ಭಾರತವನ್ನು ನಾವು ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡಿಯೇ ಮಾಡುತ್ತೇವೆ. ನಮಗೆ ಇರುವುದು ಇದೊಂದೇ ದೇಶ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ದುಂಢಸಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, “ಶಿಗ್ಗಾಂವಿ ಸವಣೂರು ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿಯವರು ಮಾಡಿರುವ ಅಭಿವೃದ್ಧಿ ಕೆಲಸ ನೋಡಿದರೆ ಯಾರೂ ತಕರಾರು ಮಾಡದೆ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಮತ ಹಾಕುತ್ತಾರೆ” ಎಂದರು.
“ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಹೊಸದೇನಾದರೂ ಹೇಳಿದ್ದಾರಾ? ದುಂಢಸಿಯಲ್ಲಿ 19 ಎಕರೆ ಜಮೀನು ವಕ್ಪ್ ಆಸ್ತಿ ಮಾಡಿದ್ದಾರೆ. ನಾನು ವಕ್ಪ್ ಬಗ್ಗೆ ಆಗ ಮಾತನಾಡಲು ವಿಶ್ವೇಶ್ವರ್ ಹೆಗಡೆ, ಬೊಮ್ಮಾಯಿ ಕಾರಣ. ಇನ್ನೂ ಎಷ್ಟು ವರ್ಷ ಇಂದಿರಾ ಗಾಂಧಿ ಅಂತ ಹೇಳುತ್ತಿರಿ? ಜಿಲೇಬಿ ಫ್ಯಾಕ್ಟರಿ ಮಾಡುತ್ತೇನೆ. ಬಟಾಟಿಯಲ್ಲಿ ಬಂಗಾರ ತೆಗೆಯುತ್ತೇನೆ ಅನ್ನುವ ಹಾಪ್ ಮೇಡ್ ರಾಹುಲ್ ಗಾಂಧಿ ಮಾತು ಕೇಳುತ್ತೀರಾ” ಎಂದು ಟೀಕಿಸಿದರು.
“ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ಎಷ್ಟು ಸುಧಾರಣೆ ಮಾಡಿದ್ದಾರೆ. ಈಗ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಕಾಂಗ್ರೆಸ್ ನವರು ಸೈನ್ಯಕ್ಕೆ ಎಕೆ 47 ಬಳಕೆ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಈಗ ಮೋದಿಯವರು ನಮ್ಮ ಸೈನಿಕರಿಗೆ ಎಲ್ಲ ಅವಕಾಶ ಕೊಟ್ಟಿದ್ದಾರೆ. ನೆಹರು ಅವರು ಚೀನಾ ಯುದ್ದದ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ಒಂದು ಚಸ್ಮಾ ಕೊಟ್ಟಿರಲಿಲ್ಲ. ಅವರಿಂದ ನಮ್ಮ ಸೈನಿಕರಿಗೆ ಸಾಕಷ್ಟು ಅನ್ಯಾಯವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿಗೆ ನಮಸ್ಕಾರ ಮಾಡಿಕೊಂಡು ತಿರುಗಾಡಿದರು. ನಮ್ಮ ಪ್ರಧಾನಿ ನಾನು ಪ್ರಧಾನ ಸೇವಕ ಯಾರೂ ಕಾಲಿಗೆ ಬೀಳಬೇಕಿಲ್ಲ” ಎಂದರು.
“ವಕ್ಪ್ ಕಾಯಿದೆ ಎಷ್ಟು ಅಪಾಯಕಾರಿ ಇದೆ ನೋಡಿ, ಅವರು ಮೂವತ್ತು ಪರ್ಸೆಂಟ್ ಜನಸಂಖ್ಯೆ ಆದರೆ, ನಮ್ಮವರು ಯಾರೂ ಶಾಸಕರಾಗಲು ಸಾಧ್ಯವಿಲ್ಲ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅವರಿಗೆ ಹೋಲಿಕೆ ಮಾಡಿ ನೋಡಿ, ಅವರ ಅಭ್ಯರ್ಥಿ ಬಗ್ಗೆ ಅಜ್ಜಂಪೀರ್ ಖಾದ್ರಿನೇ ಅವನ ಬಣ್ಣ ಬಿಚ್ಚಿದ್ದಾನೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ನಮ್ಮ ಮುಖಾ ನೋಡಿ ಮತ ಹಾಕಿ ಎನ್ನುತ್ತಾರೆ. ನಾವು ಯಾರ ಮುಖ ನೋಡಿ ಹಾಕಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪಿಎ ಮೂಲಕ ಸರ್ಕಾರಿ ಅಧಿಕಾರಿನ ಕೊಂದಿದ್ದಾರೆ. ಅಬಕಾರಿ ಸಚಿವ ತಿಮ್ಮಾಪುರ 900 ಕೋಟಿ ಲೂಟಿ ಮಾಡಿದ್ದಾರೆ. ನೀವು ಹಿಂಗೆ ಇದ್ದರೆ ಎಲ್ಲ ಆಸ್ತಿ ಹೋಗುತ್ತದೆ. ಎರಡು ಸಾವಿರ ರೂಪಾಯಿ ಮಾತ್ರ ಉಳಿಯುತ್ತದೆ” ಎಂದರು.


