HomeReviewsಸೋನಿಯಾ ಗಾಂಧಿ ಭಾರತಕ್ಕೆ ಬರೆದ ಪ್ರೇಮ ಪತ್ರ “BELONGING”

ಸೋನಿಯಾ ಗಾಂಧಿ ಭಾರತಕ್ಕೆ ಬರೆದ ಪ್ರೇಮ ಪತ್ರ “BELONGING”

ಹಿರಿಯ ಪತ್ರಕರ್ತರಾದ ಗಿರೀಶ್ ಕೋಟೆ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು. ‘ಅಗ್ನಿ’  ವಾರಪತ್ರಿಕೆಯಲ್ಲಿ ಕೆಲಸ ಮಾಡಿ, ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಂಯೋಜಕರಾಗಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ (OSD) ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಬರೆದಿರುವ Belonging: A Journey of Love ಆತ್ಮಕಥನ ಪುಸ್ತಕವನ್ನು ಸೋನಿಯಾ ಗಾಂಧಿ ಭಾರತಕ್ಕೆ ಬರೆದ ಪ್ರೇಮ ಪತ್ರ “BELONGING” ಎಂದು ವಿಶ್ಲೇಷಿಸಿದ್ದಾರೆ. ಸೋನಿಯಾ ಗಾಂಧಿ ಅವರ ಅಂತರಂಗವನ್ನು ಯಾರಿಗಾಗಿ ತೆರೆದಿಟ್ಟಿರಬಹುದು ಎನ್ನುವುದಕ್ಕೆ ಉತ್ತರವಾಗಿಯೂ ಗಿರೀಶ್ ಅವರ ಬರಹ ಇದೆ.

ಇನ್ನೇನು 80 ವರ್ಷಕ್ಕೆ ಕಾಲಿಡುತ್ತಿರುವ ಸೋನಿಯಾ ಗಾಂಧಿ ಅವರ “BELONGING: A JOURNEY OF LOVE” ವ್ಯಾಪಕ ಮತ್ತು ಮುಕ್ತ ಚರ್ಚೆಗೆ ತೆರೆದುಕೊಂಡಿದೆ. ಪುಸ್ತಕ ಓದಲು ಶುರು ಮಾಡುತ್ತಿದ್ದಂತೆ ಒಂದು ಪ್ರಶ್ನೆ ನನ್ನ ಆಲೋಚನೆಯೊಳಗೆ ಹೆಪ್ಪುಗಟ್ಟುತ್ತಲೇ ಇತ್ತು.

ಅತ್ಯಂತ ಸಂಕೋಚ ಸ್ವಭಾವದ ಸೋನಿಯಾ ಗಾಂಧಿ ಅಷ್ಟಕ್ಕೂ ಈ ಇಳಿ ವಯಸ್ಸಿನಲ್ಲಿ ಈ ಕೃತಿಯನ್ನು ಯಾಕಾಗಿ ಹೊರಗೆ ತಂದಿರಬಹುದು? ತಮ್ಮ ಅಂತರಂಗವನ್ನು ಯಾರಿಗಾಗಿ ತೆರೆದಿಟ್ಟಿರಬಹುದು ಎನ್ನುವ ಪ್ರಶ್ನೆಯನ್ನು ಅಂಗೈಯಲ್ಲಿಟ್ಟುಕೊಂಡು ಉತ್ತರ ಹುಡುಕುತ್ತಾ ಹೋದಾಗ ಉತ್ತರವಾಗಿ ಕಾಡಿದ್ದು ಮತ್ತಷ್ಟು ಪ್ರಶ್ನೆಗಳೇ.

“ಇಷ್ಟು ವರ್ಷ ನನ್ನ ಬಗ್ಗೆ ಉಳಿದವರು ಆಡಿದ್ದು, ಮಾತಾಡಿದ್ದು ಆಯಿತು. ಈಗ ನನ್ನ ಸರದಿ” ಎನ್ನುವ ದಿಟ್ಟ ಮಾತುಗಳ ಮೂಲಕ ಬಲಿ ಪಾಡ್ಯಮಿಯ ದಿನ “BELONGING” ಅನ್ನು ಜನಾರ್ಪಣೆಗೊಳಿಸಿದರು. ಹೀಗಾಗಿ ಸೋನಿಯಾ ಗಾಂಧಿ ಅವರ ಬಗ್ಗೆ ಸತತ ಅರ್ಧ ಶತಮಾನ ಕಾಲ ಕಟ್ಟು ಕಥೆಗಳನ್ನು ಪೋಣಿಸಿದ್ದ ಪಂಡಿತರಿಗೆ, ಈ ಕಟ್ಟು ಕಥೆಗಳನ್ನೇ ರಾಜಕೀಯ ಸಿದ್ಧಾಂತವಾಗಿ ಮಂಡಿಸುತ್ತಿದ್ದ ರಾಜಕೀಯ ಎದುರಾಳಿಗಳಿಗೆ, ತಮ್ಮ ನೆರಳಲ್ಲೇ ಇದ್ದ ಹಿತ ಶತ್ರುಗಳಿಗೆ ಸರಿಯಾದ ಉತ್ತರ ಕೊಡಲಿಕ್ಕಾಗಿ ತಮ್ಮ ಆತ್ಮ ಕಥೆಯನ್ನು ಬರೆದಿರಬಹುದು ಎನ್ನುವ ಅನುಮಾನದಲ್ಲೇ ಓದುತ್ತಾ ಹೋದಂತೆ ಪುಟಗಳು ತಿರುವಿದಷ್ಟೂ ಅನುಮಾನಗಳೆಲ್ಲಾ ಒಂದೊಂದಾಗಿ ಅಳಿಸುತ್ತಾ ಬೇರೆಯದೇ ಜಗತ್ತು ತೆರೆದುಕೊಳ್ಳುತ್ತದೆ.

ಕಟ್ಟು ಕತೆಗಳ ಪಂಡಿತರು, ರಾಜಕೀಯ ಎದುರಾಳಿಗಳು ಮತ್ತು ಹಿತ ಶತ್ರುಗಳೆಲ್ಲಾ ಸೋನಿಯಾ ಅವರ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟರೂ ಅಪ್ಪಟ ನಿರ್ಲಕ್ಷ್ಯಕ್ಕೆ ಮಾತ್ರ ಅರ್ಹರು ಎನ್ನುವುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಆದರೆ, ಬಾಕಿ ಉಳಿದದ್ದ ಈ ಪುಸ್ತಕ ಯಾರಿಗಾಗಿ ಎನ್ನುವ ಪ್ರಶ್ನೆಗೆ ಉತ್ತರ 369-375ನೆ ಪುಟಗಳಿಗೆ ಬರುತ್ತಿದ್ದಂತೆ ಸ್ಪಷ್ಟವಾಗುತ್ತದೆ.

