Homeಕರ್ನಾಟಕಆಶಾ ಕಾರ್ಯಕರ್ತೆಯರ ಗೌರವ ಧನ 2 ಸಾವಿರ ರೂ. ಹೆಚ್ಚಳ: ಸಿಎಂ ಡಿ ಕೆ ಶಿವಕುಮಾರ್...

ಆಶಾ ಕಾರ್ಯಕರ್ತೆಯರ ಗೌರವ ಧನ 2 ಸಾವಿರ ರೂ. ಹೆಚ್ಚಳ: ಸಿಎಂ ಡಿ ಕೆ ಶಿವಕುಮಾರ್ ಘೋಷಣೆ

ಆಶಾ ಕಾರ್ಯಕರ್ತೆಯರ ಗೌರವ ಧನ ಮಾಸಿಕ 2 ಸಾವಿರ ರೂ. ಹೆಚ್ಚಿಸಲು ನಿರ್ಧರಿಸಲಾಗಿದ್ದು, ಮುಂದಿನ ಜನವರಿ 1ರಿಂದ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆಶಾ ಕಾರ್ಯಕರ್ತೆಯರ ನಿಯೋಗದೊಂದಿಗೆ ಮಾತುಕತೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

“ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಬೆಳಿಗ್ಗೆ ಕಳೆದ 12ದಿನಗಳಿಂದ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಗೌರವಧನದಲ್ಲಿ ಹೆಚ್ಚಳ ಮಾಡಲಾಗಿಲ್ಲ ಎಂಬುವುದು ಆಶಾ ಕಾರ್ಯಕರ್ತೆಯರ ಅಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಗೌರವಧನ ಹೆಚ್ಚಳಕ್ಕೆ ಒಪ್ಪಿಕೊಂಡಿದೆ” ಎಂದರು.

“ಪ್ರಸ್ತುತ ರಾಜ್ಯ ಸರ್ಕಾರ ರೂ. 5 ಸಾವಿರ ಕೆಂದ್ರ ಸರ್ಕಾರ ರೂ. 2ಸಾವಿರ ಗೌರವಧನ ನೀಡುತ್ತಿದ್ದು, ಕಾರ್ಯನಿರ್ವಹಣೆ ಆಧಾರದಲ್ಲಿ ಸರಾಸರಿ ರೂ.2ಸಾವಿರ ದಷ್ಟು ಪ್ರೋತ್ಸಾಹ ಧನವನ್ನು ಪಡೆಯುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಗೌರವಧನ ಕೇಂದ್ರ ಹಾಗೂ ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಹಂಚಿಕೆ ಮಾಡಬೇಕಿದ್ದರೂ, ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನದಲ್ಲಿ ಹೆಚ್ಚಳ ಮಾಡಿಲ್ಲ. ಕೇಂದ್ರ ಸರ್ಕಾರ ಸಹ ಜವಾಬ್ದಾರಿ ವಹಿಸಿಕೊಳ್ಳಬೇಕು” ಎಂದು ಹೇಳಿದರು.

“ಪ್ರತಿಭಟನೆ ಹಿಂತೆಗೆದುಕೊಳ್ಳುವ ಕುರಿತಾಗಿ ಇಂದು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸುದೀರ್ಘವಾದ ಚರ್ಚೆ ನಡೆಸಲಾಗಿದೆ. ನಾವು ಗ್ಯಾರಂಟಿ ಕೊಟ್ಟ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೂ ನೀಡಿದ್ದೇವೆ. ಈಗ ಬೆಲೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗೌರವ ಧನ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಈ ನಿರ್ಧಾರವನ್ನು ಎಲ್ಲರೂ ಸಂತೋಷದಿಂದ ಒಪ್ಪಿಕೊಂಡಿದ್ದಾರೆ” ಎಂದು ತಿಳಿಸಿದರು.

“ಆಶಾ ಕಾರ್ಯಕರ್ತೆಯರು ನಮ್ಮ ರಾಜ್ಯದ ಆಸ್ತಿ. ಅವರೆಲ್ಲರೂ ಹಳ್ಳಿ ಹಾಗೂ ನಗರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಹಿತಕ್ಕೆ ಅವರ ಸೇವೆ ಮುಂದುವರೆಯಲಿದೆ. ಕೆಲವರು ಆಶಾ ಕಾರ್ಯಕರ್ತೆಯರ ಹೋರಾಟವನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದರೂ, ಅವರು ಬಗ್ಗಿಲ್ಲ. ಅವರ ಒಗ್ಗಟ್ಟು ಮುರಿಯಲು ಕೆಲವರು ಪ್ರಯತ್ನಿಸಿದರೂ, ಮುರಿಯಲು ಸಾಧ್ಯವಾಗಿಲ್ಲ” ಎಂದರು.

“ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರೊಂದಿಗೆ ಗೌರವದಿಂದ ವರ್ತಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೆ. ಸರ್ಕಾರ ಅವರಿಗೆ ಗೌರವ ನೀಡಿದೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಹೇಳಿದ್ದು, ಎಲ್ಲರೂ ಸಂತೋಷದಿಂದ ಒಪ್ಪಿಕೊಂಡಿದ್ದಾರೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments