್ ಅವರ ಬಗ್ಗೆ ವಿಶೇಷ ಗೌರವಾದರ ಹೊಂದಿದ್ದಾರೆ. ಅದೇ ರೀತಿ ರಾಜ್ಯದ ಬಿಜೆಪಿ ಕಾರ್ಯಕರ್ತರು ಕೂಡಾ ವಿಶೇಷ ಗೌರವ ನೀಡುತ್ತಾರೆ.ಹೀಗಾಗಿ ಇವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬ ಚಿಂತನೆಯಲ್ಲಿ ಬಿಜೆಪಿ ನಾಯಕತ್ವ ತೊಡಗಿದೆ.