ರಾಜೀವ್‌ ಗಾಂಧಿ ಹತ್ಯೆ ಬಳಿಕದ ಸಂಕಟದ ಜೊತೆಗೆ ಅತ್ಯಂತ ಅಸಹಾಯಕತೆಯ ಸಂದರ್ಭವನ್ನು ಸೋನಿಯಾ ಎಂಥವರ ಎದೆಯನ್ನೂ ಕರಗಿಸಿಬಿಡುವ ರೀತಿಯಲ್ಲಿ ಬಿಚ್ಚಿಟ್ಟಿದ್ದಾರೆ. ರಾಜೀವ್‌ ಗಾಂಧಿ ಅವರ ಅಂತ್ಯಕ್ರಿಯೆ ಮುಗಿದಿತ್ತು. ಇಟಲಿಯಿಂದ ಬಂದಿದ್ದ ತವರು ಮನೆಕಡೆಯವರೆಲ್ಲಾ ವಾಪಾಸ್‌ ಹೋಗಿ ತಾಯಿ ಮತ್ತು ಸಹೋದರಿ ನಾಡಿಯಾ ಮಾತ್ರ ಮನೆಯಲ್ಲಿ ಉಳಿದಿದ್ದರು.

ಇವರಿಬ್ಬರೂ ವಾಪಾಸ್‌ ಇಟಲಿಗೆ ಹೊರಡುವ ಕೆಲವು ದಿನಗಳ ಮುಂಚೆ ನಡೆದ ಒಂದು ಘಟನೆಯನ್ನು ಸೋನಿಯಾ ಗಾಂಧಿ ಹೀಗೆ ವಿವರಿಸುತ್ತಾರೆ “At times over the next few weeks I could feel a certain restlessness in Nadia. A few days before her departure, while sitting in the drawing room in the afternoon, the two of us alone, she began to talk about our young days when I was still at home before I went to Cambridge-how she always looked up to me and admired me, even though she’d tell tales to our mother on her older sisters, of our games, of my helping her with her homework, of Rajiv when she first saw him. suddenly she became very serious and looking straight into my eyes, she exclaimed, “Sonia, they killed your mother-in-law. Now they have killed your husband. What are you still doing here? What are you waiting for? for your children’s turn? and yours? India has brought you so much sorrow. Come home, Sonia, we all want you to come back” I was stunned by her words. For a moment I couldn’t even speak, but as I regained MY COMPOSURE, i replied firmly. “No Nadia No. U can’t understand. This is my home, this is my country, my children’s country.

(ಮುಂದಿನ ಕೆಲವು ವಾರಗಳಲ್ಲಿ ನಾಡಿಯಾಳಲ್ಲಿ ಒಂದು ರೀತಿಯ ಚಡಪಡಿಕೆಯನ್ನು ನಾನು ಗಮನಿಸುತ್ತಿದ್ದೆ. ಅವರು ಹೊರಡುವುದಕ್ಕೆ ಕೆಲವು ದಿನಗಳ ಮೊದಲು, ಒಂದು ಮಧ್ಯಾಹ್ನ ನಾವು ಇಬ್ಬರೇ ಲಿವಿಂಗ್‌ ರೂಮಿನಲ್ಲಿ ಕುಳಿತಿದ್ದಾಗ, ನಮ್ಮ ಯೌವನದ ದಿನಗಳ ಬಗ್ಗೆ ಮಾತನಾಡತೊಡಗಿದರು. ನಾನು ಕೇಂಬ್ರಿಡ್ಜ್‌ಗೆ ತೆರಳುವ ಮುನ್ನ ಮನೆಯಲ್ಲಿದ್ದ ದಿನಗಳವು. ಅವರು ಯಾವಾಗಲೂ ನನ್ನನ್ನು ಹೇಗೆ ಗೌರವದಿಂದ ನೋಡುತ್ತಿದ್ದರು, ನನ್ನನ್ನು ಎಷ್ಟು ಮೆಚ್ಚಿಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು. ತಮ್ಮ ಅಕ್ಕಂದಿರ ಬಗ್ಗೆ ತಾಯಿಯ ಬಳಿ ಚಾಡಿ ಹೇಳುತ್ತಿದ್ದ ದಿನಗಳು, ನಾವೆಲ್ಲರೂ ಒಟ್ಟಾಗಿ ಆಡುತ್ತಿದ್ದ ಆಟಗಳು, ಅವರ ಹೋಂವರ್ಕ್‌ ಮಾಡಿಕೊಡಲು ನಾನು ನೆರವಾಗುತ್ತಿದ್ದದ್ದು, ರಾಜೀವ್ ಅವರನ್ನು ಮೊದಲ ಬಾರಿಗೆ ನೋಡಿದ ಸಂದರ್ಭ—ಹೀಗೆ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕತೊಡಗಿದರು. ಆದರೆ ಇದ್ದಕ್ಕಿದ್ದಂತೆ ನಾಡಿಯಾ ಧ್ವನಿ ಗಂಭೀರವಾಯಿತು. ನೇರವಾಗಿ ನನ್ನ ಕಣ್ಣುಗಳನ್ನು ನೋಡುತ್ತಾ ಆಕೆ, ““ಸೋನಿಯಾ, ಅವರು ನಿನ್ನ ಅತ್ತೆಯನ್ನು ಕೊಂದರು. ಈಗ ನಿನ್ನ ಪತಿಯನ್ನೂ ಕೊಂದಿದ್ದಾರೆ. ನೀನು ಇನ್ನೂ ಇಲ್ಲೇ ಏನು ಮಾಡುತ್ತೀಯ? ಯಾವುದಕ್ಕಾಗಿ ಕಾಯುತ್ತಿದ್ದೀಯ? ನಿನ್ನ ಮಕ್ಕಳ ಸರದಿಗಾಗಿ? ಆಮೇಲೆ ನಿನ್ನ ಸರದಿಗಾಗಿ ಕಾಯುತ್ತಿದ್ದೀಯಾ? ಭಾರತ ನಿನಗೆ ಇಷ್ಟೊಂದು ನೋವು ತಂದಿದೆ. ಸೋನಿಯಾ, ಮನೆಗೆ ಮರಳಿ ಬಾ. ನೀನು ವಾಪಸ್ ಬರಬೇಕೆಂದು ನಾವೆಲ್ಲರೂ ಬಯಸುತ್ತೇವೆ.” ಎಂದು ನಾಡಿಯಾ ಹೇಳಿದರು.

ನಾಡಿಯಾ ಮಾತುಗಳಿಂದ ನಾನು ದಂಗಾಗಿಹೋದೆ. ಒಂದು ಕ್ಷಣ ನನಗೆ ಮಾತನಾಡಲೂ ಸಾಧ್ಯವಾಗಲಿಲ್ಲ. ಆದರೆ ಸಾವರಿಸಿಕೊಂಡು, ದೃಢವಾದ ಧ್ವನಿಯಲ್ಲಿ ಉತ್ತರಿಸಿದೆ. “ಇಲ್ಲ ನಾಡಿಯಾ, ಇಲ್ಲ. ನಿನಗೆ ಇದು ಅರ್ಥವಾಗುವುದಿಲ್ಲ. ಇದೇ ನನ್ನ ಮನೆ. ಇದೇ ನನ್ನ ದೇಶ. ನನ್ನ ಮಕ್ಕಳ ದೇಶವೂ ಇದೇ.” ಎಂದು ಸ್ಪಷ್ಟವಾಗಿ ಹೇಳುವ ಸೋನಿಯಾ ಹೇಳುತ್ತಾರೆ.

ಈ ಸಂದರ್ಭದಲ್ಲಿ ಸೋನಿಯಾಗಾಂಧಿ ಈ ಪುಸ್ತಕ ಯಾರಿಗಾಗಿ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತದೆ. BELONGING ಭಾರತೀಯರಿಗೆ ಬರೆದ ಪ್ರೇಮ ಪತ್ರ ಎನ್ನುವುದು ಸ್ಪಷ್ಟವಾಗುತ್ತದೆ ಮತ್ತು ದೃಢವಾಗುತ್ತದೆ.

ಸೋನಿಯಾ ಅವರು ಈ ಮಾತುಕತೆಗೆ ಮೊದಲೇ ನಾಡಿಯಾ ಮತ್ತು ತನ್ನ ತಾಯಿಗೆ ಇಷ್ಟೇ ಸ್ಪಷ್ಟವಾದ ಮಾತುಗಳಿಂದ, “ನಾನು ಇಲ್ಲೇ ಎಲ್ಲರೆದುರೇ ಮದುವೆಯಾಗಿದ್ದೇನೆ. ಎಲ್ಲರೆದುರೇ ವಿಧವೆಯಾಗಿದ್ದೇನೆ. ನಾನು ಇಲ್ಲೇ ಎಲ್ಲರೆದುರೇ ತಾಯಿ ಆಗಿದ್ದೇನೆ. ನನ್ನ ರಕ್ತದ ಕಣ ಕಣವೂ ಇದನ್ನೇ ತನ್ನ ದೇಶ ಎಂದು ಒಪ್ಪಿಕೊಂಡಿದೆ ಎನ್ನುವುದನ್ನು ಹೇಳಿದ್ದರು. ಆದರೂ ನಾಡಿಯಾ ತನ್ನ ತಾಯಿಯ ಜೊತೆ ಇಟಲಿಗೆ ಹೊರಟು ನಿಂತಾಗ, “Sonia you know me well. I had to tell you what was in my mind. I respect your decision. but don’t delude yourself, you must know that you and your children are not safe here.

(“ಸೋನಿಯಾ, ನಿನಗೆ ನನ್ನ ಸ್ವಭಾವ ಚೆನ್ನಾಗಿ ಗೊತ್ತಿದೆ. ನನ್ನ ಮನಸ್ಸಿನಲ್ಲಿದ್ದುದನ್ನು ನಿನಗೆ ಹೇಳಲೇಬೇಕಿತ್ತು. ನಿನ್ನ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಆದರೆ ನೀನು ನಿನ್ನನ್ನು ಭ್ರಮೆಯಲ್ಲಿಟ್ಟುಕೊಳ್ಳಬೇಡ. ನೀನು ಮತ್ತು ನಿನ್ನ ಮಕ್ಕಳು ಇಲ್ಲಿ ಸುರಕ್ಷಿತವಾಗಿಲ್ಲ ಎಂಬುದನ್ನು ನೀನು ಅರ್ಥಮಾಡಿಕೊಳ್ಳಬೇಕು.”) ಎಂದು ಎಚ್ಚರಿಸಿಯೇ ತೆರಳುತ್ತಾರೆ.

ಸಹೋದರಿ ನಾಡಿಯಾ ಹೇಳಿದ್ದ ಎಚ್ಚರಿಕೆಯ ಮಾತುಗಳು ಸೋನಿಯಾ ಅವರಿಗೂ ಗೊತ್ತಿತ್ತು. ರಾಜೀವ್‌ ಗಾಂಧಿ ಅವರ ಸಂಭವನೀಯ ಹತ್ಯೆಯ ಆತಂಕದಲ್ಲೇ ಏಳು ವರ್ಷಗಳನ್ನು ಕಳೆದಿದ್ದರು. ಸೋನಿಯಾ ಗಾಂಧಿ ಮತ್ತು ರಾಹುಲ್‌, ಪ್ರಿಯಾಂಕ ಅವರಿಗೆ ಇಂದಿರಾ ಗಾಂಧಿ ಹತ್ಯೆ ಬಳಿಕದ ಏಳು ವರ್ಷಗಳ ಕಾಲ ಕಾವಲಿಗೆ ಇದ್ದಿದ್ದು ಈ ಆತಂಕವೇ. ಇಂದಿರಾಗಾಂಧಿ ಅವರ ಮೃತದೇಹ ಆಸ್ಪತ್ರೆಯಲ್ಲಿ ಇದ್ದಾಗಲೇ ರಾಜೀವ್‌ ಗಾಂಧಿ ಅವರನ್ನು ಖಾಲಿಯಾದ ಇಂದಿರಾ ಗಾಂಧಿ ಅವರ ಪ್ರಧಾನಮಂತ್ರಿ ಸ್ಥಾನ ತುಂಬಲು ಕೇಳಿಕೊಳ್ಳಲಾಗಿತ್ತು. ಈ ಮಾತು ಕೇಳಿ ಕುಸಿದು ಹೋಗಿದ್ದ ಸೋನಿಯಾ ಗಾಂಧಿ “ನನ್ನ ಎದೆಗೆ ಚೂರಿ ಇರಿದಂತಾಗಿತ್ತು” ಎಂದು ಉಲ್ಲೇಖಿಸಿದ್ದಾರೆ. ರಾಜಕೀಯಕ್ಕೆ ಪ್ರವೇಶ ಮಾಡದಂತೆ ಪರಿ ಪರಿಯಾಗಿ ರಾಜೀವ್‌ ಅವರಲ್ಲಿ ಸೋನಿಯಾ ವಿನಂತಿಸಿದ್ದರು. ಆದರೆ, ರಾಜೀವ್‌ ಗಾಂಧಿ ಕೂಡ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿ, ಮನಸ್ಥಿತಿಯಲ್ಲಿ ಇರಲಿಲ್ಲ. ರಾಜಕೀಯ ಕುಟುಂಬದ ಅಥವಾ ತಮ್ಮ ಕುಟುಂಬದ ರಾಜಕೀಯ ಒತ್ತಡಗಳಿಗೆ ಮಣಿದು ಪ್ರಧಾನಿ ಆಗಲು ಒಪ್ಪಿಗೆ ಸೂಚಿಸಿದ್ದರು.

