ಲೀಲಾವತಿ ಅವರು ಪರಿಪೂರ್ಣ ಕಲಾವಿದೆ. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಲೀಲಾವತಿ ಅವರು ಬಹುಭಾಷಾ ನಟಿಯಾಗಿದ್ದರು. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಶಕ್ತಿ ಲೀಲಾವತಿ ಅವರಿಗಿತ್ತು. ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, “ಎಷ್ಟೇ ಕಷ್ಟದ ನಡುವೆಯೂ ಲೀಲಾವತಿ ಅವರ ಕುಟುಂಬ ಸರ್ಕಾರದ ಸಹಾಯ ಕೇಳಿರಲಿಲ್ಲ” ಎಂದರು.
“ನಮ್ಮ ಕಾಲದಲ್ಲಿ ರಾಜ್‌ಕುಮಾರ್ – ಲೀಲಾವತಿ ಜೋಡಿ ಜನಪ್ರಿಯವಾಗಿತ್ತು. ವಿದ್ಯಾರ್ಥಿಯಾಗಿದ್ದಾಗ ಅವರ ಸಿನಿಮಾಗಳನ್ನು ನೋಡುತ್ತಿದ್ದೆ. ಲೀಲಾವತಿ ನಟಿಸಿದ್ದ ‘ಕುಲವಧು’ ಸಿನಿಮಾ ಇಷ್ಟವಾಗಿತ್ತು. ವಾರದ ಹಿಂದೆಷ್ಟೇ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ” ಎಂದು ಹೇಳೀದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, “ಲೀಲಾವತಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಸ್ಮಾರಕ ನಿರ್ಮಾಣ ವಿಚಾರದಲ್ಲಿ ನಾನೊಬ್ಬನೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುತ್ತೇವೆ” ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹಿರಿಯ ನಟ ದ್ವಾರಕೀಶ್, ನಟ ಶಿವರಾಜ್‌ಕುಮಾರ್, ನಟಿಯರಾದ ಪೂಜಾಗಾಂಧಿ, ಸುಧಾರಾಣಿ, ಮಾಳವಿಕಾ ಅವಿನಾಶ್ ಸೇರಿದಂತೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಅಂತಿಮ ದರ್ಶನ ಪಡೆದಿದರು.