Homeಕರ್ನಾಟಕಜೈವಿಕ ತಂತ್ರಜ್ಞಾನ, ಸುಸ್ಥಿರ ಕೃಷಿ ಮತ್ತು ಗ್ರಾಮೀಣ ಉದ್ಯಮಶೀಲತೆಗೆ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ

ಜೈವಿಕ ತಂತ್ರಜ್ಞಾನ, ಸುಸ್ಥಿರ ಕೃಷಿ ಮತ್ತು ಗ್ರಾಮೀಣ ಉದ್ಯಮಶೀಲತೆಗೆ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿರುವ ಸ್ಥಳೀಯ ಜೈವಿಕ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಕೃಷಿ ಉತ್ಪಾದಕತೆ ಹೆಚ್ಚಿಸುವುದು, ರೈತರ ಆದಾಯ ವೃದ್ಧಿಸುವುದು, ಸ್ಥಳೀಯ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಉದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ‘ಕಲಬುರಗಿ ಬಯೋ-ಇಕಾನಮಿ ಮಿಷನ್ 2026’ ರೂಪಿಸಲು ಉದ್ದೇಶಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು ಬಯೋಇನ್ನೋವೇಷನ್ ಸೆಂಟರ್ (BBC) ವತಿಯಿಂದ ಪ್ರಸ್ತಾಪಿಸಲಾಗಿರುವ ಈ ಮೂರು ವರ್ಷಗಳ ಕಾರ್ಯಕ್ರಮಕ್ಕೆ ಅಂದಾಜು ₹50 ಕೋಟಿ ಹೂಡಿಕೆಯ ಅಗತ್ಯವಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಂತೆ ಈ ಮಿಷನ್ ಅನುಷ್ಠಾನಗೊಳಿಸುವ ಪರಿಕಲ್ಪನೆ ರೂಪಿಸಲಾಗಿದೆ. ಕಲಬುರಗಿಯನ್ನು ಈ ಯೋಜನೆಯ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ಸಚಿವರು ಹೇಳಿದ್ದಾರೆ.

ಸ್ಥಳೀಯ ಜೈವಿಕ ಸಂಪನ್ಮೂಲಗಳಿಗೆ ಜಾಗತಿಕ ಮಾರುಕಟ್ಟೆ ಮೌಲ್ಯ
ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ಲಭ್ಯವಿರುವ ವೈವಿಧ್ಯಮಯ ಸಸ್ಯಸಂಪತ್ತು, ಸ್ಥಳೀಯ ಬೆಳೆಗಳು, ಸೂಕ್ಷ್ಮಜೀವಿಗಳು ಹಾಗೂ ಕೃಷಿ ಸಂಬಂಧಿತ ಜೈವಿಕ ಸಂಪನ್ಮೂಲಗಳನ್ನು ಗುರುತಿಸಿ, ಅವುಗಳನ್ನು ಆಧುನಿಕ ಜೈವಿಕ ತಂತ್ರಜ್ಞಾನದ ನೆರವಿನಿಂದ ಕೃಷಿ ತಂತ್ರಜ್ಞಾನಗಳು, ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಸ್ಥಳೀಯ ಉತ್ಪಾದನಾ ಉದ್ಯಮಗಳಾಗಿ ಪರಿವರ್ತಿಸುವುದು ಈ ಮಿಷನ್‌ನ ಪ್ರಮುಖ ಆಶಯವಾಗಿದೆ.

ಸ್ಥಳೀಯ ಸಂಪನ್ಮೂಲಗಳಿಗೆ ವೈಜ್ಞಾನಿಕ ಸಂಶೋಧನೆ ಹಾಗೂ ತಂತ್ರಜ್ಞಾನದ ಬೆಂಬಲ ದೊರೆತರೆ ರೈತರಿಗೆ ಹೆಚ್ಚುವರಿ ಆದಾಯ, ಗ್ರಾಮೀಣ ಯುವಜನರಿಗೆ ಉದ್ಯೋಗ ಮತ್ತು ಮಹಿಳೆಯರಿಗೆ ಉದ್ಯಮಶೀಲತೆಯ ಅವಕಾಶಗಳನ್ನು ಕಲ್ಪಿಸಬಹುದು. ಈ ಮೂಲಕ ಕಲ್ಯಾಣ ಕರ್ನಾಟಕವನ್ನು ಜೈವಿಕ ಆರ್ಥಿಕತೆಯ ಪ್ರಮುಖ ಕೇಂದ್ರವನ್ನಾಗಿ ಬೆಳೆಸುವ ದೂರದೃಷ್ಟಿಯನ್ನು ಹೊಂದಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.

ಮಿಷನ್‌ನ ಪ್ರಮುಖ ಆರು ಕಾರ್ಯಕ್ಷೇತ್ರಗಳು
ಪ್ರಮುಖ ಆರು ಕಾರ್ಯಕ್ಷೇತ್ರಗಳನ್ನು ಮಿಷನ್‌ ಹೊಂದಿದ್ದು, ಜೈವಿಕ ಬೆಳೆ ಸಂರಕ್ಷಣೆ, ತೊಗರಿ ಬೇಳೆಗೆ ಮೌಲ್ಯವರ್ಧನೆ, ಕಮಲಾಪುರ ಕೆಂಪು ಬಾಳೆ ಸಂರಕ್ಷಣೆ, ಸ್ಥಳೀಯ ಸೂಕ್ಷ್ಮಜೀವಿಗಳ ಸಂಶೋಧನೆ, ಸಮಗ್ರ ಬಯೋ-ಇಕಾನಮಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಹಾಗೂ ಗ್ರಾಮೀಣ ಉದ್ಯಮಶೀಲತೆಗೆ ಉತ್ತೇಜನದ ಗುರಿಯನ್ನು ಹೊಂದಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನಿಡಿದ್ದಾರೆ.

1. ಜೈವಿಕ ಬೆಳೆ ಸಂರಕ್ಷಣೆ: ತೊಗರಿ ಬೆಳೆಯಲ್ಲಿ ಕಂಡುಬರುವ wilt (ಬಾಡುವಿಕೆ) ರೋಗ, ಮೆಣಸಿನಕಾಯಿ ಬೆಳೆಯ ಆಂಥ್ರಾಕ್ನೋಸ್ ರೋಗ ಹಾಗೂ ಥ್ರಿಪ್ಸ್ ಕೀಟಗಳ ನಿಯಂತ್ರಣಕ್ಕೆ ಜೈವಿಕ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು. ಇದರಿಂದ ರಾಸಾಯನಿಕಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಬೆಳೆಗಳ ಆರೋಗ್ಯ ಮತ್ತು ಇಳುವರಿ ಹೆಚ್ಚಿಸುವ ಗುರಿ ಹೊಂದಲಾಗಿದೆ.

2. ತೊಗರಿ ಬೇಳೆಗೆ ಮೌಲ್ಯವರ್ಧನೆ:ಕಲ್ಯಾಣ ಕರ್ನಾಟಕದ ಪ್ರಮುಖ ಕೃಷಿ ಉತ್ಪನ್ನವಾದ ತೊಗರಿಯನ್ನು ಕೇವಲ ಕಚ್ಚಾ ಕೃಷಿ ಉತ್ಪನ್ನವಾಗಿ ಮಾರಾಟ ಮಾಡುವ ಬದಲು, ಪ್ರೋಟೀನ್ ಬಾರ್‌ಗಳು, ಪ್ರೋಟೀನ್ ಸಾಂದ್ರಿತ ಉತ್ಪನ್ನಗಳು, ಅಧಿಕ ಪ್ರೋಟೀನ್ ಹೊಂದಿರುವ ಹಿಟ್ಟು, ಪೌಷ್ಟಿಕ ಪಾನೀಯಗಳು ಹಾಗೂ ಸಿದ್ಧ ಆಹಾರ ಉತ್ಪನ್ನಗಳಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಇದರಿಂದ ಸ್ಥಳೀಯ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಉತ್ತೇಜನ ದೊರೆಯಲಿದೆ.

3. ಕಮಲಾಪುರ ಕೆಂಪು ಬಾಳೆ ಸಂರಕ್ಷಣೆ:ಕಲಬುರಗಿ ಜಿಲ್ಲೆಯ ವಿಶಿಷ್ಟ ಕೃಷಿ ಪರಂಪರೆಯಾದ ಕಮಲಾಪುರ ಕೆಂಪು ಬಾಳೆ ತಳಿಯನ್ನು ಸಂರಕ್ಷಿಸಿ, ಅಂಗಾಂಶ ಕೃಷಿ (Tissue Culture) ತಂತ್ರಜ್ಞಾನದ ಮೂಲಕ ಗುಣಮಟ್ಟದ ಸಸಿಗಳನ್ನು ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ. ಪ್ರಸ್ತಾವಿತ ಗುರಿಯಂತೆ ತಿಂಗಳಿಗೆ 2ರಿಂದ 3 ಲಕ್ಷ ಸಸಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಬೆಳೆಸುವ ಉದ್ದೇಶವಿದೆ. ಇದರಿಂದ ಈ ವಿಶಿಷ್ಟ ತಳಿಯ ವ್ಯಾಪಕ ಕೃಷಿಗೆ ಉತ್ತೇಜನ ದೊರೆಯಲಿದೆ.

4. ಸ್ಥಳೀಯ ಸೂಕ್ಷ್ಮಜೀವಿಗಳ ಸಂಶೋಧನೆ: ಈ ಪ್ರದೇಶದ ಸ್ಥಳೀಯ ಸೂಕ್ಷ್ಮಜೀವಿಗಳನ್ನು ಗುರುತಿಸಿ, ಅವುಗಳ ಸಂರಕ್ಷಣೆಗಾಗಿ ಪ್ರಾದೇಶಿಕ ಮೈಕ್ರೋಬಿಯಲ್ ಬಯೋಬ್ಯಾಂಕ್ ಸ್ಥಾಪಿಸುವ ಪರಿಕಲ್ಪನೆಯಿದೆ. ಜೈವಿಕ ಗೊಬ್ಬರಗಳು, ಜೈವಿಕ ಕೀಟ ನಿಯಂತ್ರಣ ಹಾಗೂ ಮಣ್ಣಿನ ಆರೋಗ್ಯ ಸುಧಾರಣೆಗೆ ಉಪಯುಕ್ತವಾದ ಸೂಕ್ಷ್ಮಜೀವಿಗಳ ಕುರಿತು ಸಂಶೋಧನೆ ನಡೆಸಲಾಗುವುದು.

5. ಸಮಗ್ರ ಬಯೋ-ಇಕಾನಮಿ ಕೈಗಾರಿಕಾ ಪಾರ್ಕ್: ಕಲಬುರಗಿಯಲ್ಲಿ ಸಮಗ್ರ ಜೈವಿಕ ಆರ್ಥಿಕ ಕೈಗಾರಿಕಾ ಪಾರ್ಕ್ ಸ್ಥಾಪಿಸುವ ಪ್ರಸ್ತಾವನೆಯಿದೆ. ಇಲ್ಲಿ ಸಂಶೋಧನೆ, ಜೈವಿಕ ಉತ್ಪಾದನೆ (Biomanufacturing), ಅಂಗಾಂಶ ಕೃಷಿ, ಆಹಾರ ಸಂಸ್ಕರಣೆ, ಗುಣಮಟ್ಟ ಪರೀಕ್ಷೆ ಹಾಗೂ ನವೋದ್ಯಮಗಳ ಅಭಿವೃದ್ಧಿಗೆ ಅಗತ್ಯವಾದ ಇನ್‌ಕ್ಯುಬೇಷನ್ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ.

6. ಗ್ರಾಮೀಣ ಉದ್ಯಮಶೀಲತೆಗೆ ಉತ್ತೇಜನ: ರೈತ ಉತ್ಪಾದಕ ಸಂಸ್ಥೆಗಳು (FPOs), ನವೋದ್ಯಮಗಳು ಹಾಗೂ ಗ್ರಾಮೀಣ ಉದ್ಯಮಿಗಳಿಗೆ ತರಬೇತಿ, ಉದ್ಯಮ ಆರಂಭಕ್ಕೆ ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ, ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ರಫ್ತು ಸಿದ್ಧತೆ ಕುರಿತ ನೆರವು ನೀಡುವ ಮೂಲಕ ಹೊಸ ಉದ್ಯಮಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ.

ಮಿಷನ್‌ನ ಪ್ರಮುಖ ಗುರಿಗಳು
ಮೂರು ವರ್ಷಗಳ ಅವಧಿಯಲ್ಲಿ ಈ ಕೆಳಗಿನ ಗುರಿಗಳನ್ನು ಸಾಧಿಸುವ ಉದ್ದೇಶ ಹೊಂದಲಾಗಿದೆ ಎಂದೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

• ಅಂದಾಜು ₹50 ಕೋಟಿ ಹೂಡಿಕೆಯೊಂದಿಗೆ ಕಾರ್ಯಕ್ರಮ ಅನುಷ್ಠಾನ.
• ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಳ್ಳುವುದು.
• 40ಕ್ಕೂ ಹೆಚ್ಚು ಸ್ಥಳೀಯ ಜೈವಿಕ ಉತ್ಪನ್ನಗಳ ಸಂಭಾವ್ಯತೆಯನ್ನು ಗುರುತಿಸುವುದು.
• 7,000ರಿಂದ 10,000 ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವುದು.
• ಸ್ಥಳೀಯ ಬೆಳೆಗಳ ಸಂರಕ್ಷಣೆ ಮತ್ತು ಉತ್ಪಾದಕತೆ ಹೆಚ್ಚಿಸುವುದು.
• ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಹಾಗೂ ಸ್ಥಳೀಯ ಉತ್ಪಾದನಾ ಘಟಕಗಳ ಸ್ಥಾಪನೆಗೆ ಉತ್ತೇಜನ.
• ರೈತರು, ಮಹಿಳೆಯರು ಮತ್ತು ಯುವಜನರಿಗೆ ಹೊಸ ಉದ್ಯಮಶೀಲತೆಯ ಅವಕಾಶಗಳನ್ನು ಕಲ್ಪಿಸುವುದು.

ಕಲ್ಯಾಣ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಹೊಸ ಆಯಾಮ
ಈ ಮಿಷನ್ ಅನುಷ್ಠಾನಗೊಂಡಲ್ಲಿ ಕೃಷಿ ಉತ್ಪಾದಕತೆ ಮತ್ತು ಬೆಳೆ ಸಂರಕ್ಷಣೆ ಸುಧಾರಿಸುವುದರ ಜೊತೆಗೆ, ಮಣ್ಣಿನ ಆರೋಗ್ಯ ವೃದ್ಧಿ, ತೊಗರಿ ಸೇರಿದಂತೆ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಮೌಲ್ಯ, ಕಮಲಾಪುರ ಕೆಂಪು ಬಾಳೆ ತಳಿಯ ಸಂರಕ್ಷಣೆ ಹಾಗೂ ವ್ಯಾಪಕ ಕೃಷಿಗೆ ಅವಕಾಶ ದೊರೆಯಲಿದೆ; ಅಲ್ಲದೆ, ರೈತರು, ಮಹಿಳೆಯರು ಮತ್ತು ಯುವಜನರಿಗೆ ಹೊಸ ಉದ್ಯಮಗಳನ್ನು ಆರಂಭಿಸಲು ನೆರವಾಗುವುದರೊಂದಿಗೆ ಸ್ಥಳೀಯ ಉತ್ಪಾದನೆ ಮತ್ತು ಗ್ರಾಮೀಣ ಉದ್ಯೋಗಾವಕಾಶಗಳು ಹೆಚ್ಚಲಿವೆ.

ಜೈವಿಕ ತಂತ್ರಜ್ಞಾನ ಆಧಾರಿತ ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲು ಸಾಧ್ಯವಾಗಲಿದೆ ಎಂಬ ಆಶಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಹೊಂದಿದ್ದಾರೆ.

ಸ್ಥಳೀಯ ಜೈವಿಕ ವೈವಿಧ್ಯದಿಂದ ರೈತರ ಸಮೃದ್ಧಿಯವರೆಗೆ (From Native Biodiversity to Farmer Prosperity) ಎಂಬ ಆಶಯದೊಂದಿಗೆ ರೂಪಿಸಲಾಗಿರುವ ಈ ಮಿಷನ್, ಕಲ್ಯಾಣ ಕರ್ನಾಟಕದ ಕೃಷಿ, ಕೈಗಾರಿಕೆ ಮತ್ತು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಸಾಮರ್ಥ್ಯ ಹೊಂದಿದೆ. ಈ ಯೋಜನೆಯು ಸದ್ಯ ಪ್ರಸ್ತಾವನೆಯ ಹಂತದಲ್ಲಿದ್ದು, ವಿವರವಾದ ಯೋಜನಾ ವರದಿ (DPR), ಕಾರ್ಯಸಾಧ್ಯತಾ ಅಧ್ಯಯನ ಹಾಗೂ ರಾಜ್ಯ ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments