ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ್ ಹೆಗಡೆ ಮುಜುಗರ ತಾಳಲಾರದೇ ಮಾಧ್ಯಮಗಳನ್ನು ನಾಯಿಗೆ ಹೋಲಿಸಿ ಮಾತನಾಡಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಅಂಕೊಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, “ಆನೆ ಹೊಗಿದ್ದೆ ದಾರಿ ಎಂಬಂತೆ ನಾವು ಈರಬೇಕು. ಮಾಧ್ಯಮಗಳು ಏನೂ ಬೆಕಾದ್ರೂ ಬರೆದುಕೊಳ್ಳಲಿ. ಬೇಕಾದ ಬೇವರ್ಸಿಗಳು ಏನೂ ಬೇಕಾದ್ರೂ ವದರಾಡಲಿ” ಎಂದಿದ್ದಾರೆ.
“ವಿವಾದ ಸೃಷ್ಟಿಯಾದರೂ ದೃಢವಾಗಿ ನಿಲ್ಲುವುದು ನಿಜವಾದ ನಾಯಕತ್ವ, ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು” ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
“ಸಾಮಾಜಿಕ ಜಾಲತಾಣದಲ್ಲಿ ಬೇಕಾದ್ದು ಚರ್ಚೆ ಆಗಲಿ. ಆದ್ರೆ ನಿವೆಲ್ಲ ಇದಕ್ಕೆ ವಿಚಲಿತರಾಗಬಾರದು. ನೀವು ಯಾವದೋ ಸಾಮಾನ್ಯ ಪಕ್ಷದ ಕಾಯರ್ತರಲ್ಲ. ದೇಶ ಆಡಳಿತ ಮಾಡುತ್ತಿರುವ ಪಕ್ಷದ ಕಾರ್ಯಕರ್ತರು. ಆನೆ ನಡೆದಿದ್ದೆ ದಾರಿ ಎಂಬಂತೆ ನಾವು ನಡಿಯಬೇಕು ಕಣ್ರಿ. ಆನೆ ನಡೆಯುತ್ತಿದ್ದರೆ ನಾಯಿಗಳು ಬೋಗಳುತ್ತಾ ಇರುತ್ತವೆ. ಆನೆ ನಡೆಯುತ್ತಿದ್ದರೆ ಯಾವಗಲಾದರೂ ನಾಯಿ ಕಡೆ ಗಮನ ಕೊಡುತ್ತಾ? ನಾಯಿಗಳಿಗೂ ಗೊತ್ತು ನಾವು ಎಷ್ಟೆ ಬೊಗಳಿದ್ರು ಆನೆಗೆ ಏನು ಮಾಡುವುದಕ್ಕೂ ಆಗಲ್ಲ. ನಾಯಿಗಳು ಬೋಗಳದೆ ಇದ್ರೆ ಆನೆ ಗಾಂಭೀರ್ಯಕ್ಕೆ ಬೆಲೆ ಇರಲ್ಲ” ಎಂದರು.
“ಹೆಗಡೆ ಹೇಳಿಕೆಯಿಂದ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು, ಅನಂತಕುಮಾರ್ ಅವರ ಸಂವಿಧಾನ ಬದಲಾವಣೆ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಹಿಂದೊಮ್ಮೆ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾತನಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅಲ್ಲದೇ ಸಚಿವ ಸ್ಥಾನವನ್ನೂ ಸಹ ಕಳೆದುಕೊಂಡಿದ್ದರು. ಇದೀಗ ಮತ್ತೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದು, ರಾಜ್ಯದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪ್ರಬಲ ಅಸ್ತ್ರವನ್ನು ನೀಡಿದ್ದು, ಇದನ್ನೇ ಉಲ್ಲೇಖಿಸಿ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಶಾಸಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.