ಆ ಬಳಿಕವೂ ಸೋನಿಯಾ ಗಾಂಧಿ ಮತ್ತು ರಾಜೀವ್‌ ನಡುವೆ ಈ ಬಗ್ಗೆಯೆ ಬಹಳ ಚರ್ಚೆ ಕೂಡ ನಡೆಯುತ್ತದೆ. ಒಂದು ಹಂತದಲ್ಲಿ ತನ್ನೊಳಗಿನ ಆತಂಕವನ್ನು ಸ್ಪೋಟಿಸುವ ಸೋನಿಯಾ, “ಅವರು ನಿಮ್ಮನ್ನೂ ಕೊಲ್ಲುತ್ತಾರೆ. ದಯವಿಟ್ಟು ಪ್ರಧಾನಿ ಪಟ್ಟ ಬೇಡ. ರಾಜಕೀಯ ಪ್ರವೇಶ ಬೇಡ” ಎಂದು ಕಾಲು ಹಿಡಿದು ಗೋಗರೆದಿದ್ದರು. ಆದರೆ ತಮ್ಮ ಅಸಹಾಯಕತೆಯನ್ನು ತಮಗೆ ಸಾಧ್ಯವಿರುವ ಎಲ್ಲಾ ಮಾತುಗಳಿಂದಲೂ ಅರ್ಥೈಸಲು ಯತ್ನಿಸಿ ವಿಫಲವಾಗಿದ್ದ ರಾಜೀವ್‌ ಗಾಂಧಿ ಅವರು ಒಂದು ಹಂತದಲ್ಲಿ, “ನನ್ನನ್ನು ಕೊಲ್ಲಬಹುದು ನಿಜ. ಕೊಲ್ಲುವುದಿದ್ದರೆ ಕೊಲ್ಲಲಿ ಬಿಡು” ಎಂದು ಹೇಳಿ ಬಿಡುತ್ತಾರೆ.

ತಮ್ಮ ಜೀವಕ್ಕೆ ಅಪಾಯವಿದೆ ಎನ್ನುವುದು ಗೊತ್ತಿದ್ದದ್ದು ರಾಜೀವ್‌ ಗಾಂಧಿಗೆ ಮಾತ್ರವಲ್ಲ. ಇಂದಿರಾಗಾಂಧಿ ಅವರಿಗೂ ಗೊತ್ತಿತ್ತು ಎನ್ನುವುದನ್ನು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ. “ಪ್ರತ್ಯೇಕ ಪಂಜಾಬ್‌ ದೇಶಕ್ಕೆ ಬೇಡಿಕೆ ಇಟ್ಟಿದ್ದ ಖಲಿಸ್ತಾನಿ ಚಳವಳಿಗಾರರನ್ನು ಗುರಿಯಾಗಿಸಿ 1984ರ ಜೂನ್‌ ನಲ್ಲಿ ಅಮೃತಸರದ ಸ್ವರ್ಣಮಂದಿರದ ಮೇಲೆ ಸೇನಾ ಕಾರ್ಯಾಚರಣೆ ನಡೆದ ನಂತರ ಇಂದಿರಾಗಾಂಧಿ ಅವರಿಗೆ ಬೆದರಿಕೆಗಳು ಹೆಚ್ಚಾಗಿದ್ದವು. ಭಾರತದ ಐಕ್ಯತೆ ಕಾಪಾಡಲು ನಿಷ್ಠುರವಾಗಿ ತಾನು ತೀರ್ಮಾನ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎನ್ನುವುದನ್ನು ಒತ್ತಿ ಹೇಳಿದ್ದ ಇಂದಿರಾಗಾಂಧಿ ಅವರಿಗೆ ಈ ಸೇನಾ ಕಾರ್ಯಾಚರಣೆ ಬಳಿಕ ತಮ್ಮ ಜೀವಕ್ಕೆ ಅಪಾಯ ಇದೆ ಎನ್ನುವ ಸ್ಪಷ್ಟ ಅರಿವು ಬಂದಾಗಿತ್ತು. “ತಮಗೆ ಏನಾದರೂ ಸಂಭವಿಸಿದರೆ ಕುಟುಂಬದವರು ಏನು ಮಾಡಬೇಕು ಎನ್ನುವುದನ್ನೂ ಇಂದಿರಾಗಾಂಧಿ ಮನೆಯಲ್ಲಿ ತಿಳಿಸಿದ್ದರು. ಮೊಮ್ಮಗ ರಾಹುಲ್‌ ಗಾಂಧಿಗೆ ಧೈರ್ಯವಾಗಿರಬೇಕು, ಅಳಬಾರದು ಎಂದು ಹೇಳಿದ್ದರು. ಆ ಬೇಸಿಗೆಯಲ್ಲಿ ಮೊಮ್ಮಕ್ಕಳನ್ನು ಕರೆದುಕೊಂಡು ಕಾಶ್ಮೀರಕ್ಕೆ ಹೋಗಿದ್ದ ಇಂದಿರಾಗಾಂಧಿ ತಮ್ಮ ಕುಟುಂಬಕ್ಕೆ ವಿದಾಯ ಹೇಳುವ ಪ್ರಯತ್ನವಾಗಿರಬಹುದು ಎಂದು ಸೋನಿಯಾಗಾಂಧಿ ಸ್ಮರಿಸಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಕಾಲ ನಿಜವಾದ ಪ್ರಧಾನಿ ಆಗಿದ್ದ ಜವಾಹರಲಾಲ್‌ ನೆಹರೂ ನಂತರ ಅತಿಹೆಚ್ಚು ಕಾಲ ಪ್ರಧಾನಿಯಾಗಿದ್ದ ಎರಡನೇ ವ್ಯಕ್ತಿ ಇಂದಿರಾ ಗಾಂಧಿ. ಇಂಥಾ ಪ್ರಭಾವಶಾಲಿ ಇಂದಿರಾ ಗಾಂಧಿ ಅವರಿಗೇ ತಮ್ಮ ಹತ್ಯೆ ಬಗ್ಗೆ ಅನುಮಾನಗಳಿದ್ದರೂ ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಸೋನಿಯಾ ಗಾಂಧಿ ಹತ್ತಿರದಿಂದ ಅನುಭವಿಸಿದ್ದರು. ಇನ್ನೂ ಹೊಸದಾಗಿ ರಾಜಕೀಯ ಪ್ರವೇಶ ಮಾಡಿದ ರಾಜೀವ್‌ ಗಾಂಧಿ ಅವರ ಸ್ಥಿತಿಯ ಬಗ್ಗೆ ಅತಿ ಹೆಚ್ಚು ಆತಂಕ ಸಹಜವಾಗಿಯೇ ಸೋನಿಯಾ ಅವರಿಗೆ ಇತ್ತು.

ತಮ್ಮದೇ ಸರ್ಕಾರ ಇದ್ದಾಗ ಷಡ್ಯಂತ್ರಗಳು ಹೇಗೇಗೆ ನಡೆಯುತ್ತವೆ? ನಮ್ಮದೇ ದೇಶದ ಗುಪ್ತಚರ ಸಂಸ್ಥೆಗಳ ಒಳಗೆ ಬೇರೆ ದೇಶಗಳ ಗುಪ್ತಚರ ಏಜೆನ್ಸಿಗಳ ಕೊಂಡಿಗಳಾಗಿ ಕೆಲಸ ಮಾಡುವವರು ಹೇಗೆಲ್ಲಾ ತೂರಿಕೊಳ್ಳುತ್ತಾರೆ ? ಸೂಕ್ತ ಸಂದರ್ಭಗಳಲ್ಲಿ ಭದ್ರತೆಯನ್ನು ಹೇಗೇಗೆ ಕಡಿಮೆಗೊಳಿಸಿ ದೇಶದ ನಾಯಕರ ಹತ್ಯೆಗೆ ವಿದೇಶಿ ಶಕ್ತಿಗಳಿಗೆ ದೇಶದ ಒಳಗಿರುವವರೇ ಹೇಗೇಗೆ ನೆರವಾಗುತ್ತಾರೆ ಎನ್ನುವ ಅರಿವು ಮತ್ತು ಎಚ್ಚರ ಸೋನಿಯಾ ಗಾಂಧಿ ಅವರಿಗೆ ಇದ್ದೇ ಇತ್ತು ಎನ್ನುವುದನ್ನು ಅವರು ತಮ್ಮ ಪುಸ್ತಕದಲ್ಲಿ ನೇರವಾಗಿ ಹೇಳಿದ್ದಕ್ಕಿಂತ ಹೇಳದೇ ಇದನ್ನು ಅರ್ಥ ಮಾಡಿಸಲು ಯತ್ನಿಸಿದ್ದಾರೆ.

ರಾಜೀವ್‌ ಗಾಂಧಿ ಅವರ ಹತ್ಯೆಗೆ ಒಂದು ವರ್ಷಕ್ಕೆ ಮೊದಲು ಒಂದು LTTE ಮುಖ್ಯಸ್ಥರ ಒಂದು ಆಡಿಯೊ ಸಂಭಾಷಣೆ ಭಾರತದ ಗುಪ್ತಚರ ಸಂಸ್ಥೆಯ ಗಮನಕ್ಕೆ ಬಂದಿತ್ತು. LTTE ಬಳಸುತ್ತಿದ್ದ VHF ರೇಡಿಯೊ ಸಂಪರ್ಕ ಸಾಧನದಲ್ಲಿ “Blow Rajiv Gndhis head off. Eliminate him” ಎನ್ನುವ ಸೂಚನೆಯನ್ನು IPKF (ಭಾರತೀಯ ಶಾಂತಿ ಪಾಲನಾ ಪಡೆ)ಯ ಮುಖ್ಯಸ್ಥರು ಕೇಳಿಸಿಕೊಂಡು ಅದನ್ನು ಭಾರತೀಯ ಗುಪ್ತಚರ ಸಂಸ್ಥೆಯ ಗನಮಕ್ಕೆ ತಂದಿದ್ದರು. ಆದರೂ ಈ ಬಗ್ಗೆ ಅಗತ್ಯವಾದಷ್ಟು ಗಮನ ಕೊಡಲಿಲ್ಲ. ಇಂತಹ ಬಹಳಷ್ಟು ಕೋಡಿಂಗ್‌ ಸಂದೇಶಗಳನ್ನು ಡೀಕೋಡ್‌ ಮಾಡಲೇ ಇಲ್ಲ ಎನ್ನುವುದನ್ನು ಸೋನಿಯಾ ಗಾಂಧಿ ಅವರು (ಪುಟ ಸಂಖ್ಯೆ 373) ಸ್ಮರಿಸಿಕೊಂಡಿದ್ದಾರೆ.

ರಾಜೀವ್‌ ಗಾಂಧಿ ಅವರ ಸರ್ಕಾರದ ಅವಧಿ ಮುಗಿದ ಬಳಿಕ ನಿಯಮದ ಪ್ರಕಾರ ಕೊಡಬೇಕಾದ ಭದ್ರತಾ ವ್ಯವಸ್ಥೆ ರಾಜೀವ್‌ ಗಾಂಧಿ ಅವರಿಗೆ ಕೊಟ್ಟಿರಲಿಲ್ಲ. ಇರುವ ಭದ್ರತಾ ವ್ಯವಸ್ಥೆಯನ್ನೂ ಸಡಿಲಿಸಲಾಗಿತ್ತು ಎನ್ನುವುದನ್ನು ನಾನಾ ಮಾಧ್ಯಮಗಳು ವರದಿ ಮಾಡಿವೆ. ರಾಜೀವ್‌ ಗಾಂಧಿ ಅವರ ಅಂತ್ಯಸಂಸ್ಕಾರದ ದಿನದ ಘಟನೆಗಳನ್ನು ವಿವರಿಸುವಾಗ ಸೋನಿಯಾ ಗಾಂಧಿ ಅವರು ಪಾಕಿಸ್ತಾನದ ಬೆನಜಿರ್‌ ಭುಟ್ಟೋ ಅವರ ಭದ್ರತೆ ಮತ್ತು ಹತ್ಯೆಯನ್ನು ಪ್ರಾಸಂಗಿಕವಾಗಿ ನೆನಪಿಸಿಕೊಂಡು ಹೀಗೆ ಹೇಳುತ್ತಾರೆ.

ಆ ದಿನ…MY son, our son, is performing the last rite of the cremation. he holds the pot upside down, emptying it and smashes into the ground. The sound of its crash jolts me and my heart sinks. Rahul lights the pyre. Flames engulf the bier and surge high up towards the sky, giving out unbearable heat and smoke. I can barely stand. I burst into sobs as Rahul walks towards Priyanka and me. The three of us are joined in a tight embrace. We linger for a few moments. The crowd closes in. We are escorted away. “Stricken as we are, hardly able to speak. we are required to meet some sixty heads of state who have come from afar to attend Rajiv’s funeral. Among them is Benazir Bhutto. She too denied adequate security, will be assassinated sixteen years later during her campaign ahead of the national election in Pakistan. (ಪುಟ 369).

(ನನ್ನ ಮಗ, ನಮ್ಮ ಮಗ, ಅಂತ್ಯಸಂಸ್ಕಾರದ ಕೊನೆಯ ವಿಧಿವಿಧಾನವನ್ನು ನೆರವೇರಿಸುತ್ತಿದ್ದಾನೆ. ಕೈಯಲ್ಲಿದ್ದ ಮಡಕೆಯನ್ನು ಅವನು ತಲೆಕೆಳಗಾಗಿ ಹಿಡಿದು, ಅದರಲ್ಲಿದ್ದ ನೀರನ್ನು ಖಾಲಿ ಮಾಡಿ, ಅದನ್ನು ನೆಲಕ್ಕೆ ಅಪ್ಪಳಿಸಿ ಒಡೆಯುತ್ತಾನೆ. ಮಡಕೆ ಒಡೆದು ಚೂರಾಗುವ ಸದ್ದು ನನ್ನನ್ನು ಬೆಚ್ಚಿಬೀಳಿಸುತ್ತದೆ. ಹೃದಯವೇ ಕುಸಿದುಹೋದಂತಾಗುತ್ತದೆ. ರಾಹುಲ್ ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಾನೆ. ಜ್ವಾಲೆಗಳು ಚಿತೆಯನ್ನು ಆವರಿಸಿಕೊಂಡು, ಅಸಹನೀಯವಾದ ಶಾಖ ಮತ್ತು ಹೊಗೆಯನ್ನು ಹೊರಸೂಸುತ್ತಾ ಆಕಾಶದೆತ್ತರಕ್ಕೆ ಚಿಮ್ಮುತ್ತವೆ. ನನಗೆ ನಿಂತುಕೊಳ್ಳುವುದೂ ಕಷ್ಟವಾಗುತ್ತದೆ. ರಾಹುಲ್ ಅಂತ್ಯಕ್ರಿಯೆ ಮುಗಿಸಿ ಪ್ರಿಯಾಂಕಾ ಮತ್ತು ನನ್ನ ಕಡೆಗೆ ನಡೆದುಬರುತ್ತಿದ್ದಂತೆ, ದುಃಖ ತಡೆಯಲಾಗದೆ ನಾನು ಬಿಕ್ಕಿ ಬಿಕ್ಕಿ ಅಳುತ್ತೇನೆ. ನಾವು ಮೂವರೂ ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಿಕೊಂಡು ಕಣ್ಣೀರಾಗುತ್ತೇವೆ. ಕೆಲವು ಕ್ಷಣಗಳ ಕಾಲ ಹಾಗೆಯೇ ಇರುತ್ತೇವೆ. ಅಷ್ಟರಲ್ಲಿ ಜನಸಮೂಹ ನಮ್ಮನ್ನು ಸುತ್ತುವರಿಯುತ್ತಿದ್ದಂತೆ ಅಲ್ಲಿಂದ ಅಂಗರಕ್ಷಕರು ಬಂದು ನಮ್ಮನ್ನು ಬೇರೆಡೆಗೆ ಕರೆದೊಯ್ಯುತ್ತಾರೆ. ನಾವೆಲ್ಲರೂ ದುಃಖದಿಂದ ಜರ್ಜರಿತರಾಗಿದ್ದೆವು. ಮಾತನಾಡುವುದಕ್ಕೂ ಶಕ್ತಿಯಿಲ್ಲದ ಸ್ಥಿತಿಯಲ್ಲಿದ್ದೆವು. ಆದರೂ, ರಾಜೀವ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದೂರದ ದೇಶಗಳಿಂದ ಆಗಮಿಸಿದ್ದ ಸುಮಾರು ಅರವತ್ತು ಮಂದಿ ಬೇರೆ ಬೇರೆ ರಾಷ್ಟ್ರಗಳ ಮುಖ್ಯಸ್ಥರನ್ನು ನಾವು ಭೇಟಿಯಾಗಬೇಕಿತ್ತು. ಅವರಲ್ಲಿ ಬೆನಜೀರ್ ಭುಟ್ಟೋ ಕೂಡ ಒಬ್ಬರು. ಅವರಿಗೂ ಅಗತ್ಯವಾದಷ್ಟು ಭದ್ರತೆಯನ್ನು ಒದಗಿಸಲಾಗಿರಲಿಲ್ಲ. ಹದಿನಾರು ವರ್ಷಗಳ ನಂತರ, ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಗೆ ಮುನ್ನ ಪ್ರಚಾರದಲ್ಲಿ ತೊಡಗಿದ್ದಾಗ ಅವರೂ ಹತ್ಯೆಗೀಡಾಗಲಿದ್ದರು. (ಪುಟ 369)

ಹೀಗೆ ಸೋನಿಯಾ ಗಾಂಧಿ ಅವರು ತಮ್ಮ ಅಂತರಂಗವನ್ನು ತೆರೆದು ಭಾರತೀಯರಿಗೆ ತಮ್ಮ ಅಂತರಂಗಕ್ಕೆ ಪ್ರವೇಶ ಒದಗಿಸಿದ್ದಾರೆ. ತಮ್ಮೊಳಗಿನ ನಿಗೂಢಗಳನ್ನು ಓದಲು, ಅರಿಯಲು ಮತ್ತು ಇದುವರೆಗೂ ಭಾರತೀಯರಿಗೆ ಉಣ ಬಡಿಸಿರುವ ಕಟ್ಟು ಕತೆಗಳ ಹಿಂದಿನ ಷಡ್ಯಂತ್ರ ಮತ್ತು ಪಿತೂರಿಗಳನ್ನು ಅರ್ಥ ಮಾಡಿಕೊಳ್ಳಲು BELONGING ನೆರವಾಗುತ್ತಿದೆ.

ತಮ್ಮ ಬಗ್ಗೆ ಮಾತ್ರವಲ್ಲದೆ ಇಂದಿರಾ ಗಾಂಧಿ ಅವರ ಹತ್ಯೆ ಬಳಿಕವೂ ಅವರನ್ನು ತೇಜೋವಧೆ ಮಾಡುವ ಪ್ರಯತ್ನಗಳು ಹಾಗೂ ನೆಹರೂ ಅವರ ಅಸ್ತಿತ್ವವನ್ನೇ ಅಳಿಸುವ ಹತಾಶ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿರುವದನ್ನು ಅತ್ಯಂತ ತಾಳ್ಮೆಯಿಂದ ಎಲ್ಲವನ್ನೂ ಶೇಖರಿಸಿಕೊಂಡಿರುವ ಸೋನಿಯಾ ಅವರು ಎಲ್ಲಕ್ಕೂ ಬಹಳ ನೈಜವಾಗಿ ಸರಳವಾಗಿ, ಸ್ಪಷ್ಟವಾಗಿ ಇರುವುದನ್ನು ಇರುವ ಹಾಗೆ ಸತ್ಯವನ್ನು ಮಂಡಿಸಲು ಯತ್ನಿಸಿದ್ದಾರೆ. ತಮ್ಮ ಆತ್ಮಚರಿತ್ರೆಯಲ್ಲಿ ಇಂದಿರಾಗಾಂಧಿ ಅವರು ಬರೆದಿದ್ದ ಒಂದು ಪತ್ರ ಉಲ್ಲೇಖ ಹೀಗೆ ಬರುತ್ತದೆ…

In spite of ups and downs of her marriage, my mother-in-law once confided to me, she couldn’t have married anyone but Feroze: he was the only man she ever loved. After her death I found amongst her papers an unfinished note; ‘I am writing to you Sonia because I see some glimpses of myself in you, and many of my husband in my son who is your husband.”

(ನನ್ನ ಅತ್ತೆ ತಮ್ಮ ದಾಂಪತ್ಯ ಜೀವನದಲ್ಲಿ ಏಳುಬೀಳುಗಳನ್ನು ಎದುರಿಸಿದ್ದರೂ, ಒಂದು ಸಂದರ್ಭದಲ್ಲಿ ನನ್ನೊಂದಿಗೆ ಮನದ ಮಾತನ್ನು ಹಂಚಿಕೊಂಡಿದ್ದರು. “ನಾನು ಫಿರೋಜ್ ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಮದುವೆಯಾಗಲು ಸಾಧ್ಯವಿರಲಿಲ್ಲ. ನನ್ನ ಬದುಕಿನಲ್ಲಿ ನಾನು ಪ್ರೀತಿಸಿದ ಏಕೈಕ ಪುರುಷ ಅವರೇ” ಎಂದು ಅವರು ಹೇಳಿದ್ದರು. ಅವರು ನಿಧನರಾದ ನಂತರ, ಅವರ ಕಾಗದ ಪತ್ರಗಳ ನಡುವೆ ಪೂರ್ಣಗೊಳ್ಳದೆ ಉಳಿದಿದ್ದ ಒಂದು ಪತ್ರದ ಕರಡು ನನಗೆ ಸಿಕ್ಕಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು: “ಸೋನಿಯಾ, ನಿನಗೆ ಈ ಪತ್ರ ಬರೆಯುತ್ತಿದ್ದೇನೆ. ಏಕೆಂದರೆ ನಿನ್ನಲ್ಲಿ ನನ್ನ ಬದುಕಿನ ಕೆಲವು ಛಾಯೆಗಳನ್ನು ಕಾಣುತ್ತಿದ್ದೇನೆ. ಹಾಗೆಯೇ, ನಿನ್ನ ಪತಿಯಾಗಿರುವ ನನ್ನ ಮಗನಲ್ಲಿ ನನ್ನ ಪತಿಯ ವ್ಯಕ್ತಿತ್ವದ ಹಲವು ಛಾಯೆಗಳನ್ನು ಕಾಣುತ್ತಿದ್ದೇನೆ.” ಎಂದು ಇಂದಿರಾಗಾಂಧಿ ಬರೆದಿರುವುದನ್ನು ಸೋನಿಯಾಗಾಂಧಿ ಉಲ್ಲೇಖಿಸಿದ್ದಾರೆ.

ತಂದೆಯ ಸಾವು ರಾಜೀವ್‌ ಗಾಂಧಿ ಅವರಿಗೆ ದೊಡ್ಡ ಆಘಾತವಾಗಿತ್ತು. ಇದನ್ನು ರಾಜೀವ್‌ ಬಹಳ ಸಮಯದ ಬಳಿಕ ಸೋನಿಯಾ ಅವರಲ್ಲಿ ಹೇಳಿಕೊಂಡಿದ್ದು ಹೀಗೆ “ನನಗೆ ಅತ್ಯಂತ ಹತ್ತಿರದಲ್ಲಿದ್ದವರ ಮೊದಲ ಸಾವು ಅದಾಗಿತ್ತು. ನಾನು ಆ ಘಟನೆಯಿಂದ ಬಹಳ ನೋವು ತಿಂದೆ. ಸಂಕಷ್ಟ ಅನುಭವಿಸಿದೆ, ಆದರೆ ನಾನು ಬೆಳೆದ ರೀತಿಯಿಂದಾಗಿ ನಾನು ಯಾವುದನ್ನೂ ಹೆಚ್ಚಾಗಿ ವ್ಯಕ್ತಪಡಿಸಲಿಲ್ಲ. ನಾನು ಎಲ್ಲವನ್ನೂ ಒಳಗೇ ಇಟ್ಟುಕೊಂಡೆ; ನನ್ನೊಳಗಿನ ನೋವು ಹೊರಗೆ ಬರದಂತೆ ನೋಡಿಕೊಂಡೆ” ಎಂದು ಹೇಳಿಕೊಂಡಿದ್ದರು. ಆದರೆ, ರಾಜೀವ್‌ಗಾಂಧಿ ಅವರ ಒಳನೋವಿನ ಬಗ್ಗೆ ಸೋನಿಯಾ ಅವರು ಹೇಳುವುದೇ ಬೇರೆ.

