ಬರಗಾಲದ ತೀವ್ರತೆ ಇದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸದಲ್ಲಿ ಹಾಗೂ ಸ್ಟಿಂಗ್ ಆಪರೇಶನ್ ಚರ್ಚೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬರ ನಿರ್ವಹಣೆಗೆ ಈವರೆಗೆ ಏನು ಮಾಡಲಾಗಿದೆ ಎಂದು ತಿಳಿಸಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ಪರಿಸ್ಥಿತಿ ತೀವ್ರವಾಗಿದ್ದು, ಕಾಂಗ್ರೆಸ್ ಸರ್ಕಾರ ನೀಡಿದ 2,500 ರೂ. ಪರಿಹಾರವನ್ನು ರೈತರು ವಾಪಸ್ ಜಿಲ್ಲಾಧಿಕಾರಿಗೆ ನೀಡುತ್ತಿದ್ದಾರೆ. ಇದ್ಯಾವುದೂ ನನಗೆ ಗೊತ್ತಿಲ್ಲ ಎನ್ನುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಟಿಂಗ್ ಆಪರೇಶನ್, ಸಿಡಿ ಎಂದು ಮಾತಾಡುತ್ತಿದ್ದಾರೆ. ಕರ್ನಾಟಕಕ್ಕಿಂತ ಹೆಚ್ಚು ಕಾಲ ದೆಹಲಿಯಲ್ಲೇ ಕಳೆದಿದ್ದಾರೆ. ಅವರಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹತ್ತು ದಿನಗಳಲ್ಲಿ ಕೇವಲ ಸ್ಟಿಂಗ್ ಬಗ್ಗೆ ಚರ್ಚೆ ನಡೆದಿದೆ. 217 ತಾಲೂಕುಗಳಲ್ಲಿ ಬರಗಾಲವಿದ್ದು, 46,324 ಕೋಟಿ ರೂ. ನಷ್ಟವಾಗಿದೆ. ಆದರೆ ಸರ್ಕಾರ ಭಿಕ್ಷಯಂತೆ 1,500 ಕೋಟಿ ರೂ. ನೀಡುತ್ತಿದೆ ಎಂದು ದೂರಿದರು.
ಅಂತರ್ಜಲ ಮಟ್ಟ ಕುಸಿದಿದ್ದು, ಸಾವಿರಾರು ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಬಳ್ಳಾರಿ ಮೊದಲಾದ ಕಡೆ ಫ್ಲೋರೈಡ್ ನೀರು ಸಿಗುತ್ತಿದೆ. ಜನರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿಯೂ ಇಲ್ಲ, ಕುಡಿಯುವ ನೀರು ಪೂರೈಸುವ ಬಗ್ಗೆ ಯೋಚಿಸಿಲ್ಲ. ಆಡಂಬರ, ಜಾಹೀರಾತು, ರಿಯಲ್ ಎಸ್ಟೇಟ್ನಲ್ಲೇ ಸಿಎಂ ಕಾಲ ಕಳೆಯುತ್ತಿದ್ದಾರೆ. ಒಬ್ಬ ಸಚಿವರು ಕೂಡ ಹಳ್ಳಿಗಳಿಗೆ ಭೇಟಿ ನೀಡಿಲ್ಲ. ಬೋರ್ವೆಲ್ ಕೊರೆಯುವುದರ ಬಗ್ಗೆ ಇನ್ನೂ ಕ್ರಮ ವಹಿಸಿಲ್ಲ. ಹೊಲ ಉಳುಮೆ ಮಾಡಲು ನಾಲ್ಕೈದು ಸಾವಿರ ರೂ. ಖರ್ಚಾಗುವಾಗ ಇಷ್ಟು ಕಡಿಮೆ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ವಿಶೇಷ ಅಧಿವೇಶನದಲ್ಲಿ ಕೋಟ್ಯಂತರ ರೂಪಾಯಿ ಪರಿಹಾರ ಸಿಗಲಿದೆ ಎಂದುಕೊಂಡಿದ್ದೆ. ಕೊನೆಗೆ ರೈತರಿಗೆ ನಾಮ ಹಾಕಿದರು ಎಂದರು.
ಶ್ವೇತಪತ್ರ ಬಿಡುಗಡೆ ಮಾಡಿ
ಬ್ಯಾಂಕ್ಗಳು ಸಾಲ ವಸೂಲಾತಿಗೆ ನೋಟಿಸ್ ನೀಡುತ್ತಿವೆ. ಮೈಕ್ರೋ ಫೈನಾನ್ಸ್ಗಳು ಸಾಲ ವಸೂಲಿಗೆ ಬರುತ್ತಿವೆ. ಹಾಲಿನ ಪ್ರೋತ್ಸಾಹಧನವನ್ನು 5 ರಿಂದ 8 ರೂ. ಮಾಡಲಾಗುವುದೆಂದು ಘೋಷಣೆ ಮಾಡಿ ಅದನ್ನು ಜಾರಿ ಮಾಡಿಲ್ಲ. ಬದಲಾಗಿ ಹಾಲಿನ ದರ ಹೆಚ್ಚಿಸಲಾಗಿದೆ. ಸರ್ಕಾರ ಈಗ ಬರದ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು. ಎಷ್ಟು ಪರಿಹಾರ ಬಿಡುಗಡೆಯಾಗಿದೆ? ರೈತರಿಗೆ ಎಷ್ಟು ಹಣ ನೀಡಲಾಗಿದೆ? ಯಾವ ಕೆಲಸಗಳಾಗಿವೆ ಎಂದು ಜನರಿಗೆ ತಿಳಿಯಬೇಕು ಎಂದರು.
ಪತ್ರ ಬರೆದಿದ್ದೇನೆ
ಸೋನಿಯಾ ಗಾಂಧಿ ಮದುವೆಯಾಗಿ 15 ವರ್ಷಗಳಾದ ನಂತರ ಭಾರತೀಯರಾದರು. ಅಂತಹ ವಂಶದಿಂದ ಬಂದ ರಾಹುಲ್ ಗಾಂಧಿ ವೋಟ್ ಚೋರಿ ಬಗ್ಗೆ ಮಾತಾಡುತ್ತಾರೆ. ಇದರ ಬದಲು ಕರ್ನಾಟಕದಲ್ಲಿ ಖಜಾನೆ ಚೋರಿ ಬಗ್ಗೆ ಮಾತಾಡಬೇಕು. ರೈತರ ಸಮಸ್ಯೆ ಆಲಿಸುವಂತೆ ಆಗ್ರಹಿಸಿ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದೇನೆ ಎಂದರು.
ಸಚಿವ ಸಂಪುಟದಲ್ಲಿ ಅನ್ನದಾತರ ಬಗ್ಗೆ, ಮೇಕೆದಾಟು, ಕುಡಿಯುವ ನೀರಿನ ಬಗ್ಗೆ ಚರ್ಚೆಯಾಗಬೇಕು. ಅದರ ಬದಲು ಸ್ಟಿಂಗ್ ಆಪರೇಶನ್ ಬಗ್ಗೆ ಚರ್ಚೆ ಮಾಡಿದರೆ ಸರ್ಕಾರದ ಮಾನ ಹೋಗುತ್ತದೆ. ಇದರಿಂದಾಗಿ ಸಚಿವ ಸಂಪುಟ ಮಲಿನವಾಗಿದೆ. ಜನರ ಕಷ್ಟಗಳ ಬಗ್ಗೆ ಸಭೆಯಲ್ಲಿ ಮಾತಾಡಬೇಕಿದ್ದರೂ ಪಾಪರ್ ಆಗಿರುವುದರಿಂದ ವಿಷಯಾಂತರ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಮಾಡಿರುವ ಸಾಲಮನ್ನಾ ಬಗ್ಗೆ ಅಧ್ಯಯನ ಮಾಡಿ ಅದನ್ನು ಇಲ್ಲಿ ಜಾರಿ ಮಾಡುವ ಬಗ್ಗೆ ಚರ್ಚಿಸಬೇಕಿತ್ತು ಎಂದರು.
ಸ್ಟಿಂಗ್ ಆಪರೇಶನ್ ಬಗ್ಗೆ ಎಫ್ಐಆರ್ ಮಾಡಲಿ
ಮಾಜಿ ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಮುಖ್ಯಮಂತ್ರಿಯಾಗಿದ್ದರು. ಅಂತಹವರಿಗೆ ಕೋರ್ಟ್ ಮೆಟ್ಟಿಲು ಹತ್ತುವ ನೋವನ್ನು ಕಾಂಗ್ರೆಸ್ನವರು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಈಗ ಕಾಂಗ್ರೆಸ್ನ ಸಂಸ್ಕೃತಿ ಗೊತ್ತಾಗಿದೆ. ಅವರ ಬೆನ್ನಿಗೆ ಕಾಂಗ್ರೆಸ್ ನಾಯಕರು ಚೂರಿ ಹಾಕಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುವ ದಯನೀಯ ಸ್ಥಿತಿ ಅವರಿಗೆ ಬಂದಿದೆ. ಅವರನ್ನು ಯೂಸ್ ಅಂಡ್ ತ್ರೋ ಮಾಡಿದ್ದಾರೆ ಎಂದರು.
ಸ್ಟಿಂಗ್ ಆಪರೇಶನ್ ಮಾಡಿದ್ದು ಯಾರೆಂದು ಬೆಳಕಿಗೆ ಬರಬೇಕೆಂದು ಅವರು ಹೇಳಿದ್ದರು. ಆದ್ದರಿಂದ ಮೊದಲು ಎಫ್ಐಆರ್ ಆಗಬೇಕು. ಕೆಲವರನ್ನು ಬಂಧಿಸಿ ಪ್ರಭಾವಿಗಳ ಸುಪರ್ದಿಯಲ್ಲಿ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ. ಸೈದ್ಧಾಂತಿಕವಾಗಿ ಸಿದ್ದರಾಮಯ್ಯನವರನ್ನು ನಾನು ವಿರೋಧ ಮಾಡುತ್ತೇನೆ. ಆದರೆ ಹಿರಿಯರಾದ ಅವರಿಗೆ ಹೀಗೆ ಮಾಡಬಾರದಿತ್ತು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಅವರು ಸಚಿವರಾಗಿದ್ದರು ಹಾಗೂ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದರು. ಫಾರ್ಮ್ 7 ಕೊಟ್ಟವರನ್ನು ಕೂಡಲೇ ಬಂಧಿಸಿದ್ದಾರೆ. ಆದರೆ ಸ್ಟಿಂಗ್ ಆಪರೇಶನ್ ಮಾಡಿದವರು ಯಾರೆಂದು ಕೂಡ ಹೇಳಿಲ್ಲ. ಧೈರ್ಯವಿದ್ದರೆ ಈ ಕುರಿತು ತನಿಖೆ ಮಾಡಲಿ, ಸಿಬಿಐಗೆ ವಹಿಸಲಿ. ಮೊದಲು ಎಫ್ಐಆರ್ ಆಗಲಿ ಎಂದರು.
ಮಾಜಿ ಸಚಿವ ರಾಜಣ್ಣ ಈ ಬಗ್ಗೆ ಮಾತಾಡಿರುವುದರಿಂದ ಅವರ ಮೂಲಕವೇ ದೂರು ಸ್ವೀಕಾರ ಮಾಡಲಿ. ಸ್ವಯಂಪ್ರೇರಿತವಾಗಿಯೂ ದೂರು ದಾಖಲಿಸಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕೋರ್ಟ್ಗೆ ಹೋಗಿರುವುದರಿಂದ ದೂರು ದಾಖಲಿಸಬಹುದು. ಸುಮ್ಮನೆ ಮಾತಾಡುವುದು ಬೇಡ ಎಂದರು.
ದೆಹಲಿ ಪ್ರತಿಭಟನೆ
ಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸಿದಾಗ, ರಾಹುಲ್ ಗಾಂಧಿ ಅವರ ಕತ್ತಿನ ಪಟ್ಟಿ ಹಿಡಿದು ತಳ್ಳುತ್ತಿರುವ ವೀಡಿಯೋ ನೋಡಿದೆ. ಇದು ರಾಜ್ಯದ ಜನರಿಗೆ ಮಾಡಿದ ಅಪಮಾನ. ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿ ಅದೇ ಪಕ್ಷದ ನಾಯಕರು ಈ ರೀತಿ ಅವಮಾನ ಮಾಡಿಲ್ಲ. ಕತ್ತಿನ ಪಟ್ಟಿ ಹಿಡಿದು ತಳ್ಳಿರುವುದು ಎಲ್ಲರೂ ತಲೆ ತಗ್ಗಿಸುವ ಘಟನೆ. ಇದು ಏಳು ಕೋಟಿ ಕನ್ನಡಿಗರಿಗೆ ಮಾಡಿದ ಅಪಮಾನ. ರಾಹುಲ್ ಗಾಂಧಿ ಕೂಡಲೇ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರಿಗೆ ರಾಜ್ಯಕ್ಕೆ ಬರಲು ಬಿಡಬಾರದು. ಇದೇ ಕಾಂಗ್ರೆಸ್ನ ಸಂಸ್ಕೃತಿ. ಇಂತಹ ಸಂಸ್ಕೃತಿಯನ್ನು ಬೆಳೆಸಬಾರದು. ಇದು ಗುಲಾಮಗಿರಿಗಿಂತಲೂ ಕೆಟ್ಟ ಸ್ಥಿತಿ. ಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ಗೆ ಹಣ ನೀಡುವ ಬಾಂಡೆಡ್ ಲೇಬರ್ ರೀತಿ ಆಗಿದ್ದಾರೆ. ಗಾಂಧಿ ಕುಟುಂಬವೇ ಅವರನ್ನು ತಳ್ಳಿಹಾಕಿದೆ ಎಂದರು.


