Homeದೇಶವಾಜಪೇಯಿ ಜೊತೆಗಿನ ಆತ್ಮೀಯ ಕ್ಷಣ, ರಾಜಕೀಯ ಸಂಘರ್ಷದ ನೆನಪು ಬಿಚ್ಚಿಟ್ಟ ಸೋನಿಯಾ ಗಾಂಧಿ

ವಾಜಪೇಯಿ ಜೊತೆಗಿನ ಆತ್ಮೀಯ ಕ್ಷಣ, ರಾಜಕೀಯ ಸಂಘರ್ಷದ ನೆನಪು ಬಿಚ್ಚಿಟ್ಟ ಸೋನಿಯಾ ಗಾಂಧಿ

ಸಂಸತ್ ಮೇಲಿನ ದಾಳಿಯ ಬಳಿಕ ವಾಜಪೇಯಿ ಸುರಕ್ಷತೆ ವಿಚಾರಿಸಿದ್ದೆ; ಬಳಿಕ ಪೋಟೊ ಕಾಯ್ದೆ ವಿಚಾರದಲ್ಲಿ ಮುಖಾಮುಖಿಯಾಗಿದ್ದೆವು ಎಂದು ಸೋನಿಯಾಗಾಂಧಿ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ.

ರಾಜಕೀಯವಾಗಿ ಎದುರಾಳಿಗಳಾಗಿದ್ದರೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಹೊಂದಿದ್ದ ಆತ್ಮೀಯ ಕ್ಷಣಗಳು ಹಾಗೂ ಸಂಸತ್ತಿನಲ್ಲಿ ನಡೆದ ರಾಜಕೀಯ ಸಂಘರ್ಷದ ಘಟನೆಗಳನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಮೆಲುಕು ಹಾಕಿದ್ದಾರೆ.

2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೂರವಾಣಿ ಕರೆ ಮಾಡಿ ಅವರ ಸುರಕ್ಷತೆಯ ಬಗ್ಗೆ ವಿಚಾರಿಸಿದ್ದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ತಮ್ಮ ಆತ್ಮಕಥನ ‘Belonging: A Journey of Love’ನಲ್ಲಿ ಈ ಘಟನೆಯನ್ನು ಸ್ಮರಿಸಿರುವ ಅವರು, ಸಂಸತ್ ಭವನದಲ್ಲಿ ಗುಂಡಿನ ಚಕಮಕಿ ಮತ್ತು ಸ್ಫೋಟಗಳ ಸದ್ದು ಕೇಳಿಬಂದಿದ್ದರಿಂದ ಆತಂಕಗೊಂಡು ವಾಜಪೇಯಿ ಅವರಿಗೆ ಕರೆ ಮಾಡಿದ್ದಾಗಿ ತಿಳಿಸಿದ್ದಾರೆ. ತಾವು ಮನೆಯಲ್ಲಿ ಸುರಕ್ಷಿತವಾಗಿರುವುದಾಗಿ ವಾಜಪೇಯಿ ತಿಳಿಸಿದ್ದರು. ಬಳಿಕ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಸೋನಿಯಾ ಅವರೇ ಮೊದಲು ಕರೆ ಮಾಡಿ ತಮ್ಮ ಸುರಕ್ಷತೆಯ ಬಗ್ಗೆ ವಿಚಾರಿಸಿದ್ದನ್ನು ವಾಜಪೇಯಿ ಮೆಚ್ಚುಗೆಯಿಂದ ಸ್ಮರಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.

1999ರಲ್ಲಿ ಸಕ್ರಿಯ ರಾಜಕೀಯ ಪ್ರವೇಶಿಸಿದ್ದ ಸೋನಿಯಾ ಗಾಂಧಿ, ಆರಂಭದ ದಿನಗಳಲ್ಲಿ ಬಿಜೆಪಿ ನಾಯಕರನ್ನು ಎದುರಿಸಿ ಮಾತನಾಡಲು ಆತಂಕಪಡುತ್ತಿದ್ದುದನ್ನೂ ನೆನಪಿಸಿಕೊಂಡಿದ್ದಾರೆ. ನೆಹರೂ-ಗಾಂಧಿ ಕುಟುಂಬದ ವಿದೇಶಿ ಮೂಲದ ಸೊಸೆ ಎಂಬ ನೆಲೆಯಲ್ಲಿ ತಮ್ಮನ್ನು ನೋಡುತ್ತಿದ್ದ ಆಡಳಿತಾರೂಢ ಮೈತ್ರಿಕೂಟದ ನಾಯಕರ ಟೀಕೆಗಳನ್ನು ಎದುರಿಸುವುದು ಸವಾಲಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಪೋಟೊ ಕಾಯ್ದೆ ವಿಚಾರದಲ್ಲಿ ರಾಜಕೀಯ ಸಂಘರ್ಷ

ವಾಜಪೇಯಿ ಅವರೊಂದಿಗಿನ ಆತ್ಮೀಯ ದೂರವಾಣಿ ಸಂಭಾಷಣೆಯ ಸುಮಾರು ನಾಲ್ಕು ತಿಂಗಳ ಬಳಿಕ ಸಂಸತ್ತಿನಲ್ಲಿ ಇಬ್ಬರ ನಡುವೆ ರಾಜಕೀಯ ಸಂಘರ್ಷ ಏರ್ಪಟ್ಟಿತ್ತು. 2002ರ ಮಾರ್ಚ್‌ನಲ್ಲಿ ಭಯೋತ್ಪಾದನೆ ತಡೆ ಸುಗ್ರೀವಾಜ್ಞೆ (ಪೋಟೊ)ಗೆ ಕಾನೂನಿನ ರೂಪ ನೀಡಲು ವಾಜಪೇಯಿ ಸರ್ಕಾರ ಸಂಸತ್ತಿನ ವಿಶೇಷ ಜಂಟಿ ಅಧಿವೇಶನ ಕರೆದಿತ್ತು.

ಈ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಭಯೋತ್ಪಾದನೆ ನಿಯಂತ್ರಣದ ಹೆಸರಿನಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವುದರಿಂದ ಅವುಗಳ ದುರುಪಯೋಗಕ್ಕೆ ಅವಕಾಶವಾಗಬಹುದು ಎಂಬ ಆತಂಕವನ್ನು ಸೋನಿಯಾ ವ್ಯಕ್ತಪಡಿಸಿದ್ದರು.

ಜಂಟಿ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಭಾಷಣ ಮುಗಿಸಿದ ಬಳಿಕ ಮಾತನಾಡಿದ ವಾಜಪೇಯಿ, ಮಸೂದೆಯ ವಿಚಾರಕ್ಕಿಂತ ಹೆಚ್ಚಾಗಿ ಸೋನಿಯಾ ಅವರ ರಾಜಕೀಯ ಅನುಭವ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು ಎಂದು ಆತ್ಮಕಥನದಲ್ಲಿ ವಿವರಿಸಲಾಗಿದೆ.

ವಾಜಪೇಯಿ ಅವರ ಟೀಕೆಯಿಂದ ಕಾಂಗ್ರೆಸ್ ಸಂಸದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಭಾರಿ ಗದ್ದಲ ಉಂಟಾಗಿ, ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಈ ಬೆಳವಣಿಗೆ ತಮಗೆ ತೀವ್ರ ನೋವುಂಟು ಮಾಡಿತ್ತು ಎಂದು ಸೋನಿಯಾ ಸ್ಮರಿಸಿಕೊಂಡಿದ್ದಾರೆ.

ಕೊನೆಗೆ ಜಂಟಿ ಅಧಿವೇಶನದಲ್ಲಿ ಮಸೂದೆ ಅಂಗೀಕಾರಗೊಂಡಿತ್ತು. 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಪೋಟೊ ಕಾಯ್ದೆಯನ್ನು ರದ್ದುಗೊಳಿಸಿತು ಎಂದು ಬರೆದುಕೊಂಡಿದ್ದಾರೆ.

ವಾಜಪೇಯಿ ಬಗ್ಗೆ ಆತ್ಮಾವಲೋಕನ

ಸಂಸತ್ತಿನಲ್ಲಿನ ಸಂಘರ್ಷದ ಕೆಲವು ತಿಂಗಳ ಬಳಿಕ ವಾಜಪೇಯಿ ಅವರನ್ನು ಮತ್ತೆ ಭೇಟಿಯಾದಾಗ ಅವರ ವಯಸ್ಸು ಮತ್ತು ಆರೋಗ್ಯದ ಪ್ರಭಾವ ಕಂಡುಬಂದಿತ್ತು. ಆಗ ಅವರ ಬಗ್ಗೆ ತಾವು ಸ್ವಲ್ಪ ಹೆಚ್ಚು ಕಠಿಣವಾಗಿ ಟೀಕಿಸಿದ್ದೇನೆಯೇ ಎಂಬ ಆತ್ಮಾವಲೋಕನ ಮೂಡಿತ್ತು ಎಂದು ಸೋನಿಯಾ ಬರೆದಿದ್ದಾರೆ.

‘ಅವರು ಅನುಭವಿ ಹಿರಿಯ ನಾಯಕರು. ನಮ್ಮ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿದ್ದರೂ ಅವರು ದೇಶದ ಪ್ರಧಾನಿಯಾಗಿದ್ದರು. ಅವರ ನಾಯಕತ್ವವನ್ನು ಟೀಕಿಸುವಾಗ ನಾನು ಹೆಚ್ಚು ಸಂಯಮ ವಹಿಸಬೇಕಿತ್ತು’ ಎಂಬ ಭಾವನೆಯನ್ನು ಆತ್ಮಕಥನದಲ್ಲಿ ವ್ಯಕ್ತಪಡಿಸಿದ್ದಾರೆ.

ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ 526 ಪುಟಗಳ ಈ ಆತ್ಮಕಥನದಲ್ಲಿ ಸೋನಿಯಾ ಗಾಂಧಿ ತಮ್ಮ ಬಾಲ್ಯ, ಇಟಲಿಯಲ್ಲಿನ ಜೀವನ, ನೆಹರೂ-ಗಾಂಧಿ ಕುಟುಂಬದ ಸೊಸೆಯಾಗಿ ಭಾರತಕ್ಕೆ ಬಂದದ್ದು, ಪತಿ ರಾಜೀವ್ ಗಾಂಧಿ ಅವರ ಹತ್ಯೆ ಹಾಗೂ ರಾಜಕೀಯ ಪ್ರವೇಶ ಸೇರಿದಂತೆ ಜೀವನದ ಹಲವು ಪ್ರಮುಖ ಘಟನೆಗಳನ್ನು ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments