“ಕರ್ನಾಟಕದ ಸಣ್ಣ ಉದ್ಯಮಗಳು ಗುಣಮಟ್ಟದ ಪೀಠೋಪಕರಣ ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಅವುಗಳನ್ನು ಬಳಸಿಕೊಂಡು ಪ್ರೋತ್ಸಾಹಿಸಿ. ಆ ಮೂಲಕ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿ. ಐಕಿಯಾ ಸಂಸ್ಥೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಸಲಹೆ ನೀಡಿದರು.
ಕನಕಪುರ ರಸ್ತೆಯ ಐಕಿಯ ಮಳಿಗೆಯನ್ನು ಸಿಎಂ ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು.
“ನಾನು ಇದುವರೆಗೂ ಯಾವುದೇ ಮಳಿಗೆಗಳ ಉದ್ಘಾಟನೆಗೆ ಹೋಗಿಲ್ಲ. ನನ್ನ ಮಕ್ಕಳು ಆರಂಭಿಸುವ ಕಟ್ಟಡಗಳ ಉದ್ಘಾಟನೆಗೆ ನಾನು ಹೆಚ್ಚಾಗಿ ಹೋಗುವುದಿಲ್ಲ. ಇದೇ ಮೊದಲ ಬಾರಿಗೆ ಮಳಿಗೆ ಉದ್ಘಾಟನೆಗೆ ಬಂದಿರುವೆ” ಎಂದರು.
ನಮ್ಮ ಯುವಕರು, ಪ್ರತಿಭಾವಂತರು, ಸುಸಂಸ್ಕೃತರು
“ನಾವು ಜಾಗತಿಕ ಬಂಡವಾಳ ಹೂಡಿಕೆದಾರರನ್ನು ಕರ್ನಾಟಕಕ್ಕೆ ಆಹ್ವಾನಿಸುತ್ತಿದ್ದು, ಇಲ್ಲಿ ಅನೇಕ ಅವಕಾಶಗಳನ್ನು ಕಲ್ಪಿಸಿದ್ದೇವೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿದ್ದೇವೆ. ಐಕಿಯಾ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು, ಐಕಿಯಾ ಸಂಸ್ಥೆ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವೀಡನ್, ಭಾರತ ಹಾಗೂ ಕರ್ನಾಟಕದೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು, ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಿ. ನಮ್ಮ ಯುವಕರು, ಪ್ರತಿಭಾವಂತರು, ಸುಸಂಸ್ಕೃತರು. ಅವರಿಗೆ ಗ್ರಾಹಕರನ್ನು ಸೆಳೆಯುವ ಮಾರುಕಟ್ಟೆ ಕೌಶಲ್ಯವಿದೆ” ಎಂದು ಭರವಸೆ ನೀಡಿದರು.
“ಐಕಿಯಾ ಎಲ್ಲ ವರ್ಗದವರಿಗೂ ಕೈಗೆಟಲಿದ್ದು, ಗುಣಮಟ್ಟ ಕಾಯ್ದುಕೊಂಡಿದೆ. ನಿಮಗೆ ಉತ್ತೇಜನ ನೀಡಬೇಕು, ನಿಮ್ಮೊಂದಿಗೆ ಕರ್ನಾಟಕ ಸರ್ಕಾರ ಇದೆ ಎಂದು ಭರವಸೆ ನೀಡಲು ಈ ಕಾರ್ಯಕ್ರಮಕ್ಕೆ ನಾನು ಹಾಗೂ ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಆಗಮಿಸಿದ್ದೇವೆ. ನಿಮಗೆ ಭವಿಷ್ಯದಲ್ಲಿ ಮತ್ತಷ್ಟು ಒಳ್ಳೆಯದಾಗಲಿ ಎಂದು ಶುಭಕೋರುವೆ” ಎಂದು ತಿಳಿಸಿದರು.