ರಾಜೀವ್‌ ಗಾಂಧಿ ಅವರು ಒಳಗೆ ಬಚ್ಚಿಟ್ಟುಕೊಂಡಿದ್ದ ನೋವು ತಾಯಿ ಇಂದಿರಾಗಾಂಧಿ ಅವರ ಗಮನಕ್ಕೆ ಬರದೇ ಇರಲಿಲ್ಲ; ಅವರು ರಾಜೀವ್‌ಗೆ ಬರೆದ ಒಂದು ಪತ್ರದಲ್ಲಿ “ನಿನಗೆ ಒಂದು ವಿಷಯ ಹೇಳಬೇಕಿದೆ. ನೀನು ಮನಸ್ಸು ಬಿಚ್ಚಿ ಮಾತಾಡದಿದ್ದರೆ ನಿನ್ನ ಮನಸ್ಸಿನಲ್ಲಿ ನಿಜವಾಗಿ ಏನಿದೆಯೋ ಅದರ ಬಗ್ಗೆ ನನಗೆ ಗೊತ್ತಾಗುವುದಾದರೂ ಹೇಗೆ? ಇದೇ ಗುಣ ಪಪ್ಪಾನಲ್ಲಿಯೂ ಇತ್ತು; ಅದು ಅವರಿಗೆ ಬಹಳ ಮಾನಸಿಕ ಯಾತನೆ ತಂದಿತ್ತು. ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದು ಗೊತ್ತಾಗದೆ ನಾನು ಅವರಗಿಗೆ ಸರಿಯಾಗಿ ಸಹಾಯ ಮಾಡುವುದಕ್ಕೂ ಆಗದೆ ನನ್ನನ್ನು ತಡೆದಿತ್ತು. ನೀನೂ ಪಪ್ಪನ ಹಾಗೆಯೇ ಮಾತಾಡದಿದ್ದರೆ, ನಾನು ಏನು ಮಾಡಲಿ ಮಗನೇ? ನೀನು ಹೀಗಿದ್ದರೆ ನಿನ್ನನ್ನು ಒಂಟಿತನ ಕಾಡುತ್ತದೆ” ಎಂದು ಇಂದಿರಾ ಗಾಂಧಿ ತಾಯಿಯಾಗಿ ತಮ್ಮ ನೋವು ತೋಡಿಕೊಂಡಿದ್ದನ್ನು ಸೋನಿಯಾಗಾಂಧಿ ದಾಖಲಿಸಿದ್ದಾರೆ.

ಹಾಗೆಯೇ ರಾಜೀವ್‌ ಈ ಬಗ್ಗೆ ತಮ್ಮ ಜೊತೆ ಹೇಳಿಕೊಂಡಿದ್ದನ್ನೂ ದಾಖಲಿಸುತ್ತಾ, “ತಂದೆಯ ಸಾವಿನ ನೋವಿನಿಂದಾಗಿ ರಾಜೀವ್‌ ತಮ್ಮ ಕೋಣೆಯಲ್ಲಿ ಒಂಟಿಯಾಗಿ ಅಳುತ್ತಿದ್ದರು. ಈ ನೋವು ಅವರಿಗೆ ವಾಂತಿ ತರಿಸಿತ್ತು. ಆದರೆ ಬಳಿಕ ರಾಜೀವ್‌ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಕಲಿತರು. ಕೆಲವು ವರ್ಷಗಳ ನಂತರ ನನ್ನ ಬಳಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾ “ನಿನ್ನನ್ನು ಭೇಟಿಯಾಗುವವರೆಗೂ ನಾನು ನನ್ನ ತಾಯಿಯೊಂದಿಗೆ ಮಾತನಾಡಲು ಅಥವಾ ಅವರಿಗೆ ಏನನ್ನೂ ಹೇಳಲು ಸಾಧ್ಯವಾಗುತ್ತಿರಲಿಲ್ಲ. ನೀನು ಸಿಕ್ಕ ಮೇಲೆ ಎಲ್ಲವೂ ಎಷ್ಟೋ ಸುಲಭವಾಯಿತು. ಇದು ಹೇಗೆ ಅಥವಾ ಏಕೆ ಆಯಿತು ಎನ್ನೋದು ನನಗೆ ಗೊತ್ತಿಲ್ಲ, ಆದರೆ ಆಯಿತು.” ಎನ್ನುವ ರಾಜೀವ್‌ ಮಾತಿಗೆ ಸೋನಿಯಾ “ಬಹುಶಃ ನಾವಿಬ್ಬರು ಪ್ರೀತಿಯನ್ನು ಕಂಡುಕೊಂಡದ್ದೇ ರಾಜೀವ್‌ ತಮ್ಮ ಒಳಗಿನ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡಿತು” ಎನ್ನುತ್ತಾರೆ.

ಹೀಗೆ ಸೋನಿಯಾ ಅವರು ತಮ್ಮ ಖಾಸಗಿ ಬದುಕಿನ ನಿಗೂಢವನ್ನು ತೆರೆದಿಟ್ಟು ಒಂದೊಂದೇ ಘಟನೆಗಳನ್ನು ಸ್ಮರಿಸುತ್ತಲೇ ತಮ್ಮ ಕಾಲದ ರಾಜಕೀಯ ಘಟನೆಗಳು ಮತ್ತು ದುರಂತಗಳ ಜೊತೆಗೆ ಅದರ ಹಿಂದಿನ ಷಡ್ಯಂತ್ರಗಳನ್ನು ಅರ್ಥ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಓದುಗರಿಗೇ ಬಿಟ್ಟು ಬಿಡುತ್ತಾರೆ. ಇದರ ಜೊತೆಗೆ ಹಿಂದಿನ ಘಟನಾವಳಿಗಳ ಮೂಲಕ ಇವತ್ತು ನಡೆಯುತ್ತಿರುವ ಆಟಗಳನ್ನು ಮತ್ತು ಇವತ್ತು ಚಾಲ್ತಿಯಲ್ಲಿರುವ ಕಥೆಗಳ ನೈಜತೆಯನ್ನು ಹಿಂದೆ ನಡೆದಿರುವ ಘಟನಾವಳಿಗಳ ಮೂಲಕ ಅರ್ಥ ಮಾಡಿಕೊಳ್ಳಲು ಸತ್ಯವನ್ನು ಕಂಡುಕೊಳ್ಳುವ ಮಾರ್ಗಗಳನ್ನು ತೆರೆದಿಟ್ಟಿದ್ದಾರೆ.

  • ಗಿರೀಶ್ ಕೋಟೆ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments