ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಜೆ.ಪಿ. ನಗರ 4ನೇ ಹಂತದ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳು, ಪಾದಚಾರಿ ಮಾರ್ಗ ಹಾಗೂ ವೈಷ್ಣವಿ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಹಾದುಹೋಗುವ ಮಳೆನೀರು ಕಾಲುವೆ (SWD) ಪ್ರದೇಶಗಳಿಗೆ ಪಾಲಿಕೆ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರು ಇಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮೆಟ್ರೋ ನಿಲ್ದಾಣದ ಬಳಿ ಸುಗಮ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ನಿರ್ದೇಶನ
ಗ್ರೇಟರ್ ಬೆಂಗಳೂರು ಸಚಿವರಾದ ಶ್ರೀ ಕೃಷ್ಣ ಬೈರೇಗೌಡರವರು ಈ ಹಿಂದೆ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ನೀಡಿದ್ದ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವ ಸಂಬಂಧ, ಜೆ ಪಿ ನಗರದ 4ನೇ ಹಂತದ ಮೆಟ್ರೋ ನಿಲ್ದಾಣದಿಂದ ಹೊರಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಪಾದಚಾರಿ ಮಾರ್ಗವನ್ನು ಮತ್ತಷ್ಟು ವಿಸ್ತರಿಸಿ ಸುಸ್ಥಿತಿಯಲ್ಲಿಡಲು ಸೂಚಿಸಿದರು. ಮುಖ್ಯ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ, ಸರ್ವಿಸ್ ರಸ್ತೆಯ ಕಡೆಗೆ ವಿಭಜಕ ಅಳವಡಿಸಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ವ್ಯವಸ್ಥಿತ ನಿಲುಗಡೆಗೆ ಸ್ಥಳ ನಿಗದಿಪಡಿಸುವಂತೆ ಬಿಎಂಆರ್‌ಸಿಎಲ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶನ ನೀಡಿದರು.
ರಾಜಕಾಲುವೆ ಸೇತುವೆಗಿರುವ ಮೆಟ್ಟಿಲು ತೆರವುಗೊಳಿಸಿ
ಬನ್ನೇರುಘಟ್ಟ ರಸ್ತೆಯ ರಾಯಲ್ ಓಕ್ ಶೋರೂಮ್ ಪಕ್ಕದ ರಸ್ತೆಯ ಮಾರ್ಗದಲ್ಲಿ ಬರುವ ರಾಜ ಕಾಲುವೆ ಸೇತುವೆಗೆ ಅನಧಿಕೃತ ವ್ಯಕ್ತಿಗಳು ಮೆಟ್ಟಿಲುಗಳನ್ನು ನಿರ್ಮಿಸಿದ್ದು, ಇದರಿಂದ ವಾಹನ ಸಂಚಾರಕೆ ಅಡೆ ತಡೆ ಉಂಟಾಗಿದ್ದು ಕೂಡಲೇ ತೆರವುಗೊಳಿಸಿ ಇಳಿಜಾರು ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದುವರೆದು, ಕಟ್ಟೆ ಮುನೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಖಾಲಿ ಪ್ರದೇಶದಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲು ಸೂಚನೆ ನೀಡಿದರು.
ಮೂಲ ರಾಜಕಾಲುವೆ ಮಾರ್ಗದ ಸರ್ವೇ ನಡೆಸಲು ಸೂಚನೆ
ವೈಷ್ಣವಿ ಅಪಾರ್ಟ್‌ಮೆಂಟ್ ಮತ್ತು ಕಲ್ಯಾಣಿ ಮ್ಯಾಗ್ನಮ್ ಎದುರಿನ ರಾಜಕಾಲುವೆಯನ್ನು ಆಯುಕ್ತರು ಪರಿಶೀಲಿಸಿದರು. ಸಾರಕ್ಕಿ ಕೆರೆ ಕಡೆಯಿಂದ ಬರುವ ನೀರು ಮಡಿವಾಳ ಕೆರೆಗೆ ಹರಿದು ಹೋಗುವ ಈ ಮಾರ್ಗದಲ್ಲಿ ಕಾಲುವೆಯನ್ನು ಮುಚ್ಚಿರುವುದು (ಸ್ಲ್ಯಾಬ್ ಕವರಿಂಗ್) ಹಾಗೂ ಕೃತಕ ತಿರುವು ನೀಡಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಕಂದಾಯ ಇಲಾಖೆಯ ದಾಖಲೆಗಳ ಅನುಸಾರ ರಾಜ ಕಾಲುವೆಯ ನೈಜ ಹರಿವಿನ ಜಾಗವನ್ನು (ಮೂಲ ಡ್ರೈನ್) ಸರ್ವೇ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಡೆತಡೆ ತೆರವು ಹಾಗೂ ಹೂಳೆತ್ತಲು ಕಟ್ಟುನಿಟ್ಟಿನ ಕ್ರಮ
ರಾಜಕಾಲುವೆಯ ಒಳಭಾಗದಲ್ಲಿ ಕಟ್ಟಡ ತ್ಯಾಜ್ಯ, ಘನತ್ಯಾಜ್ಯ ಸಿಲುಕಿ ತ್ಯಾಜ್ಯ ನೀರು ನಿಂತು ದುರ್ವಾಸನೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ರೇನ್‌ಬೋ ಆಸ್ಪತ್ರೆ ಹಿಂಭಾಗ ಮತ್ತು ಕಾಂಪೌಂಡ್ ಗೋಡೆ ಇರುವ ಜಾಗದಲ್ಲಿ ಹೂಳೆತ್ತುವ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳಲು ಸೂಚನೆ ನೀಡಿದರು. ರಾಜಕಾಲುವೆ ಮೇಲ್ಭಾಗದಲ್ಲಿ ಹಾಕಿರುವ ಅನಧಿಕೃತ ಸ್ಲ್ಯಾಬ್‌ಗಳು ಮತ್ತು ಅಡೆತಡೆಗಳನ್ನು ತೆರವುಗೊಳಿಸಿ, ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಪ್ರವಾಹದ ಸ್ಥಿತಿ ನಿರ್ಮಾಣವಾಗದಂತೆ ಸರಾಗ ನೀರಿನ ಹರಿವಿಗೆ ಶಾಶ್ವತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರರಾದ ಶ್ರೀ ಬಸವರಾಜ್ ಕಬಾಡೆ, ಮಾಲತಿ, EE ಗಳಾದ ರವಿ, ಹರಿಪ್ರಸಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


