Homeಕರ್ನಾಟಕದೇವಸ್ಥಾನಗಳಿಗಿಂತ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿ: ಬಿ.ಕೆ. ಹರಿಪ್ರಸಾದ್

ದೇವಸ್ಥಾನಗಳಿಗಿಂತ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿ: ಬಿ.ಕೆ. ಹರಿಪ್ರಸಾದ್

ಶೋಷಿತ ಮತ್ತು ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕೆ ಶಿಕ್ಷಣವೇ ಮೂಲ ಅಸ್ತ್ರ. ದೇವಸ್ಥಾನ, ಮಠ, ಮಂದಿರಗಳನ್ನು ಸಾಕಷ್ಟು ನಿರ್ಮಿಸಿದ್ದೇವೆ. ಇನ್ನಾದರೂ ಸರಸ್ವತಿ ಮಂದಿರಗಳೆಂಬ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕರೆ ನೀಡಿದರು.

ಶ್ರೀ ನಾರಾಯಣ ಗುರು ಮಹಾ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಪಂಗಡಗಳನ್ನು ಒಳಗೊಂಡ ಸಮುದಾಯದಲ್ಲಿ ಅಗಾಧವಾದ ಪ್ರತಿಭೆ, ಸಾಮರ್ಥ್ಯ ಹಾಗೂ ಆರ್ಥಿಕ ಶಕ್ತಿಯಿದೆ. ಆದರೆ ಅದನ್ನು ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವಾಗಬೇಕಿದೆ ಎಂದರು.

‘ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು’ ಎಂಬ ನಾರಾಯಣ ಗುರುಗಳ ಸಿದ್ಧಾಂತದಲ್ಲಿ ಅಚಲವಾದ ನಂಬಿಕೆ ಇಟ್ಟುಕೊಂಡಿದ್ದೇನೆ. ಜಾತಿ ತಾರತಮ್ಯ, ಧರ್ಮದ್ವೇಷ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ ನಾರಾಯಣ ಗುರುಗಳು ಶಿಕ್ಷಣದ ಮೂಲಕ ಸ್ವಾತಂತ್ರ್ಯ, ಸಂಘಟನೆಯ ಮೂಲಕ ಶಕ್ತಿ ಗಳಿಸುವ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಅವರ ತತ್ವಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ ಆಚರಣೆಗೆ ತರಬೇಕಿದೆ ಎಂದು ಹೇಳಿದರು.

ಸಮುದಾಯದಲ್ಲಿ ಕೆಲವರು ಆರ್ಥಿಕವಾಗಿ ಸಬಲರಾಗಿದ್ದರೂ ಬಹುಸಂಖ್ಯಾತರು ಬಡತನದಲ್ಲಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮುದಾಯದ ಶ್ರೀಮಂತರು, ಉದ್ಯಮಿಗಳು ಹಾಗೂ ಸಂಘ-ಸಂಸ್ಥೆಗಳು ಒಗ್ಗೂಡಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.

ದಿವಂಗತ ಆರ್.ಎಲ್. ಜಾಲಪ್ಪನವರ ಆರ್ಥಿಕ ನೆರವಿನಿಂದ ಉನ್ನತ ಶಿಕ್ಷಣ ಪಡೆದ ಸಮುದಾಯದ ಹೆಣ್ಣುಮಗಳೊಬ್ಬರು ಇಂದು ಖರಗ್‌ಪುರದಲ್ಲಿ ಕ್ಯಾನ್ಸರ್ ಔಷಧಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣಕ್ಕಾಗಿ ಮೂರುವರೆ ಲಕ್ಷ ರೂಪಾಯಿ ಹೊಂದಿಸಲು ಸಾಧ್ಯವಾಗದಿದ್ದ ಆಕೆ ಇಂದು ತಿಂಗಳಿಗೆ ಮೂರುವರೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಶಿಕ್ಷಣದಿಂದ ವ್ಯಕ್ತಿಯ ಬದುಕಿನಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಇದು ಉದಾಹರಣೆ ಎಂದರು.

ಸ್ವಾಮೀಜಿಗಳು ಒಂದಾಗಬೇಕು:

ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ಸಮಾಜದ ಹಿತಕ್ಕಾಗಿ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಒಂದೇ ವೇದಿಕೆಗೆ ಬರುತ್ತೇವೆ. ಸಮುದಾಯದ ಸ್ವಾಮೀಜಿಗಳೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಸಮಾಜದ ಸಂಘ-ಸಂಸ್ಥೆಗಳು ವೈಯಕ್ತಿಕ ಹಿತಾಸಕ್ತಿಗಳಿಗೆ ಬಳಕೆಯಾಗದೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ನಾರಾಯಣ ಗುರುಗಳ ತತ್ವ-ಸಿದ್ಧಾಂತಗಳನ್ನು ಪ್ರಸಾರ ಮಾಡುವ ಭವ್ಯ ಆಶ್ರಮವನ್ನು ನಿರ್ಮಿಸುವ ಉದ್ದೇಶವಿದೆ. ಶಿವಗಿರಿ ಮಠದ ಸನ್ಯಾಸಿಗಳ ನೇತೃತ್ವದಲ್ಲಿ ಯುವಜನರಿಗೆ ಶಿಕ್ಷಣ, ಸಂಸ್ಕಾರ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗಕ್ಕೆ ಮಾರ್ಗದರ್ಶನ ನೀಡುವ ಕೇಂದ್ರವಾಗಿ ಅದನ್ನು ರೂಪಿಸಬೇಕಿದೆ ಎಂದರು.

ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಿ:

ಹಿಂದುಳಿದ ವರ್ಗಗಳು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಜಾತಿಗಣತಿ, ಸ್ಥಳೀಯ ಸಂಸ್ಥೆಗಳ ಮೀಸಲಾತಿ ಹಾಗೂ ಅಭಿವೃದ್ಧಿ ನಿಗಮಗಳಿಗೆ ಅನುದಾನ ಹಂಚಿಕೆಯ ವಿಚಾರದಲ್ಲಿ ಜಾಗೃತರಾಗಿರಬೇಕು. ಸಂವಿಧಾನಬದ್ಧವಾಗಿ ದೊರಕಬೇಕಾದ ಹಕ್ಕು ಮತ್ತು ಪಾಲಿಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕು.

ಸರ್ಕಾರದ ಹಣ ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ. ಜನರು ಬೆವರು ಸುರಿಸಿ ದುಡಿದು, ತೆರಿಗೆ ಪಾವತಿಸಿ ತುಂಬಿದ ಖಜಾನೆಯ ಹಣವದು. ಅದರಲ್ಲಿ ಜನರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪಾಲನ್ನು ದೊರಕಿಸಿಕೊಡುವುದು ಜನಪ್ರತಿನಿಧಿಗಳ ಜವಾಬ್ದಾರಿ. ಅಧಿಕಾರವೆಂದರೆ ದರ್ಪವಲ್ಲ, ಜನಸೇವೆ ಎಂದರು.

ನನ್ನ 53 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಸಂವಿಧಾನ ಮತ್ತು ನಾರಾಯಣ ಗುರುಗಳ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡು ಶೋಷಿತ, ದಮನಿತ ಸಮುದಾಯಗಳ ಪರವಾಗಿ ಧ್ವನಿ ಎತ್ತುತ್ತಾ ಬಂದಿದ್ದೇನೆ ಎಂದು ಹೇಳಿದರು.

ರಾಷ್ಟ್ರಮಟ್ಟದಲ್ಲಿ ಒಕ್ಕೂಟ ವಿಸ್ತರಣೆಯಾಗಲಿ:

ನಾರಾಯಣ ಗುರು ಮಹಾ ಒಕ್ಕೂಟ ಕೇವಲ ಕರ್ನಾಟಕಕ್ಕೆ ಸೀಮಿತವಾಗಬಾರದು. ಕೇರಳದ ಈಳವರು, ತಮಿಳುನಾಡಿನ ನಾಡಾರ್‌ಗಳು, ಮಹಾರಾಷ್ಟ್ರ ಮತ್ತು ಗೋವಾದ ಭಂಡಾರಿಗಳು, ರಾಜಸ್ಥಾನ ಮತ್ತು ಗುಜರಾತ್‌ನ ಕಲಾಲ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿರುವ ಸಮುದಾಯಗಳನ್ನು ನಾರಾಯಣ ಗುರುಗಳ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಒಗ್ಗೂಡಿಸಿ, ರಾಷ್ಟ್ರಮಟ್ಟದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಮಹಾ ಒಕ್ಕೂಟದ ರಚನೆಗೆ ಮುಂದಾಗಿರುವ ಸುಧಾಕರ್ ಅವರ ಪ್ರಯತ್ನವನ್ನು ಶ್ಲಾಘಿಸಿದ ಹರಿಪ್ರಸಾದ್, ಸಮುದಾಯದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮವನ್ನು ಕೇರಳ ವರ್ಕಳ ಶಿವಗಿರಿ ಮಠದ ಋತಂಬರಾನಂದ ಸ್ವಾಮೀಜಿ ಉದ್ಘಾಟಿಸಿದರು. ಸೋಲೂರಿನ  ವಿಖ್ಯಾತಾನಂದ ಸ್ವಾಮೀಜಿ, ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ,  ರೇಣುಕಾನಂದ ಸ್ವಾಮೀಜಿ, ಯೋಗೇಂದ್ರ ಅವಧೂತರು, ಅರುಣಾನಂದತೀರ್ಥ ಸ್ವಾಮೀಜಿ, ದೇವಿಕಾನಂದ ಸ್ವಾಮೀಜಿ, ಶಂಕರಪ್ಪ ಸ್ವಾಮೀಜಿ, ಭೀಮಾಶಂಕರ ಶರಣ ಸ್ವಾಮೀಜಿ ಹಾಗೂ ಅವಧೂತ ವಿನಯ್ ಗುರೂಜಿ ಅವರೆಲ್ಲರೂ ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments